ನವದೆಹಲಿ [ಡಿ.04]:  ಹಲವು ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಭಾರತದಿಂದ ದಕ್ಷಿಣ ಅಮೆರಿಕ ಖಂಡದ ಈಕ್ವೆಡಾರ್‌ಗೆ ಪರಾರಿಯಾಗಿರುವ ಕರ್ನಾಟಕದ ಬಿಡದಿ ಬಳಿಯ ಧ್ಯಾನಪೀಠದ ವಿವಾದಿತ ಪೀಠಾಧಿಪತಿ ನಿತ್ಯಾನಂದ, ಈಗ ಈಕ್ವೆಡಾರ್‌ನಲ್ಲಿ ಖಾಸಗಿ ದ್ವೀಪವೊಂದನ್ನು ಖರೀದಿಸಿದ್ದಾನೆ. ಆ ದ್ವೀಪವನ್ನು ‘ಪ್ರತ್ಯೇಕ ರಾಷ್ಟ್ರ’ ಎಂದು ಘೋಷಿಸಿರುವ ಆತ, ಅದಕ್ಕೆ ‘ಕೈಲಾಸ’ ಎಂದು ನಾಮಕರಣ ಮಾಡಿದ್ದಾನೆ. ‘ಕೈಲಾಸ’ಕ್ಕೆ ‘ದೇಶ’ ಎಂಬ ಮಾನ್ಯತೆ ನೀಡಬೇಕು ಎಂದು ವಿಶ್ವಸಂಸ್ಥೆಗೆ ಅರ್ಜಿಯನ್ನೂ ಸಲ್ಲಿಸಲು ಯತ್ನಿಸುತ್ತಿದ್ದಾನೆ.

"

ಸಾಲದ್ದಕ್ಕೆ, ಈ ‘ಕೈಲಾಸ ದೇಶ’ಕ್ಕೆ ಧ್ವಜ ಹಾಗೂ ಲಾಂಛನವನ್ನೂ ರೂಪಿಸಿರುವ ಆತ, ಪಾಸ್‌ಪೋರ್ಟ್‌ಗಳನ್ನೂ ಬಿಡುಗಡೆ ಮಾಡಿದ್ದಾನೆ ಎಂದು ‘ರಿಪಬ್ಲಿಕ್‌ ಟೀವಿ’ ಸುದ್ದಿವಾಹಿನಿ ಮಂಗಳವಾರ ವರದಿ ಮಾಡಿದೆ.

ಕೈಲಾಸಕ್ಕೆ ತನ್ನ ಭಕ್ತರೊಬ್ಬರನ್ನು ‘ಪ್ರಧಾನಿ’ ಎಂದು ನೇಮಿಸಿರುವ ನಿತ್ಯಾನಂದ ಸಚಿವ ಸಂಪುಟವನ್ನೂ ರಚಿಸಿದ್ದಾನೆ. ಪ್ರತಿನಿತ್ಯ ನಿತ್ಯಾನಂದನು ಸಂಪುಟ ಸಭೆ ನಡೆಸುತ್ತಾನೆ ಎಂಬ ಕುತೂಹಲದ ಸಂಗತಿಯೂ ವರದಿಯಲ್ಲಿದೆ. ತನ್ನದು ‘ಗ್ರೇಟ್‌ ಹಿಂದೂ ದೇಶ’ ಎಂದು ಕರೆದುಕೊಂಡಿರುವ ಆತ ನಾಗರಿಕತ್ವ ಪಡೆಯಿರಿ ಎಂದು ಹಿಂದೂಗಳಿಗೆ ಕೋರಿದ್ದಾನೆ.

ಹಿಂದೂ ಸಾರ್ವಭೌಮ ದೇಶವಂತೆ:

ವೆಸ್ಟ್‌ಇಂಡೀಸ್‌ನ ಟ್ರಿನಿಡಾಡ್‌ ಹಾಗೂ ಟೊಬ್ಯಾಗೋ ಸಮೀಪ ಇರುವ ‘ಕೈಲಾಸ’ವು ಹಿಂದೂ ಸಾರ್ವಭೌಮ ದೇಶ ಎಂದು ನಿತ್ಯಾನಂದ ಘೋಷಿಸಿಕೊಂಡಿದ್ದಾನೆ. ‘ನಮ್ಮ ದೇಶಕ್ಕೆ ದೇಣಿಗೆ ಕೊಡಿ. ಇದರ ಮೂಲಕ ನಮ್ಮ ದೇಶದ ಪೌರತ್ವವನ್ನೂ ಪಡೆಯಿರಿ’ ಎಂಬ ಆಫರ್‌ ನೀಡಲಾಗಿದೆ.

ಪಾಸ್‌ಪೋರ್ಟ್‌, ಧ್ವಜ:

2 ಥರದ ಪಾಸ್‌ಪೋರ್ಟ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಇದರ ಮೇಲೆ ‘ಕೈಲಾಸ’ ಎಂದು ಬರೆಯಲಾಗಿದೆ. ಒಂದು ಪಾಸ್‌ಪೋರ್ಟ್‌ ಬಂಗಾರದ ಬಣ್ಣದ್ದಾಗಿದ್ದರೆ, ಇನ್ನೊಂದು ಕೆಂಪು ಬಣ್ಣದ್ದು. ಇದರ ಮೇಲೆ ನಿತ್ಯಾನಂದ ಧ್ಯಾನಾಸಕ್ತನಾದ ಚಿತ್ರವಿದೆ.

ಇನ್ನು ಧ್ವಜವು ಕೆಂಪು ಬಣ್ಣದ್ದಾಗಿದೆ. ಇದರ ಮೇಲೆ ನಿತ್ಯಾನಂದನು ಸಿಂಹಾಸನದ ಮೇಲೆ ನಗುತ್ತಾ ಕುಳಿತಿರುವ ಹಾಗೂ ಆತನ ಮುಂದೆ ನಂದಿ ಕುಳಿತಿರುವ ಚಿತ್ರವಿದೆ. ಗಡಿಯಿಲ್ಲದ ಈ ದೇಶದಲ್ಲಿ, ಯಾವುದೇ ದೇಶದಿಂದ ಹೊರಹಾಕಲ್ಪಟ್ಟಿರುವ ಹಿಂದೂಗಳು ಬಂದು ನೆಲೆಸಬಹುದು ಎಂದು ಆಹ್ವಾನ ನೀಡಲಾಗಿದೆ.

ಸಂಪುಟ ರಚನೆ, ‘ಮಾ’ ಪ್ರಧಾನಿ:

ನಿತ್ಯಾನಂದ ‘ಮಾ’ ಹೆಸರಿನ ತನ್ನ ಭಕ್ತರೊಬ್ಬರನ್ನು ಪ್ರಧಾನಿ ಎಂದು ನೇಮಿಸಿದ್ದಾನೆ. ಸಚಿವ ಸಂಪುಟವನ್ನೂ ರಚಿಸಿದ್ದಾನೆ. ನಿತ್ಯ ಆತ ಸಂಪುಟ ಸಭೆ ನಡೆಸುತ್ತಾನೆ ಎಂದು ವೆಬ್‌ಸೈಟ್‌ ಹೇಳಿದೆ. ಸರ್ಕಾರದಲ್ಲಿ 10 ಇಲಾಖೆಗಳಿವೆ. ಅಂತಾರಾಷ್ಟ್ರೀಯ ವ್ಯವಹಾರ, ಡಿಜಿಟಲ್‌ ವ್ಯವಹಾರ-ಸೋಷಿಯಲ್‌ ಮೀಡಿಯಾ, ಗೃಹ, ರಕ್ಷಣೆ, ವಾಣಿಜ್ಯ ಹಾಗೂ ಶಿಕ್ಷಣ ಇಲಾಖೆಯೂ ಇದರಲ್ಲಿ ಉಂಟು ವರದಿಯಲ್ಲಿ ವಾಹಿನಿ ವಿವರಿಸಿದೆ.

ದೇಶ ಮನ್ನಣೆಗೆ ವಿಶ್ವಸಂಸ್ಥೆಗೆ ಪತ್ರ:

‘ಕೈಲಾಸ’ ದೇಶಕ್ಕೆ ಮನ್ನಣೆ ನೀಡಬೇಕು ಎಂದು ನಿತ್ಯಾನಂದನ ಕಾನೂನು ತಂಡ ವಿಶ್ವಸಂಸ್ಥೆಗೆ ಮನವಿ ಸಲ್ಲಿಸಲು ಉದ್ದೇಶಿಸಿದ್ದು, ಆ ಪತ್ರ ಈಗಾಗಲೇ ಸಿದ್ಧವಾಗಿದೆ. ‘ಭಾರತದಲ್ಲಿ ನನ್ನನ್ನು ಬಲಿಪಶು ಮಾಡಲಾಗಿದೆ. ನಾನು ಹಿಂದೂ ಧರ್ಮದ ಪರ ಪ್ರಚಾರದಲ್ಲಿ ತೊಡಗಿರುವ ಕಾರಣ ನನ್ನ ಜೀವಕ್ಕೆ ಅಲ್ಲಿ ಅಪಾಯವಿದೆ’ ಎಂದು ನಿತ್ಯಾನಂದ ಹೇಳುವ ರೀತಿ ಪತ್ರದಲ್ಲಿ ಬರೆಯಲಾಗಿದೆ.

ಯಾವುದಿದು ದ್ವೀಪ?:

ಈ ಮುನ್ನ ವ್ಲಾಡಿ ಎಂಬುವರ ವಶದಲ್ಲಿ ಈ ದ್ವೀಪ ಇತ್ತು. ವ್ಲಾಡಿಯಿಂದ ನಿತ್ಯಾನಂದ ಈ ದ್ವೀಪ ಖರೀಸಿದ್ದಾನೆ. ಇದಕ್ಕೆ ಸಾರ್ವಭೌಮ ಸ್ಥಾನಮಾನವಿದ್ದು, ಖಾಸಗಿ ದ್ವೀಪವಾಗಿದೆ ಎಂದು ಹೇಳಲಾಗಿದೆ.