ಪಟನಾ (ನ.13): ಬಿಹಾರದಲ್ಲಿ ಎನ್‌ಡಿಎ ಸರಳ ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆಯಾದರೂ ಹಾಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಮತ್ತೊಂದು ಅವಧಿಗೆ ಮುಂದುವರಿಯಲು ಮನಸ್ಸು ಮಾಡುತ್ತಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ. ಆದರೆ ಬಿಜೆಪಿ ಮುಖಂಡರು ಮನವೊಲಿಕೆ ಪ್ರಯತ್ನ ನಡೆಸಿದ್ದು, ಈ ಹಿಂದಿನ ಸರ್ಕಾರಗಳಲ್ಲಿ ಇದ್ದಷ್ಟೇ ಸ್ವಾತಂತ್ರ್ಯವನ್ನು ನೀಡುವ ಆಶ್ವಾಸನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯುಗೆ ಕೇವಲ 43 ಸ್ಥಾನಗಳು ಬಂದಿವೆ. ಕಳೆದ 15 ವರ್ಷಗಳಲ್ಲೇ ಜೆಡಿಯು ತೋರಿದ ಅತಿ ಕನಿಷ್ಠ ಸಾಧನೆ ಇದಾಗಿದೆ. ಇದರಿಂದ ತೀವ್ರ ಬೇಸರಗೊಂಡಿರುವ ನಿತೀಶ್‌ ಕುಮಾರ್‌ ಅವರು ಮತ್ತೆ ಮುಖ್ಯಮಂತ್ರಿ ಆಗಲು ಹಿಂದೇಟು ಹಾಕುತ್ತಿದ್ದಾರೆ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.

ನಿತೀಶೇ ಬಿಹಾರ ಸಿಎಂ: ನಾಯಕತ್ವ ಬದಲಾವಣೆ ಊಹಾಪೋಹಕ್ಕೆ ಬಿಜೆಪಿ ತೆರೆ! ..

‘ಅಲ್ಲದೆ, ಜೆಡಿಯು ವಿರುದ್ಧ ಸ್ಪರ್ಧಿಸಿ ಎಲ್‌ಜೆಪಿಯ ಚಿರಾಗ್‌ ಪಾಸ್ವಾನ್‌ ಅವರು ದೊಡ್ಡ ಹೊಡೆತ ಕೊಟ್ಟರು ಎಂಬುದೂ ನಿತೀಶ್‌ ಅವರ ತೀವ್ರ ಬೇಸರಕ್ಕೆ ಕಾರಣ. ಚಿರಾಗ್‌ ನಿರ್ಧಾರದಿಂದ ಜೆಡಿಯು 25-30 ಸ್ಥಾನಗಳನ್ನು ಕಳೆದುಕೊಳ್ಳಬೇಕಾಯಿತು ಎಂದು ನಿತೀಶ್‌ ಕೊರಗುತ್ತಿದ್ದಾರೆ. ಅದರೂ ನಾವು ಅವರನ್ನು ಮುಖ್ಯಮಂತ್ರಿ ಆಗುವಂತೆ ಮನವೊಲಿಸಿದ್ದೇವೆ’ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.

‘ಮೋದಿ ಅವರನ್ನು ಹೊಗಳುತ್ತಲೇ ಇದ್ದ ಚಿರಾಗ್‌, ನಿತೀಶ್‌ ವಿರುದ್ಧ ಮಾತ್ರ ಬಂಡೆದಿದ್ದರು. ಆದರೂ ಚಿರಾಗ್‌ ಅವರನ್ನು ನಿಯಂತ್ರಿಸುವ ಕೆಲಸವನ್ನು ಬಿಜೆಪಿ ಮಾಡಲಿಲ್ಲ’ ಎಂದು ಜೆಡಿಯು ಪಾಳೆಯದಲ್ಲಿ ತೀವ್ರ ಬೇಸರವಿದೆ ಎಂದು ತಿಳಿದುಬಂದಿದೆ.

ಅದಕ್ಕೇ ಜೆಡಿಯು ಜಯಿಸಿದರೂ ಮಂಗಳವಾರ ರಾತ್ರಿ ನಿತೀಶ್‌ ಯಾವುದೇ ಹೇಳಿಕೆ ನೀಡಿರಲಿಲ್ಲ. ಬುಧವಾರ ಒಂದು ಟ್ವೀಟ್‌ ಮಾಡಿ ಜನರಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.