ನವದೆಹಲಿ[ಫೆ.12]: ನಿರ್ಭಯಾ ಹಂತಕರು ಗಲ್ಲು ಶಿಕ್ಷೆ ಮುಂದೂಡಲು ನಾನಾ ಮಾರ್ಗಗಳನ್ನು ಹುಡುಕಲಾರಂಭಿಸಿದ್ದಾರೆ. ವಾದಿಸುವ ಹಕ್ಕು ಇದೆ ಎನ್ನುವುದನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ನಿರ್ಭಯಾ ದೋಷಿಗಳು, ಅದನ್ನು ದುರುಪಯೋಗಪಡಿಸಿಕೊಂಡು ಪೀಕಲಾಟವಾಡುತ್ತಿದ್ದಾರೆ. ಅತ್ತ ಒಬ್ಬರಾದ ಬಳಿಕ ಮತ್ತೊಬ್ಬ ಕಾನೂನಿನ ದಾಳ ಪ್ರಯೋಗಿಸಿ ಆಟ ಮುಂದುವರೆಸಿದ್ದರೆ, ಇತ್ತ ಮಗಳಿಗೆ ನ್ಯಾಯ ಕೊಡಿಸಲು ಕಳೆದ 7 ವರ್ಷಗಳಿಂದ ನ್ಯಾಯಾಲಯಕ್ಕೆ ಅಲೆಯುತ್ತಿರುವ ನಿರ್ಭಯಾ ತಾಯಿ ಕಣ್ಣೀರಿಟ್ಟಿದ್ದಾರೆ.

ಹೌದು ದೋಷಿಗಳಲ್ಲೊಬ್ಬನಾದ ವಿನಯ್ ಶರ್ಮಾ ರಾಷ್ಟ್ರಪತಿಗೆ ಸಲ್ಲಿಸಿರುವ ಕ್ಷಮಾದಾನ ಅರ್ಜಿ ತಿರಸ್ಕೃತಗೊಂಡಿತ್ತು. ಆದರೆ ಸುಮ್ಮನಾಗದ ವಿನಯ್ ಮತ್ತೆ ಈ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿಗಳ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ್ದಾರೆ. ಹೀಗಿರುವಾಗ ನಿರ್ಭಯಾ ತಾಯಿ ನಾಲ್ವರೂ ದೋಷಿಗಳಿಗೆ ಡೆತ್ ವಾರಂಟ್ ಹೊರಡಿಸಬೇಕೆಂದು ಕೋರಿ ದೆಹಲಿ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಈ ವಿಚಾರಣೆ ವೇಳೆ ಗದ್ಗದಿತರಾದ ನಿರ್ಭಯಾ ತಾಯಿ ಕಳೆದ 7 ವರ್ಷಗಳಿಂದ ನಾನು ನ್ಯಾಯಕ್ಕಾಗಿ ಅಲೆಯುತ್ತಿದ್ದೇನೆ. ಆದರೆ ದೋಷಿಗಳು ಗಲ್ಲು ಮುಂದೂಡಲು ಯತ್ನಿಸುತ್ತಿದ್ದಾರೆ ಎಂದಿದ್ದಾರೆ.

ಆದರೆ ವಾದ ಪ್ರತಿವಾದಗಳನ್ನಾಲಿಸಿದ ನ್ಯಾಯಾಲಯ ಈ ಅರ್ಜಿ ವಿಚಾರಣೆಯನ್ನು ಮುಂದೂಡಿದೆ. ನ್ಯಾಯಾಲಯದ ಈ ಆದೇಶದಿಂದ ಬೇಸತ್ತ ನಿರ್ಭಯಾ ತಾಯಿ ನಾನು ನ್ಯಾಯಾಲಯದ ಮೇಲಿದ್ದ ಭರವಸೆ ಕಳೆದುಕೊಳ್ಳುತ್ತಿದ್ದೇನೆ ಎಂದು ಹೇಳಿ ಹೊರ ನಡೆದಿದ್ದಾರೆ.

ಅಲ್ಲದೇ ಹಲವಾರು ವರ್ಷಗಳು ಉರುಳಿದರೂ ಮಗಳಿಗೆ ನ್ಯಾಯ ಸಿಗದಿರುವುದರಿಂದ ರೋಸಿ ಹೋಗಿರುವ ನಿರ್ಭಯಾ ತಾಯಿ ಪಟಿಯಾಲಾ ಹೌಸ್ ಕೋರ್ಟ್ ಹೊರಭಾಗದಲ್ಲಿ ನ್ಯಾಯ ಒದಗಿಸುವಂತೆ ಪ್ರತಿಭಟನೆ ಆರಂಭಿಸಿದ್ದಾರೆ.