Asianet Suvarna News Asianet Suvarna News

ದಲಿತ ಸಿಖ್‌ ಕಾರ್ಮಿಕನ ಕೈ ಕತ್ತರಿಸಿ ನೇತು ಹಾಕಿದರು!

* ಸಿಖ್‌ ಜನರ ಪವಿತ್ರ ಗ್ರಂಥಕ್ಕೆ ಅಪಮಾನ ಮಾಡಿದ ಆರೋಪ

* ದಲಿತ ಸಿಖ್‌ ಕಾರ್ಮಿಕನ ಕೈ ಕತ್ತರಿಸಿ ನೇತು ಹಾಕಿದರು

* ದಿಲ್ಲಿ ರೈತ ಹೋರಾಟ ಸ್ಥಳದ ಬಳಿ ನಿಹಾಂಗರ ಪೈಶಾಚಿಕ ಕೃತ್ಯ

Nihang Surrenders Claiming Brutal Killing At Farmers Protest pod
Author
Bangalore, First Published Oct 16, 2021, 8:20 AM IST

ಚಂಡೀಗಢ(ಅ. 16):ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ(Farm Law) ವಿರುದ್ಧ 10 ತಿಂಗಳಿಂದ ರೈತರು ಪ್ರತಿಭಟನೆ ನಡೆಸುತ್ತಿರುವ ಕೇಂದ್ರ ಸ್ಥಳ ‘ಸಿಂಘು ಗಡಿ’(Singhu Border) ಸನಿಹ ಶುಕ್ರವಾರ ಭೀಕರ ಘಟನೆ ನಡೆದಿದೆ. ಸಿಖ್ಖರ ‘ನಿಹಾಂಗ್‌’(Nihang) ಗುಂಪಿನವರು ಪಂಜಾಬ್‌(Punjab) ಮೂಲದ ದಲಿತ ಸಿಖ್‌(Dalit Sikh) ಸಮುದಾಯದ ವ್ಯಕ್ತಿಯ ಕೈ ಕತ್ತರಿಸಿ ಹೊಡೆದು ಬರ್ಬರವಾಗಿ ಕೊಂದಿದ್ದಾರೆ ಹಾಗೂ ಶವವನ್ನು ಪೊಲೀಸ್‌ ಬ್ಯಾರಿಕೇಡ್‌ ಒಂದಕ್ಕೆ ನೇತುಹಾಕಿ ಪೈಶಾಚಿಕತೆ ಮೆರೆದಿದ್ದಾರೆ.

‘ಈ ವ್ಯಕ್ತಿ ಕೆಲ ದಿನಗಳ ಹಿಂದೆ ನಮ್ಮ ಜೊತೆ ಸೇರಿಕೊಂಡು ನಮ್ಮ ವಿಶ್ವಾಸ ಗಳಿಸಿದ್ದ. ಶುಕ್ರವಾರ ಬೆಳಗಿನ ಜಾವ 3 ಗಂಟೆ ವೇಳೆಗೆ ಈತ ತನ್ನ ವಸ್ತ್ರವನ್ನು ಕಳಚಿ ಅದರಿಂದ ಪವಿತ್ರ ಗ್ರಂಥವನ್ನು ಮುಚ್ಚಿ ಅವಮಾನ ಮಾಡಿದ್ದ. ಹೀಗಾಗಿ ಆತನನ್ನು ಹೊಡೆದು ಕೊಂದಿದ್ದೇವೆ. ನಮ್ಮ ಪವಿತ್ರ ಗ್ರಂಥಕ್ಕೆ ಯಾರೇ ಅವಮಾನ ಮಾಡಿದರೂ ನಾವು ಇದನ್ನೇ ಮಾಡುವುದು. ನಾವು ಪೊಲೀಸರು, ಆಡಳಿತದ ಬಳಿ ಹೋಗುವುದಿಲ್ಲ’ ಎಂದು ನಿರ್ವಾಯಿರ್‌ ಖಾಲ್ಸಾ- ಉಡ್ನಾ ದಲ್‌ ಎಂಬ ನಿಹಾಂಗಿ ಸಂಘಟನೆಯ ನಾಯಕ ಬಲ್ವಿಂದರ್‌ ಸಿಂಗ್‌ ಘೋಷಿಸಿದ್ದಾನೆ. ಅದರ ಬೆನ್ನಲ್ಲೇ ಹತ್ಯೆ ಮಾಡಿದ್ದು ತಾನೇ ಎಂದು ಆ ಸಂಘಟನೆಗೆ ಸೇರಿದ ಸರ್ವಜಿತ್‌ ಸಿಂಗ್‌ ಎಂಬಾತ ಪೊಲೀಸರ ಮುಂದೆ ಶರಣಾಗಿದ್ದಾನೆ.

ಇದೇ ವೇಳೆ, ಈ ಘಟನೆಯನ್ನು ಖಂಡಿಸಿರುವ ರೈತ ಹೋರಾಟದ(Farmers Protest) ಮಾತೃ ಸಂಸ್ಥೆ ‘ಸಂಯುಕ್ತ ಕಿಸಾನ್‌ ಮೋರ್ಚಾ’, ನಿಹಾಂಗ್‌ ಸಮೂಹ ರೈತ ಹೋರಾಟದ ಭಾಗವಲ್ಲ. ಮೃತ ವ್ಯಕ್ತಿ ಕೂಡ ರೈತ ಹೋರಾಟಗಾರನಲ್ಲ. ಕೃತ್ಯ ಎಸಗಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡಲು ತಾನು ಸಿದ್ಧ ಎಂದಿದೆ. ಕಾಂಗ್ರೆಸ್‌ ಸೇರಿದಂತೆ ವಿವಿಧ ಪ್ರತಿಪಕ್ಷಗಳು, ದಿಲ್ಲಿ ಸನಿಹ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಸರ್ಕಾರ ಇದರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿವೆ.

ಏನಿದು ಘಟನೆ?:

ದಿಲ್ಲಿ-ಹರ್ಯಾಣ(Delhi- Haryana) ಗಡಿಯ ಸಿಂಘು ಪ್ರದೇಶದಲ್ಲಿ 10 ತಿಂಗಳಿಂದ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಈ ಪ್ರತಿಭಟನಾ ಸ್ಥಳದ ಸನಿಹದ ಕುಂಡಲಿ ಎಂಬ ಗ್ರಾಮದ ಬಳಿ ಲಖಬೀರ್‌ ಸಿಂಗ್‌ ಎಂಬ ಪಂಜಾಬ್‌ನ(Punjab) ತರಣ್‌ ತರಣ್‌ ಜಿಲ್ಲೆಯ ಕೂಲಿ ಕಾರ್ಮಿಕರನ್ನು ನಿಹಾಂಗ್‌ ಸಮೂಹವೊಂದು ಬಡಿದು ಸಾಯಿಸಿದೆ. ಆತನ ಕೈಯನ್ನು ಪೈಶಾಚಿಕ ರೀತಿಯಲ್ಲಿ ಕತ್ತರಿಸಿದೆ. ಹೆಣವನ್ನು ಮುರಿದ ಪೊಲೀಸ್‌ ಬ್ಯಾರಿಕೇಡ್‌ಗೆ ತೂಗು ಹಾಕಿ, ಕತ್ತರಿಸಿದ ಕೈಯನ್ನೂ ಅದಕ್ಕೇ ನೇತುಹಾಕಿದೆ. ಇದೇ ವೇಳೆ, ದೃಶ್ಯವೊಂದರಲ್ಲಿ ಪ್ರತ್ಯೇಕ ಸಿಖ್‌ ಖಲಿಸ್ತಾನಿ ಹೋರಾಟಗಾರ ಭಿಂದ್ರನ್‌ವಾಲೆಯ ಪೋಸ್ಟರ್‌ ಒಂದು ಶವ ನೇತುಹಾಕಿದ ಬ್ಯಾರಿಕೇಡ್‌ ಸನಿಹ ಕಂಡುಬಂದಿದೆ.

ಕುಂಡಲಿ ಠಾಣಾ ಪೊಲೀಸರಿಗೆ ಈ ಬಗ್ಗೆ ಶುಕ್ರವಾರ ನಸುಕಿನ 5 ಗಂಟೆಗೆ ಮಾಹಿತಿ ಲಭಿಸಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ಅಲ್ಲಿಂದ ತೆರವುಗೊಳಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಪರೀಕ್ಷೆಯಲ್ಲಿ ಲಖಬೀರ್‌ ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿದ್ದು ಖಚಿತಪಟ್ಟಿದೆ.

ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್‌ ಆಗಿದ್ದು, ಲಖಬೀರ್‌ ಸಿಂಗ್‌ನನ್ನು ಘಟನೆಗೂ ಮುನ್ನ ಕೆಲವು ನಿಹಾಂಗರು ಪ್ರಶ್ನಿಸುತ್ತಿರುವ ದೃಶ್ಯ ಕಂಡುಬಂದಿದೆ. ‘ನೀನು ಎಲ್ಲಿಂದ ಬಂದೆ? ಯಾಕೆ ಸಿಖ್‌ ಧರ್ಮಗ್ರಂಥಕ್ಕೆ ಅವಮಾನ ಮಾಡಿದೆ?’ ಎಂದು ಕೇಳುತ್ತಾರೆ.

ಬಳಿಕ ಲಖಬೀರ್‌, ‘ನನ್ನನ್ನು ಬಿಟ್ಟುಬಿಡಿ’ ಎಂದು ಗೋಗರೆವ ದೃಶ್ಯವೂ ಇದೆ. ಇನ್ನೊಂದು ದೃಶ್ಯದಲ್ಲಿ ನೇತುಹಾಕಿದ ಲಖಬೀರ್‌ ಶವದ ಬಳಿ ನಿಂತು ಮಾತನಾಡುವ ನಿಹಾಂಗ್‌ ವ್ಯಕ್ತಿಯೊಬ್ಬ, ‘ಸಿಖ್‌ ಧರ್ಮ ಗ್ರಂಥಕ್ಕೆ ಅವಮಾನ ಮಾಡಿದ ವ್ಯಕ್ತಿಗೆ ಶಾಸ್ತಿ ಮಾಡಿದ್ದೇವೆ. ರಾವಣನ ರೀತಿ ಪ್ರಧಾನಿಯನ್ನೂ ದಹಿಸಬೇಕು’ ಎಂದು ಮಾತನಾಡುತ್ತಿರುವುದು ಕೇಳಿಸುತ್ತದೆ.

ಯಾರಿವರು ನಿಹಾಂಗ್‌ಗಳು?

ನಿಹಾಂಗ್‌ಗಳು ಸಿಖ್ಖರಲ್ಲಿನ ಧಾರ್ಮಿಕ ಸಮೂಹವಾಗಿದ್ದಾರೆ. ತಲೆಗೆ ನೀಲಿ ಬಣ್ಣದ ದೊಡ್ಡ ರುಮಾಲು ಸುತ್ತಿಕೊಳ್ಳುವ ಹಾಗೂ ಮೈಗೆ ಅದೇ ಬಣ್ಣದ ಸಾಂಪ್ರದಾಯಿಕ ಪೋಷಾಕು ಧರಿಸುವ ಇವರು ಈಟಿಗಳನ್ನು ಹಿಡಿದುಕೊಂಡು ಓಡಾಡುತ್ತಾರೆ. ಈ ಹಿಂದೆ ಕೂಡ ಇಂಥ ಪೈಶಾಚಿಕ ಕೊಲೆಗಳನ್ನು ಮಾಡಿದ ಆರೋಪ ಅವರ ಮೇಲಿದೆ.

ಏನಾಯ್ತು?

- ದೆಹಲಿಯ ಸಿಂಘೂ ಗಡಿಯ ರೈತ ಹೋರಾಟದ ಸ್ಥಳದ ಬಳಿ ಭೀಕರ ಹತ್ಯೆ

- ಪಂಜಾಬಿನ ಲಖಬೀರ್‌ ಸಿಂಗ್‌ ಎಂಬಾತನನ್ನು ಬಡಿದು ಕೊಂದ ನಿಹಾಂಗರು

- ಕೈ ಕತ್ತರಿಸಿ, ಹೆಣ ಹಾಗೂ ಕೈಯನ್ನು ಮುರಿದ ಬ್ಯಾರಿಕೇಡ್‌ಗೆ ಹಾಕಿ ವಿಕೃತಿ

- ಸಿಖ್ಖರ ಪವಿತ್ರ ಗ್ರಂಥಕ್ಕೆ ಲಖಬೀರ್‌ ಅಪಮಾನ ಮಾಡಿದ ಎಂದು ಕ್ರುದ್ಧ

- ಹತ್ಯೆ ಮಾಡಿದ ವ್ಯಕ್ತಿ ಸರ್ವಜಿತ್‌ ಸಿಂಗ್‌ ಪೊಲೀಸರ ಮುಂದೆ ಶರಣಾಗತಿ

- ಹತ್ಯೆಗೂ ಮುನ್ನ ನಿಹಾಂಗರ ಬಳಿ ಲಖಬೀರ್‌ ಗೋಗರೆವ ವಿಡಿಯೋ ವೈರಲ್‌

Follow Us:
Download App:
  • android
  • ios