ಪಟನಾ(ನ.12): ತೀವ್ರ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಮಿತ್ರ ಪಕ್ಷ ಜೆಡಿಯುವನ್ನು ತಾನು ಇದೇ ಮೊದಲ ಬಾರಿಗೆ ಹಿಂದಿಕ್ಕಿದ್ದರೂ ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲಿ ಗೊಂದಲವಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. ಚುನಾವಣೆಗೂ ಮೊದಲೇ ಘೋಷಿಸಿದ್ದಂತೆ ಹಾಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರೇ ಈ ಬಾರಿಯೂ ಮುಖ್ಯಮಂತ್ರಿ ಆಗುತ್ತಾರೆ ಎಂದು ತಿಳಿಸಿದೆ. ತನ್ಮೂಲಕ, ಬಿಜೆಪಿ ಹೆಚ್ಚಿನ ಸ್ಥಾನ ಗೆದ್ದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬದಲಾಗಬಹುದು ಎಂಬ ಊಹಾಪೋಹಗಳಿಗೆ ತೆರೆ ಎಳೆದಿದೆ.

ಇದೇ ವೇಳೆ, ‘ದೀಪಾವಳಿ ನಂತರ ನಿತೀಶ್‌ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ’ ಎಂದು ಜೆಡಿಯು ಮುಖಂಡ ಕೆ.ಸಿ. ತ್ಯಾಗಿ ಹೇಳಿದ್ದಾರೆ.

ಉಪಮುಖ್ಯಮಂತ್ರಿ ಸುಶೀಲ್‌ ಮೋದಿ ಮಾತನಾಡಿ, ‘ನಿತೀಶ್‌ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಇದು ನಮ್ಮ ಬದ್ಧತೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ಬಿಜೆಪಿಗಿಂತ ಜೆಡಿಯು ಕಮ್ಮಿ ಸ್ಥಾನ ಗಳಿಸಿರಬಹುದು. ಆದರೆ ನಾವೆಲ್ಲ ಒಟ್ಟಾಗಿ ಚುನಾವಣೆ ಎದುರಿಸಿದ್ದೇವೆ. ಇದರಲ್ಲಿ ಹೆಚ್ಚು-ಕಮ್ಮಿ ಎಂಬ ಪ್ರಶ್ನೆ ಬರುವುದಿಲ್ಲ. ಎಲ್ಲರೂ ಸಮಾನರು’ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಬಿಜೆಪಿ ಅಧ್ಯಕ್ಷ ರಾಕೇಶ್‌ ಜೈಸ್ವಾಲ್‌ ಪ್ರತಿಕ್ರಿಯಿಸಿ, ‘100ಕ್ಕೆ 100ರಷ್ಟುನಿತೀಶ್‌ ಕುಮಾರ್‌ ಅವರೇ ಮುಂದಿನ ಮುಖ್ಯಮಂತ್ರಿ. ಜೆಡಿಯು-ಬಿಜೆಪಿ ನಡುವಿನ ಸ್ಥಾನಗಳ ಅಂತರ ಇಲ್ಲಿ ನಗಣ್ಯ. ನಾವೆಲ್ಲರೂ ಸಮಾನರು’ ಎಂದು ಹೇಳಿದರು. ಆದರೆ ‘ಎನ್‌ಡಿಎ ಜಯಕ್ಕೆ ಮೋದಿ ಕಾರಣ’ ಎಂಬ ಹೇಳಿಕೆಯನ್ನೂ ಜೈಸ್ವಾಲ್‌ ನೀಡಿದರು.

ಹಮ್‌ ನೇತಾರ ಜೀತನ್‌ರಾಮ್‌ ಮಾಂಝಿ ಕೂಡ ‘ನಿತೀಶ್‌ ನಾಯಕತ್ವದಲ್ಲಿ ನಾವು ಗೆದ್ದಿದ್ದೇವೆ. ಅವರ ನಾಯಕತ್ವಕ್ಕೆ ಬಿಜೆಪಿ ಕೂಡ ಒಪ್ಪಿದೆ’ ಎಂದರು.

ಇದೇ ವೇಳೆ, ‘ನಿತೀಶ್‌ ಅವರು ಬಿಹಾರ ಬಿಟ್ಟು ರಾಷ್ಟ್ರ ರಾಜಕಾರಣಕ್ಕೆ ಬರಬೇಕು. ಜಾತ್ಯತೀತ ಶಕ್ತಿಗಳ ಜತೆ ಕೈಜೋಡಿಸಬೇಕು’ ಎಂದು ಕಾಂಗ್ರೆಸ್‌ ಮುಖಂಡ ದಿಗ್ವಿಜಯ ಸಿಂಗ್‌ ಮನವಿ ಮಾಡಿದ್ದಾರೆ. ಇದಕ್ಕೆ ಬಿಜೆಪಿ ಮುಖಂಡ ಗಿರಿರಾಜ್‌ ಸಿಂಗ್‌ ಪ್ರತಿಕ್ರಿಯಿಸಿ, ‘ದಿಗ್ವಿಜಯ ಅವರು ಮೊದಲು ಮಧ್ಯಪ್ರದೇಶದತ್ತ ಗಮನಹರಿಸಲಿ’ ಎಂದು ತಿರುಗೇಟು ನೀಡಿದ್ದಾರೆ.

ಚುನಾವಣೆಯಲ್ಲಿ ಜೆಡಿಯುಗಿಂತ ಬಿಜೆಪಿಯೇ ಹೆಚ್ಚು ಸ್ಥಾನ ಗೆದ್ದಿರುವ ಹಿನ್ನೆಲೆಯಲ್ಲಿ ನಿತೀಶ್‌ರನ್ನು ಬದಿಗೆ ಸರಿಸಿ ಬಿಜೆಪಿಯವರು ಮುಖ್ಯಮಂತ್ರಿ ಆಗಬಹುದು ಎಂಬ ಊಹಾಪೋಹಗಳು ಹರಡಿದ್ದವು.