ಮುಂಬೈ[ನ.26]: ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಅವರು ಈ ಹಿಂದೆ ಮಹಾರಾಷ್ಟ್ರದ ಕಾಂಗ್ರೆಸ್‌-ಎನ್‌ಸಿಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದಾಗ ನಡೆದಿದ್ದವು ಎನ್ನಲಾದ ನೀರಾವರಿ ಹಗರಣದ 9 ಪ್ರಕರಣಗಳ ತನಿಖೆಯನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕೈಬಿಟ್ಟಿದೆ. ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಅಜಿತ್‌ ಪವಾರ್‌ ಪ್ರಮಾಣವಚನ ಸ್ವೀಕರಿಸಿದ ಎರಡೇ ದಿನಗಳಲ್ಲಿ ಈ ವಿದ್ಯಮಾನ ನಡೆದಿದೆ.

ಹಗರಣಗಳ ಸರದಾರ 'ಮಹಾ' ಸರ್ಕಾರದ 'ಕಿಂಗ್ ಮೇಕರ್' ಅಜಿತ್ ಪವಾರ್!

ಮೊದಲು ಇವು ಅಜಿತ್‌ ಪವಾರ್‌ ಅವರು ಆರೋಪಿಯಾಗಿದ್ದ ಪ್ರಕರಣಗಳು ಎಂದು ಮಾಧ್ಯಮಗಳಲ್ಲಿ ವರದಿಯಾಗಿ ವಿವಾದಕ್ಕೆ ಕಾರಣವಾಗಿತ್ತು ಹಾಗೂ ಕಾಂಗ್ರೆಸ್‌ ಕೂಡ ಈ ನಿರ್ಧಾರ ಟೀಕಿಸಿತ್ತು. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಎಸಿಬಿ, ‘ತನಿಖೆ ನಿಲ್ಲಿಸುತ್ತಿರುವ 9 ಪ್ರಕರಣಗಳಲ್ಲೂ ಅಜಿತ್‌ ಪವಾರ್‌ ಆರೋಪಿ ಆಗಿರಲಿಲ್ಲ. 2013ರಲ್ಲಿ ದಾಖಲಾಗಿದ್ದ ಅಜಿತ್‌ ಪವಾರ್‌ ಅವರಿಗೆ ಸಂಬಂಧಿಸಿದ ನೀರಾವರಿ ಹಗರಣದ ಯಾವುದೇ ಪ್ರಕರಣಗಳ ತನಿಖೆಯನ್ನು ಮುಕ್ತಾಯಗೊಳಿಸುತ್ತಿಲ್ಲ’ ಎಂದು ಎಸಿಬಿ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ಸ್ಪಷ್ಟನೆ ನೀಡಿದ್ದಾರೆ.

ಇದಲ್ಲದೆ, ‘ಈಗ 9 ಪ್ರಕರಣಗಳ ತನಿಖೆಯನ್ನು ನಿಲ್ಲಿಸಲಾಗುತ್ತಿರುವುದೂ ಷರತ್ತಿಗೆ ಒಳಪಡಲಿದೆ. ಕೋರ್ಟು ಮತ್ತೆ ತನಿಖೆ ನಡೆಸಿ ಎಂದು ಆದೇಶಿಸಿದರೆ ಮತ್ತೆ ತನಿಖೆ ಮಾಡಬೇಕಾಗುತ್ತದೆ. 3 ತಿಂಗಳ ಹಿಂದೆಯೇ ಇವುಗಳ ತನಿಖೆ ಮುಕ್ತಾಯಕ್ಕೆ ಶಿಫಾರಸು ಮಾಡಲಾಗಿತ್ತು. ಈಗ ಆದೇಶ ಹೊರಬಿದ್ದಿದೆಯಷ್ಟೇ’ ಎಂದು ಅವರು ಹೇಳಿದ್ದಾರೆ.

‘ನೀರಾವರಿಯ 3 ಸಾವಿರ ಗುತ್ತಿಗೆಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. 9 ಪ್ರಕರಣಗಳ ತನಿಖೆ ಹೊರತುಪಡಿಸಿ ಮಿಕ್ಕೆಲ್ಲ ಪ್ರಕರಣಗಳ ತನಿಖೆ ಮುಂದುವರಿದಿವೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ನಡುವೆ, ‘24 ಪ್ರಕರಣಗಳಲ್ಲಿ ಅಜಿತ್‌ ಪವಾರ್‌ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದ್ದು, ತನಿಖೆ ಮುಂದುವರಿದಿದೆ’ ಎಂದು ಎಸಿಬಿ ಅಧಿಕಾರಿಯೊಬ್ಬರು ಹೇಳಿದ್ದಾಗಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಅಜಿತ್ ಸೆಳೆದುಕೊಂಡ ಬಿಜೆಪಿ ಎದುರಿದೆ 'ಕಳಂಕ' ಅಳಿಸುವ ಹೊಣೆ!

ಕಾಂಗ್ರೆಸ್‌ ಟೀಕೆ:

ನೀರಾವರಿ ಹಗರಣದ 9 ಪ್ರಕರಣಗಳ ತನಿಖೆ ಮುಕ್ತಾಯ ಪ್ರಶ್ನಿಸಿರುವ ಕಾಂಗ್ರೆಸ್‌, ‘ಬಿಜೆಪಿ-ಅಜಿತ್‌ ಪವಾರ್‌ ಸರ್ಕಾರ ಕೈಗೊಂಡಿರುವ ಏಕೈಕ ಸಾರ್ವಜನಿಕ ಹಿತದ ತೀರ್ಮಾನವೆಂದರೆ ಭ್ರಷ್ಟಾಚಾರದ ಎಲ್ಲ ಪ್ರಕರಣಗಳ ತನಿಖೆ ಕೈಬಿಡುವುದು’ ಎಂದು ವ್ಯಂಗ್ಯವಾಡಿದೆ.

ಏನಿದು ಹಗರಣ?:

2010ರಲ್ಲಿ ಅಜಿತ್‌ ಪವಾರ್‌ ಅವರು ಕಾಂಗ್ರೆಸ್‌-ಎನ್‌ಸಿಪಿ ಮೈತ್ರಿಕೂಟದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದರು ಹಾಗೂ ನೀರಾವರಿ ಖಾತೆ ಹೊಂದಿದ್ದರು. ಆ ವೇಳೆ ವಿದರ್ಭ ಪ್ರದೇಶದಲ್ಲಿ 13,500 ಕೋಟಿ ರು. ಮೌಲ್ಯದ ನೀರಾವರಿ ಗುತ್ತಿಗೆಗಳನ್ನು ಮನಬಂದ ದರದಲ್ಲಿ ನೀಡಿದ ಆರೋಪ ಅವರ ಮೇಲೆ ಎದುರಾಗಿತ್ತು. ದೇವೇಂದ್ರ ಫಡ್ನವೀಸ್‌ ಅವರು 2014ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅಜಿತ್‌ ವಿರುದ್ಧದ ಆರೋಪಗಳ ತನಿಖೆಯನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಹಿಸಿದ್ದರು.

ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು