ಬರಲಿದೆ 220 ಕಿಮೀ ವೇಗದ ವಂದೇ ಭಾರತ್ ರೈಲು: ಭಾರತದ ಅತ್ಯಂತ ವೇಗದ ರೈಲು ಎಂಬ ಹೆಗ್ಗಳಿಕೆ
220 ಕಿ.ಮೀ ವೇಗದ ವಂದೇ ಭಾರತ್ ರೈಲು ಶೀಘ್ರದಲ್ಲೇ ಹಳಿ ಮೇಲೆ ಬರಲಿದೆ. ಚೇರ್‌ಕಾರ್ ಬದಲು ಸ್ಲೀಪರ್ ‘ವಂದೇ ಭಾರತ್’ ತಯಾರಿ ಮಾಡಲಾಗುತ್ತಿದ್ದು, ಇದಕ್ಕೆ ಭಾರತದ ಅತ್ಯಂತ ವೇಗದ ರೈಲು ಎಂಬ ಹೆಗ್ಗಳಿಕೆ ಬಂದಿದೆ.
ನವದೆಹಲಿ (ಜನವರಿ 22, 2023): ಈಗಾಗಲೇ ಜನಮನ ಗೆದ್ದಿರುವ ನೂತನ ‘ವಂದೇ ಭಾರತ್’ ರೈಲಿನ ವೇಗವನ್ನು ಇನ್ನಷ್ಟುಹೆಚ್ಚಿಸಲು ಭಾರತೀಯ ರೈಲ್ವೆ ಮುಂದಾಗಿದ್ದು, ಗಂಟೆಗೆ 220 ಕಿ.ಮೀ. ವೇಗವನ್ನು ತಲುಪುವ ರೈಲು ತಯಾರಿಸಲು ಮುಂದಾಗಿದೆ. ವಿಶೇಷವೆಂದರೆ ಇದು ಈಗಿನ ಚೇರ್‌ಕಾರ್ ವಂದೇ ಭಾರತ್ ರೈಲಿನ ಬದಲು ಸ್ಲೀಪರ್ ಆಗಿರಲಿದೆ. ಕೇವಲ ಕುಳಿತುಕೊಳ್ಳುವ ಸೀಟು ಮಾತ್ರ ಇರುವ ಹಾಲಿ ವಂದೇ ಭಾರತ್ ರೈಲುಗಳು ಗಂಟೆಗೆ 180 ಕಿ.ಮೀ. ವೇಗದಲ್ಲಿ ಓಡಬಲ್ಲವು. ಆದರೆ ಸುರಕ್ಷತೆ ದೃಷ್ಟಿಯಿಂದ ಅವುಗಳನ್ನು 130 ಕಿ.ಮೀ. ವೇಗದಲ್ಲಿ ಓಡಿಸಲಾಗುತ್ತಿದೆ. ಸ್ಲೀಪರ್ ವಂದೇ ಭಾರತ್ ರೈಲುಗಳು 220 ಕಿ.ಮೀ. ವೇಗದವರೆಗೆ ಓಡಬಲ್ಲವು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಅತಿವೇಗದ ಸ್ಲೀಪರ್ (Sleeper) ವಂದೇ ಭಾರತ್ ರೈಲುಗಳು (Vande Bharat Trains) ಹಳಿಗೆ ಇಳಿದ ಮೇಲೆ ಅವು ಭಾರತದ ಅತ್ಯಂತ ವೇಗದ ರೈಲು (India’s Fastest Train) ಎಂಬ ಹೆಗ್ಗಳಿಕೆ ಪಡೆಯಲಿವೆ. ಇವುಗಳನ್ನು ಉಕ್ಕಿನ (Steel) ಬದಲು ಅಲ್ಯುಮಿನಿಯಂ (Aluminium) ಬಳಸಿ ತಯಾರಿಸಲಾಗುತ್ತದೆ. ಈ ವಂದೇ ಭಾರತ್ 2.0 ರೈಲುಗಳು ಹಗುರವಾಗಿರುವುದರಿಂದ ಹೆಚ್ಚು ವೇಗದಲ್ಲಿ ಓಡಲಿವೆ.
ಇದನ್ನು ಓದಿ: ಉದ್ಘಾಟನೆಗೂ ಮುನ್ನವೇ ವಿಶಾಖಪಟ್ಟಣದಲ್ಲಿ ವಂದೇ ಭಾರತ್ ರೈಲಿಗೆ ಕಲ್ಲೆಸೆದ ಕಿಡಿಗೇಡಿಗಳು..!
ಸ್ಲೀಪರ್ ವಂದೇ ಭಾರತ್ ರೈಲುಗಳನ್ನು 220 ಕಿ.ಮೀ. ವೇಗದಲ್ಲಿ ಓಡುವ ಸಾಮರ್ಥ್ಯದಲ್ಲಿ ನಿರ್ಮಿಸಿದರೂ ಅವು ಹಳಿಯ ಮೇಲೆ ಗರಿಷ್ಠ 200 ಕಿ.ಮೀ. ವೇಗದಲ್ಲಿ ಓಡಲಿವೆ. ಸದ್ಯ 180 ಕಿ.ಮೀ. ವೇಗದಲ್ಲಿ ಓಡುವ ದೆಹಲಿ-ಮೇರಠ್ ಆರ್‌ಆರ್‌ಟಿಎಸ್ (ರೀಜನಲ್ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟಂ) ರೈಲು ಭಾರತದ ಅತ್ಯಂತ ವೇಗದ ರೈಲು ಎಂಬ ಹೆಗ್ಗಳಿಕೆ ಹೊಂದಿದೆ. ಸ್ಲೀಪರ್ ವಂದೇ ಭಾರತ್ ರೈಲು ಬಂದ ಮೇಲೆ ಅವು ಈ ಮಾರ್ಗದಲ್ಲಿ ಸಂಚರಿಸಲಿವೆ. ವಂದೇ ಭಾರತ್ ಚೇರ್‌ಕಾರ್ ರೈಲುಗಳು ಶತಾಬ್ದಿ ರೈಲುಗಳನ್ನು ಹಂತಹಂತವಾಗಿ ತೆರೆಯ ಮರೆಗೆ ಸರಿಸಿದರೆ, ವಂದೇ ಭಾರತ್ ಸ್ಲೀಪರ್ ರೈಲುಗಳು ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳ ಜಾಗದಲ್ಲಿ ಓಡಲಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ 400 ವಂದೇ ಭಾರತ್ ರೈಲುಗಳ ನಿರ್ಮಾಣಕ್ಕೆ (ಚೇರ್‌ಕಾರ್ ಮತ್ತು ಸ್ಲೀಪರ್) ಟೆಂಡರ್ ನೀಡಲಾಗಿದೆ. ನಾಲ್ಕು ದೇಸಿ ಹಾಗೂ ವಿದೇಶಿ ಕಂಪನಿಗಳು ವಂದೇ ಭಾರತ್ ರೈಲು ಉತ್ಪಾದಿಸಲು ಮುಂದೆ ಬಂದಿವೆ.
ಇದನ್ನೂ ಓದಿ: ಬರಲಿದೆ ಬೈಕ್‌ನಂತೆ ಬಾಗುವ ರೈಲು: 2025ಕ್ಕೆ ಟಿಲ್ಟಿಂಗ್ ರೈಲು ಆಗಮನ
ಬಿಹಾರದಲ್ಲಿ ವಂದೇ ಭಾರತ್ ರೈಲು ಮೇಲೆ ಮತ್ತೆ ಕಲ್ಲೆಸೆತ
ಕಟಿಹಾರ್: ಇತ್ತೀಚೆಗೆ ವಂದೇ ಭಾರತ್ ರೈಲು ಮೇಲೆ ಕಲ್ಲೆಸೆತ ಘಟನೆಗಳು ಮುಂದುವರಿದಿವೆ. ಶುಕ್ರವಾರ ರಾತ್ರಿ ಸಹ ಜಲ್ಪೈಗುರಿ- ಹೌರಾ ವಂದೇ ಭಾರತ್ ರೈಲು ಬಿಹಾರದ ಕಟಿಹಾರ್‌ನಲ್ಲಿ ಚಲಿಸುವಾಗ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ.
ಈ ಘಟನೆಯಲ್ಲಿ ವಂದೇ ಭಾರತ್ ರೈಲಿನ ಕೋಚ್‌ವೊಂದಕ್ಕೆ ಹಾನಿಯಾಗಿದೆ. ಕಲ್ಲೆಸೆತವನ್ನು ಪ್ರಯಾಣಿಕರೊಬ್ಬರು ಗಮನಿಸಿ ರೈಲ್ವೇ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಸುವಂತೆ ಸ್ಥಳೀಯ ಪೊಲೀಸರಿಗೆ ಸೂಚಿಸಲಾಗಿದೆ. ಜಲ್ಪೈಗುರಿ-ಹೌರಾ ಮಾರ್ಗವಾಗಿ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ಮರುದಿನವೇ ದುಷ್ಕರ್ಮಿಗಳು ರೈಲಿನ ಮೇಲೆ ಕಲ್ಲೆಸೆದಿದ್ದರು. ಈ ಮೊದಲು ಕಲ್ಲೆಸೆದಿದ್ದ ಮೂವರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದರು. ಸಿಕಂದರಾಬಾದ್ ಮತ್ತು ವಿಶಾಖಪಟ್ಟಣಂ ಮಾರ್ಗದಲ್ಲಿನ ವಂದೇ ಭಾರತ್ ರೈಲಿನ ಮೇಲೂ ಕಲ್ಲೆಸೆಯಲಾಗಿತ್ತು.
ಇದನ್ನೂ ಓದಿ: ಮುಂದಿನ ವರ್ಷದ ಏಪ್ರಿಲ್‌ನಲ್ಲಿ ಧಾರವಾಡ-ಬೆಂಗಳೂರು ಹೈಸ್ಪೀಡ್ 'ವಂದೇ ಭಾರತ್' ಆರಂಭ