ನವದೆಹಲಿ[ಮಾ.17]: ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ದೋಷಿಗಳೆದುರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಇದ್ದ ಎಲ್ಲಾ ಕಾನೂನಾತ್ಮಕ ಹಾದಿಗಳು ಮುಕ್ತಾಯಗೊಂಡಿವೆ. ಹೀಗಿರುವಾಗ ಅಪರಾಧಿಗಳಿಗೆ ಮಾರ್ಚ್ 20 ರಂದು ಗಲ್ಲಿಗೇರಿಸುವುದು ಖಚಿತವಾಗಿತ್ತು. ಆದರೀಗ ಅಪರಾಧಿಗಳಲ್ಲೊಬ್ಬನಾದ ಅಕ್ಷಯ್ ಠಾಕೂರ್ ಹೆಂಡತಿ, ತನ್ನ ಪತಿರಾಯನನ್ನು ಉಳಿಸಿಕೊಳ್ಳಲು ಹೊಸ ಬಾಣ ಎಸೆದಿದ್ದಾರೆ. ಏನದು?

ಹೌದು ಅಪರಾಧಿಗಳ ಬಳಿ ಇದ್ದೆಲ್ಲಾ ಹಾದಿಗಳು ಮುಚ್ಚಿದ್ದ ಬೆನ್ನಲ್ಲೇ ನಿರ್ಭಯಾ ಅಪರಾಧಿ ಅಕ್ಷಯ್ ಠಾಕೂರ್ ಹೆಂಡತಿ ಪುನೀತಾ ಹೊಸ ಆಟ ಆರಂಭಿಸಿದ್ದಾರೆ. ಪುನೀತಾ ಔರಂಗಬಾದ್ ನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ 'ನನ್ನ ಪತಿಯನ್ನು ಅತ್ಯಾಚಾರ ಪ್ರಕರಣದ ಅಪರಾಧಿ ಎಂದು ತೀರ್ಪು ಬಂದಿದ್ದು, ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಆದರೆ ಅವರು ನಿರ್ದೋಷಿ ಹೀಗಿರುವಾಗ. ನನಗೆ ವಿಧವೆಯಾಗಿ ಉಳಿಯಲು ಇಷ್ಟವಿಲ್ಲ ಎಂದಿದ್ದಾರೆ.

ಅಕ್ಷಯ್ ಪತ್ನಿಯ ಕಾನೂನು ದಾಳ?

ಅಕ್ಷಯ್ ಪತ್ನಿ ಪರ ವಕೀಲ ಮುಕೇಶ್ ಕುಮಾರ್ ಸಿಂಗ್ ಈ ಕುರಿತು ಪ್ರತಿಕ್ರಿಯಿಸುತ್ತಾ 'ಹಿಂದೂ ವಿವಾಹ ಅಧಿನಿಯಮ 13[2][11] ಅನ್ವಯ ಕೆಲ ವಿಶೇಷ ಪ್ರಕರಣಗಳಲ್ಲಿ ವಿಚ್ಛೇದನ ಪಡೆಯುವ ಅಧಿಕಾರವಿದೆ. ಇದರಲ್ಲಿ ಅತ್ಯಾಚಾರ ಕೂಡಾ ಶಾಮೀಲಾಗಿದೆ. ಒಂದು ವೇಳೆ ಮಹಿಳೆಯ ಪತಿ ಅತ್ಯಾಚಾರ ಪ್ರಕರಣದ ದೋಷಿಯಾಗಿದ್ದರೆ, ಆಕೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು. ಕಾನೂನು ತಜ್ಞರು ಇದನ್ನೊಂದು ತಂತ್ರದಂತೆ ಪರಿಗಣಿಸುತ್ತಿದ್ದಾರೆ. ಈ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಅಕ್ಷಯ್ ಕುಮಾರ್ ಗೆ ನೋಟೀಸ್ ನೀಡಬಹುದು' ಎಂದಿದ್ದಾರೆ.

ನಿರ್ಭಯಾ ಅಪರಾಧಿಗಳಿಗೆ ಗಲ್ಲಿಗೇರಿಸಲು ಡೆತ್ ವಾರಂಟ್ ಜಾರಿಯಾಗಿದ್ದು, ಇದರ ಅನ್ವಯ ಮಾರ್ಚ್ 20ರಂದು ಗಲ್ಲು ಶಿಕ್ಷೆಯಾಗಲಿದೆ. ಹೀಗಿರುವಾಗ ಅಕ್ಷಯ್ ಠಾಕೂರ್ ಹೆಂಡತಿ ಸಲ್ಲಿಸಿರುವ ಈ ಅರ್ಜಿಯಿಂದ ಗಲ್ಲು ಶಿಕ್ಷೆ ಮತ್ತೆ ಮುಂದಕ್ಕೋಗುತ್ತಾ ಕಾದು ನೋಡಬೇಕಷ್ಟೇ