ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದುಹೋಗುವ ಹೆದ್ದಾರಿಗಳಲ್ಲಿ ರಾತ್ರಿ ವಾಹನ ಸಂಚಾರ ನಿರ್ಬಂಧಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕರ್ನಾಟಕ ಮತ್ತು ಕೇರಳ ಸರ್ಕಾರಗಳು ನಿರ್ಧರಿಸಿವೆ. ಈ ಕುರಿತು ಡಿ.ಕೆ. ಶಿವಕುಮಾರ್ ಮತ್ತು ಕೇರಳ ಸಿಎಂ ನಡುವಿನ ಮಾತುಕತೆಯಲ್ಲಿ ವಯನಾಡು ಸಂಸದೆ ಪ್ರಿಯಾಂಕಾ ವಾದ್ರಾ ಕೂಡ ಭಾಗವಹಿಸಲಿದ್ದಾರೆ.
ತಿರುನಂತಪುರಂ: ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ರಕ್ಷಿತಾರಣ್ಯ ವ್ಯಾಪ್ತಿ ಮೂಲಕ ಹಾದುಹೋಗುವ ರಾಷ್ಯ್ರೀಯ ಹೆದ್ದಾರಿ 766 ಮತ್ತು 67ರಲ್ಲಿ ರಾತ್ರಿ ವಾಹನ ಸಂಚಾರ ವಿಚಾರವಾಗಿ ಶಾಶ್ವತ ಪರಿಹಾರ ಬಗ್ಗೆ ಚರ್ಚಿಸಲು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಒಪ್ಪಿದ್ದಾರೆ. ಈಗಾಗಲೇ ಮೊದಲ ಸುತ್ತಿನಲ್ಲಿ ಡಿ.ಕೆ.ಶಿವಕುಮಾರ್ ಅವರ ಜತೆ ಈ ವಿಚಾರ ಚರ್ಚಿಸಿದ್ದೇನೆ, ಅವರು ಈ ಸಂಬಂಧ ಮಾತುಕತೆ ನಡೆಸಬಹುದು ಎಂದು ಹೇಳಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಜೊತೆಗೆ ಈ ಮಾತುಕತೆ ವೇಳೆ ಸ್ವತಃ ಕಾಂಗ್ರೆಸ್ ನಾಯಕಿ, ವಯನಾಡು ಸಂಸದೆ ಪ್ರಿಯಾಂಕಾ ವಾದ್ರಾ ಕೂಡಾ ಹಾಜರಿರಲಿದ್ದಾರೆ ಎಂದು ತಿಳಿಸಿದ್ದಾರೆ.
ರಾತ್ರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಯಾಕೆ?
ಎರಡೂ ರಾಷ್ಟ್ರೀಯ ಹೆದ್ದಾರಿಗಳು ರಕ್ಷಿತಾರಣ್ಯಗಳ ಮೂಲಕ ಹಾದು ಹೋಗುತ್ತವೆ. ಆ ಮಾರ್ಗದಲ್ಲಿ ಹಲವು ಕಾಡುಮೃಗಗಳು ಅಪಘಾತಕ್ಕೆ ಬಲಿಯಾಗಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ರಾತ್ರಿ 9ರಿಂದ ಬೆಳಗ್ಗೆ 6ರ ವರೆಗೆ ಎಲ್ಲಾ ರೀತಿಯ ವಾಹನಗಳಿಗೂ ಆ ಹೆದ್ದಾರಿಗಳಲ್ಲಿ ಜಿಲ್ಲಾಧಿಕಾರಿ ಹೇರಿದ್ದ ನಿರ್ಬಂಧವನ್ನು ನಂತರ ಹಿಂಪಡೆದಿದ್ದರೂ ಕೇರಳ ಹೈಕೋರ್ಟ್ ಅದಕ್ಕೆ ತಡೆ ನೀಡಿದೆ. ಸದ್ಯ ಈ ವಿಚಾರ ಸದ್ಯ ಸುಪ್ರೀಂ ಕೋರ್ಟ್‌ನಲ್ಲಿದ್ದು, ಹೈಕೋರ್ಟ್ ಆದೇಶ ಇನ್ನೂ ಜಾರಿಯಲ್ಲಿದೆ ಎಂದು ಹೇಳಿದ್ದಾರೆ.
ಈ ಮಾರ್ಗದಲ್ಲಿ ಕಾಡುಪ್ರಾಣಿಗಳ ಸಂಚಾರಕ್ಕೆ ಅಡ್ಡಿಯಾಗದಂತೆ ಸುರಂಗ ಮಾರ್ಗ ಅಥವಾ ಎಲಿವೇಟೆಡ್ ರಸ್ತೆ ನಿರ್ಮಾಣದಂಥ ಪರ್ಯಾಯ ವ್ಯವಸ್ಥೆ ಕುರಿತು ಡಿಪಿಆರ್ ಸಿದ್ಧಪಡಿಸಬಹುದಾಗಿದೆ. ಆದರೆ ಡಿಪಿಆರ್ ಸಿದ್ಧಪಡಿಸುವ ಮೊದಲು ಕರ್ನಾಟಕದ ಜತೆಗೆ ಮಾತುಕತೆ ನಡೆಸುವುದು ಅತ್ಯಗತ್ಯವಾಗಿದೆ.
ಪ್ರಿಯಾಂಕಾ ಗಾಂಧಿ ವಾದ್ರಾ ಉಪಸ್ಥಿತಿ
ಕರ್ನಾಟಕ ಮುಖ್ಯಮಂತ್ರಿ ಶಿವಕುಮಾರ್ ಅವರ ಜತೆಗೆ ಮಾತನಾಡಿದ್ದು, ಅವರು ಈ ವಿಚಾರವಾಗಿ ಮಾತುಕತೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ವಾದ್ರಾ ಕೂಡ ಈ ವಿಚಾರವಾಗಿ ಮಧ್ಯಪ್ರವೇಶಿಸಿದ್ದು, ಕರ್ನಾಟಕ ಸರ್ಕಾರದ ಜತೆಗಿನ ಮಾತುಕತೆ ವೇಳೆ ತಾವೂ ಆಗಮಿಸುವುದಾಗಿ ತಿಳಿಸಿದ್ದಾರೆ.
ಕೇರಳ ಮತ್ತು ಕರ್ನಾಟಕ ಸರ್ಕಾರಗಳು ಜಂಟಿಯಾಗಿ ಪರ್ಯಾಯ ವ್ಯವಸ್ಥೆಯ ಪ್ರಸ್ತಾಪ ಇಟ್ಟಾಗ ಮಾತ್ರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣದಲ್ಲಿ ಏನಾದರೂ ಬದಲಾವಣೆ ಆಗಲು ಸಾಧ್ಯ ಎಂದು ಸತೀಶನ್ ತಿಳಿಸಿದ್ದಾರೆ.
ಈ ಮಾರ್ಗದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಸಂಬಂಧಿಸಿದ ಶಾಶ್ವತ ಪರಿಹಾರಕ್ಕಾಗಿ ಸರ್ಕಾರವು ಸಾಧ್ಯವಾದ ಎಲ್ಲಾ ಪ್ರಯತ್ನ ನಡೆಸಲಿದೆ ಎಂದು ಹೇಳಿದರು.






