ನವದೆಹಲಿ[ಜ.18]: ‘ನಾನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವುದಾಗಿ ಹರಡಿರುವ ಸುದ್ದಿಗಳು ಕೇವಲ ವದಂತಿ’ ಎಂದು ‘ನಿರ್ಭಯಾ’ ತಾಯಿ ಆಶಾದೇವಿ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ ಪತ್ರಕರ್ತರೊಬ್ಬರು, ‘ನಿರ್ಭಯಾ ತಾಯಿಯು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕೇಜ್ರಿವಾಲ್‌ ವಿರುದ್ಧ ಸ್ಪರ್ಧಿಸುವ ಸಾಧ್ಯತೆ ಇದೆ’ ಎಂದು ಟ್ವೀಟ್‌ ಮಾಡಿದ್ದರು. ಇದಕ್ಕೆ ಕಾಂಗ್ರೆಸ್‌ ಮುಖಂಡ ಕೀರ್ತಿ ಆಜಾದ್‌ ಪತಿಕ್ರಿಯಿಸಿ, ‘ಸ್ವಾಗತ’ ಎಂದು ಟ್ವೀಟ್‌ ಮಾಡಿದ್ದರು.

ಆದರೆ ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಆಶಾದೇವಿ, ‘ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಕೇಜ್ರಿವಾಲ್‌ ವಿರುದ್ಧ ಸ್ಪರ್ಧೆ ಎಂಬುದು ಬರೀ ವದಂತಿ. ಯಾವುದೇ ಪಕ್ಷ ನನಗೆ ಸ್ಪರ್ಧಿಸುವ ಆಹ್ವಾನ ನೀಡಿದರೂ ನಾನು ಸ್ಪರ್ಧಿಸಲ್ಲ. ಕಾಂಗ್ರೆಸ್‌ನ ಯಾರೂ ನನ್ನ ಜತೆ ಸಂಪರ್ಕದಲ್ಲಿಲ್ಲ’ ಎಂದಿದ್ದಾರೆ.