26 ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಅಧ್ಯಕ್ಷೆಯಾಗಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಮತ್ತು ಸಂಚಾಲಕರಾಗಿ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇಮಕಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.  

ನವದೆಹಲಿ (ಆ.7): 26 ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಅಧ್ಯಕ್ಷೆಯಾಗಿ ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಸಂಚಾಲಕರಾಗಿ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ನೇಮಕಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಕೂಟದ ಎಲ್ಲ ನಾಯಕರು ಇವರಿಬ್ಬರ ನಾಯಕತ್ವಕ್ಕೆ ಅನುಮೋದನೆ ನೀಡಿದ್ದು, ಮುಂಬೈಯಲ್ಲಿ ನಡೆಯಲಿರುವ ಮುಂದಿನ ‘ಇಂಡಿಯಾ’ ಸಭೆಯಲ್ಲಿ ಔಪಚಾರಿಕವಾಗಿ ಈ ನೇಮಕದ ಘೋಷಣೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಸೋನಿಯಾ ಅವರೇ ಮೈತ್ರಿಕೂಟದ ಅಧ್ಯಕ್ಷರಾಗಬೇಕು ಎಂದು ಕಾಂಗ್ರೆಸ್‌ ನಾಯಕರು ಬಯಸಿದ್ದಾರೆ. ಇನ್ನು ಸೋನಿಯಾ ಅವರ ಅಂತಿಮ ಒಪ್ಪಿಗೆಯಷ್ಟೇ ಬಾಕಿ ಎನ್ನಲಾಗಿದೆ.

I.N.D.I.A ಒಕ್ಕೂಟಕ್ಕೆ ಶಾಕ್: ಲಾಲೂ ಯಾದವ್‌, ಕುಟುಂಬಸ್ಥರ 6 ಕೋಟಿ ರೂ. ಮೌಲ್ಯದ ಆಸ್ತಿ ಸೀಜ್‌!

ಸೋನಿಯಾ ಏಕೆ?: ಹಾಲಿ ಬಹುತೇಕ ಪಕ್ಷಗಳಿಗೆ ಸೋನಿಯಾ ಸಮ್ಮತದ ನಾಯಕಿ. ಎಲ್ಲರನ್ನು ಒಗ್ಗೂಡಿಸಿ ಕೊಂಡೊಯ್ಯುವ ಸಾಮರ್ಥ್ಯ ಅವರಲ್ಲಿದೆ. ಜೊತೆಗೆ ಇತ್ತೀಚಿನ ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಕಾಂಗ್ರೆಸ್‌ ಪರವಾಗಿ ಬಂದಿರುವುದು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸೋಲಿನ ಹೊರತಾಗಿಯೂ ಈಗಲೂ ಕಾಂಗ್ರೆಸ್‌ ಪಕ್ಷವೇ ಮುಂಚೂಣಿ ವಿಪಕ್ಷವಾಗಿರುವ ಕಾರಣ ಸೋನಿಯಾಗೆ ಮೈತ್ರಿಕೂಟದ ನಾಯಕತ್ವ ವಹಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಇನ್ನು ನಿತೀಶ್‌ ಕುಮಾರ್‌ ಕೂಡ ಮೈತ್ರಿಯಲ್ಲಿರುವ ಆಡಳಿತ ಅನುಭವಿ ನಾಯಕರಾಗಿದ್ದಾರೆ. ಈ ಮೈತ್ರಿಕೂಟ ರಚನೆಯಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಪರಸ್ಪರ ಕಚ್ಚಾಡಿಕೊಂಡಿದ್ದ ಹಲವು ಪಕ್ಷಗಳು ಒಂದೇ ವೇದಿಕೆಗೆ ತಂದಿದ್ದು ನಿತೀಶ್‌. ಹೀಗಾಗಿ ಅವರಿಗೆ ಮನ್ನಣೆ ನೀಡಲು ಮತ್ತು ಮೈತ್ರಿಕೂಟವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವ ಸಲುವಾಗಿ ಅವರಿಗೆ ಸಂಚಾಲಕ ಹುದ್ದೆ ನೀಡಲಾಗಿದೆ ಎನ್ನಲಾಗಿದೆ.

'I.N.D.I.A' ಹೆಸರಿಟ್ಟುಕೊಂಡ ವಿಪಕ್ಷಗಳ ಒಕ್ಕೂಟಕ್ಕೆ ಶಾಕ್​: ಒಕ್ಕೂಟದ 26 ಪಕ್ಷಗಳಿಗೂ ಹೈಕೋರ್ಟ್‌ ನೋಟಿಸ್‌

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಮಣಿಸಿ ಗೆಲುವು ಸಾಧಿಸಲು 26 ವಿಪಕ್ಷಗಳು ರಚಿಸಿಕೊಂಡಿರುವ ‘ಇಂಡಿಯಾ’ ಮೈತ್ರಿಕೂಟದ 2 ಸಭೆಗಳು ನಡೆದಿದ್ದು ಆ.31 ಮತ್ತು ಸೆ.1 ರಂದು ಮುಂಬೈಯಲ್ಲಿ ಮೂರನೇ ಸಭೆ ನಡೆಯಲಿದೆ. ಮೊದಲ ಸಭೆ ಪಟನಾ ಮತ್ತು ಎರಡನೇಯದು ಬೆಂಗಳೂರಿನಲ್ಲಿ ನಡೆದಿದೆ. ಮುಂದಿನ ಸಭೆ ಮುಂಬೈನಲ್ಲಿ ಆ.31, ಸೆ.1ರಂದು ನಡೆಯಲಿದೆ. ಈ ಸಭೆಯ ಆತಿಥ್ಯವನ್ನು ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ ಬಣ ವಹಿಸಿಕೊಂಡಿದ್ದು ನಗರದ ಗ್ರ್ಯಾಂಡ್‌ ಹಯಾತ್‌ನಲ್ಲಿ ಸಭೆ ಆಯೋಜಿಸಲಾಗಿದೆ ಎಂದು ಶಿವಸೇನೆ ತಿಳಿಸಿದೆ.

ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಮಣಿಸುವ ಉದ್ದೇಶದಿಂದ 26 ವಿಪಕ್ಷಗಳು ‘ಇಂಡಿಯಾ’ (ಇಂಡಿಯನ್‌ ನ್ಯಾಷನಲ್‌ ಡೆವಲಪ್‌ಮೆಂಟಲ್‌ ಇನ್‌ಕ್ಲೂಸಿವ್‌ ಅಲಯನ್ಸ್‌) ಎಂಬ ಮೈತ್ರಿಕೂಟ ರಚಿಸಿಕೊಂಡಿವೆ. ಬಿಹಾರದ ಪಟನಾದಲ್ಲಿ ಮತ್ತು ಕರ್ನಾಟಕದ ಬೆಂಗಳೂರಿನಲ್ಲಿ ಇಂಡಿಯಾದ ಮೊದಲ ಹಾಗೂ ಎರಡನೇ ಸಭೆ ನಡೆದಿತ್ತು.

ಈಗ ರಾಹುಲ್‌ ಗಾಂಧಿ ಅವರಿಗೆ ನೀಡಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಚ್‌ ತಡೆ ನೀಡಿರುವ ಕಾರಣ, ಈ ಸಭೆಗೆ ಬೇರೆಯದ್ದೇ ಕಳೆ ಬರುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ ಹೇಳಿದೆ. ಈ ನಡುವೆ ಮುಂಬೈ ಸಭೆಗೆ ಬರುವ ಗಣ್ಯರಿಗೆ ಭದ್ರತೆ ಒದಗಿಸುವ ವಿಚಾರವಾಗಿ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಲಾಗುವುದು. ಐವರು ಮುಖ್ಯಮಂತ್ರಿಗಳು ಸೇರಿದಂತೆ ಸಭೆಗೆ ಬರುವ ವಿಪಕ್ಷ ನಾಯಕರಿಗೆ ಉದ್ಧವ್‌ ಠಾಕ್ರೆ ಅವರು ಸೆ.31 ರಂದು ವಿಶೇಷ ಔತಣವನ್ನು ಏರ್ಪಡಿಸಲಿದ್ದಾರೆ ಎಂದು ಶಿವಸೇನೆ ನಾಯಕ ಸಂಜಯ್‌ ರಾವುತ್‌ ತಿಳಿಸಿದ್ದಾರೆ.