ಪುಲ್ವಾಮಾ ದಾಳಿ ಸಂಚುಕೋರ ಅಜರ್‌| ದಾಳಿ ಕಾರ್ಯಗತಗೊಳಿಸಿದ್ದು ಅಜರ್‌ ಬಂಧು ಫಾರೂಖ್‌| ದಾಳಿ ಹಿಂದಿನ ಸಂಚು ಭೇದಿಸಿದ ಎನ್‌ಐಎ| 40 ಸಿಆರ್‌ಪಿಎಫ್‌ ಯೋಧರ ಬಲಿಪಡೆದ ಪ್ರಕರಣ| ಎನ್‌ಐಎಯಿಂದ 13,500 ಪುಟದ ಚಾಜ್‌ರ್‍ಶೀಟ್‌ ಸಲ್ಲಿಕೆ

ಜಮ್ಮು(ಆ.26): ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ 2019ರ ಫೆ.1ರಂದು 40 ಸಿಆರ್‌ಪಿಎಫ್‌ ಯೋಧರನ್ನು ಬಲಿಪಡೆದ ಭೀಕರ ಭಯೋತ್ಪಾದಕ ದಾಳಿ ಕುರಿತಾದ ಆರೋಪಪಟ್ಟಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮಂಗಳವಾರ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ. ಪಾಕಿಸ್ತಾನದಲ್ಲಿರುವ ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ ಮುಖಂಡ ಮೌಲಾನಾ ಮಸೂದ್‌ ಅಜರ್‌ ಸೇರಿದಂತೆ 19 ಉಗ್ರರು ಈ ಘಾತಕ ದಾಳಿಯ ಹಿಂದಿದ್ದಾರೆ ಎಂದು ಅವರ ವಿರುದ್ಧ ದೋಷಾರೋಪ ಹೊರಿಸಲಾಗಿದೆ.

ಈ ಕೃತ್ಯ ಎಸಗಿದ್ದ 7 ಉಗ್ರರು ವಿವಿಧ ಎನ್‌ಕೌಂಟರ್‌ಗಳಲ್ಲಿ ಅಸುನೀಗಿದ್ದರೂ, ಇತರ ಉಗ್ರರು ಹಾಗೂ ಉಗ್ರರ ಬಗ್ಗೆ ಅನುಕಂಪ ಹೊಂದಿದವರ ವಿಚಾರಣೆ ನಡೆಸಿದ ಎನ್‌ಐಎ ಜಂಟಿ ನಿರ್ದೇಶಕ ಅನಿಲ್‌ ಶುಕ್ಲಾ ನೇತೃತ್ವದ ತಂಡ, ದಾಳಿಯ ಹಿಂದಿನ ಸಂಚು ಭೇದಿಸಿದ್ದಾರೆ.

13,500 ಪುಟಗಳ ಆರೋಪಪಟ್ಟಿಯಲ್ಲಿ ಅಜರ್‌, ಆತನ ಸೋದರರಾದ ಅಬ್ದುಲ್‌ ರೌಫ್‌ ಹಾಗೂ ಅಮ್ಮರ್‌, ಅಲ್ವಿ, ಬಂಧು ಉಮರ್‌ ಫಾರೂಖ್‌ ಹೆಸರು ಕೂಡ ಇದೆ. ಅಜರ್‌ ಹಾಗೂ ಆತನ ಸೋದರರು ರೂಪಿಸಿದ ಸಂಚಿನ ಮೇರಗೆ ಫಾರೂಖ್‌ 2018ರಲ್ಲಿ ದಾಳಿ ಉದ್ದೇಶದಿಂದ ಭಾರತಕ್ಕೆ ಪಾಕಿಸ್ತಾನದಿಂದ ಒಳನುಸುಳಿದ್ದ ಎಂದು ಎನ್‌ಐಎ ಹೇಳಿದೆ. ಆದರೆ ಫಾರೂಖ್‌ ಎನ್‌ಕೌಂಟರ್‌ನಲ್ಲಿ ಹತನಾಗಿದ್ದ.

ಘಟನೆಯ ಹಿಂದಿನ ಕೈವಾಡದ ಕುರಿತು ಯಾವುದೇ ಸಣ್ಣ ಸಾಕ್ಷ್ಯಗಳು ಸಿಕ್ಕದೇ ಇದ್ದರೂ ಅದನ್ನು ಯಶಸ್ವಿಯಾಗಿ ಬಯಲಿಗೆಳೆಯುವಲ್ಲಿ ಎನ್‌ಐಎ ಯಶಸ್ವಿಯಾಗಿದೆ. ಈ ತನಿಖೆಯಲ್ಲಿ ಕರ್ನಾಟಕ ಮೂಲದ ಹಿರಿಯ ಐಪಿಎಸ್‌ ಅಧಿಕಾರಿ, ಎನ್‌ಐಎ ಡಿಐಜಿ ಸೋನಿಯಾ ನಾರಂಗ್‌ ಕೂಡಾ ಪ್ರಮುಖ ಪಾತ್ರ ವಹಿಸಿದ್ದಾರೆ.

ಆಮವಾಸ್ಯೆ ದಿನ ಭಾರತ ಪ್ರವೇಶಿಸಿ ದಾಳಿ ಸಂಚು ರೂಪಿಸಿದ ಪಾಕ್‌ ಉಗ್ರ

ಮೌಲಾನಾ ಮಸೂದ್‌ ಅಜರ್‌ ಪುಲ್ವಾಮಾ ದಾಳಿಯ ಮುಖ್ಯ ಸಂಚುಕೋರ. ಈತನ ಸಂಚಿನ ಅನುಸಾರ ಬಂಧು ಉಮರ್‌ ಫಾರೂಖ್‌ 2018ರಲ್ಲೇ ಭದ್ರತಾ ಪಡೆಗಳ ಕಣ್ಣು ತಪ್ಪಿಸಲು ಅಮವಾಸ್ಯೆ ದಿನದಂದು ಪಾಕ್‌ ಗಡಿ ದಾಟಿ ಭಾರತಕ್ಕೆ ನುಸುಳಿದ್ದ. ಬಳಿಕ ಇಸ್ಮಾಯಿಲ್‌ ಸೈಫುಲ್ಲಾ ಎಂಬಾತ ಕಾಶ್ಮೀರಕ್ಕೆ ನುಸುಳಿದ. ಉಮರ್‌ ಫಾರೂಖ್‌ಗೆ ಸಹಾಯ ಮಾಡಿದ್ದು ಶಾಕಿರ್‌ ಬಷೀರ್‌ ಎಂಬಾತ. ಬಷೀರ್‌ ಮನೆಯಲ್ಲೇ 200 ಕೇಜಿ ಐಇಡಿ ಸ್ಪೋಟಕಗಳನ್ನು ಜೋಡಿಸಲಾಯಿತು. ಇದರಲ್ಲಿ 35 ಕೇಜಿ ಸ್ಪೋಟಕವನ್ನು ಪಾಕ್‌ನಿಂದ ತರಲಾಗಿತ್ತು. ಸಿಆರ್‌ಪಿಎಫ್‌ ತಂಡದ ಮೇಲೆ ದಾಳಿ ನಡೆಸಲು ಮೊದಲು 200 ಕೇಜಿ ಸ್ಪೋಟಕ ಇದ್ದ ಕಾರನ್ನು ಬಷೀರ್‌ ಚಲಾಯಿಸಿಕೊಂಡು ಹೋದ. ನಂತರ ಅವನು ಆದಿಲ್‌ ಅಹ್ಮದ್‌ ದಾರ್‌ ಎಂಬುವನಿಗೆ ಹಸ್ತಾಂತರಿಸಿದ. ದಾರ್‌ ಈ ಕಾರನ್ನು ಸಿಆರ್‌ಪಿಎಫ್‌ ಸಿಬ್ಬಂದಿ ಇದ್ದ ಬಸ್‌ಗೆ ಪುಲ್ವಾಮಾ ಬಳಿ ಡಿಕ್ಕಿ ಹೊಡೆಸಿದ. ಆಗ ಕಾರಿನಲ್ಲಿದ್ದ ಬಾಂಬ್‌ ಸಿಡಿದು 40 ಯೋಧರು ಅಸುನೀಗಿದರು ಎಂದು ಚಾಜ್‌ರ್‍ಶೀಟಲ್ಲಿ ಎನ್‌ಐಎ ಹೇಳಿದೆ.