ನವದೆಹಲಿ/ ಮುಂಬೈ/(ಅ. 09)  ಮಾಧ್ಯಮಗಳು ಟಿಆರ್ ಪಿಗಾಗಿ ಏನೆಲ್ಲ ಮಾಡುತ್ತವೆ ಎಂಬುದು ಜನರು ಸಾಮಾನ್ಯವಾಗಿ ಮಾಡುವ ಆರೋಪ. ಈಗ ಇದೇ ಟಿಆರ್ ಪಿ ವಿಚಾರವೇ ದೇಶದಲ್ಲಿ ದೊಡ್ಡ ಮಟ್ಟದ ಸುದ್ದಿ ಮಾಡಿದೆ.

ಟಿಆರ್ ಪಿ ವಿಚಾರದಲ್ಲಿ ಮೋಸದ ಲೆಕ್ಕ ತೋರಿಸುವಂತೆ ಮಾಡಲಾಗಿದ್ದು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಮುಂಬೈ ಪೊಲೀಸ್ ಕಮಿಷನರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಕೆಲ ಗಂಟೆಗಳಲ್ಲೇ ರಿಪಬ್ಲಿಕ್ ಟಿವಿ ಒಂದು ವರದಿಯನ್ನು ಮಾಡಿದೆ.

ಮುಂಬೈ ಪೊಲೀಶ್ ಕಮಿಷನರ್ ರಿಪಬ್ಲಿಕ್ ಟಿವಿಯೇ ಟಿಆರ್ ಪಿ ತಿರುಚುತ್ತಿದೆ ಎಂದು ಹೇಳಿದ್ದರು. ಆದರೆ ಎಫ್‌ಐಆರ್ ನಲ್ಲಿ ರಿಪಬ್ಲಿಕ್ ಟಿವಿಯ ಹೆಸರು ಇಲ್ಲ, ಎನ್ ಡಿಟಿವಿ ಹೆಸರಿದೆ ಎಂದು ಅರ್ನಾಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿ ವರದಿ ಮಾಡಿದೆ.

ಮುಂಬೈ ಪೊಲೀಶ್ ಕಮಿಷನರ್ ಮಾಡಿದ ಸುದ್ದಿಗೋಷ್ಠಿಗೂ ಎಫ್ ಐಆರ್ ನಲ್ಲಿರುವ ಮಾಹಿತಿಗೂ ವ್ಯತ್ಯಾಸ ಇರುವುದು ಎಫ್ ಐಆರ್ ನಲ್ಲಿ ಗೊತ್ತಾಗಿದೆ.

ಮಹಾರಾಷ್ಟ್ರದಲ್ಲಿ ರಿಪಬ್ಲಿಕ್ ಟಿವಿ ಪ್ರಸಾರ ಮಾಡದಂತೆ ಸರ್ಕಾರದಿಂದಲೇ ಎಚ್ಚರಿಕೆ

ರಿಪಬ್ಲಿಕ್ ಟಿವಿ ಸೇರಿದಂತೆ ಎರಡು  ಮುಂಬೈ ಸ್ಥಳೀಯ ವಾಹಿನಿಗಳು ಟಿಆರ್ ಪಿಯನ್ನು ತಿರುಚುತ್ತಿವೆ ಎಂದು ಮುಂಬೈ ಪೊಲೀಸರು ಹೇಳಿದ್ದರು. ಕೆಲವು ಮನೆಗಳಿಗೆ ಮೀಟರ್ ಅಳವಡಿಕೆ ಮಾಡಿ ಹಣ ನೀಡಿ ತಮ್ಮದೇ ವಾಹಿನಿಯನ್ನು ಸದಾ ಹಾಕಿಡುವಂತೆ ಮಾಡಲಾಗಿದ್ದು ಅದನ್ನು ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದ್ದರು.

ಇದನ್ನು ತೀವ್ರವಾಗಿ ವಿರೋಧಿಸಿದ್ದ ರಿಪಬ್ಲಿಕ್ ಟಿವಿ ಮುಂಬೈ ಪೊಲೀಸ್ ಕಮಿಷನರ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿತ್ತು. ನಾವು ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ಮೇಲಿಂದ ಮೇಲೆ ಪ್ರಶ್ನೆ ಕೇಳಿದ ಕಾರಣಕ್ಕೆ ಇಂಥ ಆಪಾದನೆ ಮಾಡಲಾಗಿದೆ ಎಂಬುದು ರಿಪಬ್ಲಿಕ್ ಟಿವಿಯ ವಾದ.

ಯಾವ ವಾಹಿನಿಯನ್ನು ಜನ ಹೆಚ್ಚಿಗೆ ನೋಡುತ್ತಾರೆ ಎಂದು ನಿರ್ಧರಿಸುವುದೇ ಟೆಲಿವಿಷನ್ ರೇಟಿಂಗ್ ಪಾಯಿಂಟ್ ಅಂದರೆ ಟಿಆರ್ ಪಿ. ಇದರ ಆಧಾರದಲ್ಲಿ  ಜಾಹೀರಾತು ಪಡೆದುಕೊಳ್ಳುವುದು, ವಿಶ್ವಾಸಾರ್ಹತೆ ಎಲ್ಲವೈ ನಿರ್ಧರಿತವಾಗುತ್ತದೆ.