ನವದೆಹಲಿ(ಫೆ.16): ಇದೇ ಫೆ.28ರಂದು ಇಸ್ರೋದ ಪಿಎಸ್‌ಎಲ್‌ವಿ ರಾಕೆಟ್‌ 20 ಉಪಗ್ರಹಗಳನ್ನು ಹೊತ್ತೊಯ್ದು ಕಕ್ಷೆಗೆ ಸೇರಿಸಲಿದೆ. ಈ ಪೈಕಿ ಸ್ಪೇಸ್‌ಕಿಡ್ಜ್‌ ಎಂಬ ಸಂಸ್ಥೆ ತಯಾರಿಸಿರುವ ಮಿನಿ ಉಪಗ್ರಹವು, ಹಿಂದೂಗಳ ಪವಿತ್ರಗ್ರಂಥ ಭಗವದ್ಗೀತೆ, ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಮತ್ತು 25000 ಜನರ ಹೆಸರನ್ನು ಹೊತ್ತೊಯ್ಯಲಿದೆ.

ಸ್ಪೇಸ್‌ಕಿಡ್ಜ್‌ ಒಟ್ಟು ಮೂರು ಮಿನಿ ಉಪಗ್ರಹಗಳನ್ನು ತಯಾರಿಸಿದೆ. ಈ ಪೈಕಿ ಒಂದು ಉಪಗ್ರಹಕ್ಕೆ ಭಾರತೀಯ ಬಾಹ್ಯಾಕಾಶ ಯೋಜನೆಯ ಪಿತಾಮಹ ಸತೀಶ್‌ ಧವನ್‌ ಅವರ ಹೆಸರು ಇಡಲಾಗಿದೆ. ಈ ಉಪಗ್ರಹವು ಭಗವದ್ಗೀತೆಯ ಒಂದು ಪ್ರತಿ ಕೊಂಡೊಯ್ಯಲಿದೆ. ಜೊತೆಗೆ ಉಪಗ್ರಹದ ಮೇಲ್ಭಾಗದ ಪ್ಯಾನೆಲ್‌ ಪ್ರಧಾನಿ ಮೋದಿ ಅವರ ಹೆಸರು, ಭಾವಚಿತ್ರವನ್ನು ಒಳಗೊಂಡಿರಲಿದೆ. ಅದರ ಕೆಳಗಡೆ ಆತ್ಮನಿರ್ಭರ ಯೋಜನೆ ಎಂದು ಬರೆದಿರಲಿದೆ. ಇದಲ್ಲದೆ ಪ್ಯಾನೆಲ್‌ನ ಕೆಳಭಾಗದಲ್ಲಿ ಇಸ್ರೋ ಅಧ್ಯಕ್ಷ ಕೆ.ಶಿವನ್‌ ಮತ್ತು ಕೇಂದ್ರ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಡಾ.ಆರ್‌ ಉಮಾಶಂಕರ್‌ ಅವರ ಹೆಸರನ್ನು ದಾಖಲಿಸಲಾಗುವುದು.

ಜೊತೆಗೆ ಕರೆಯ ಮೇರೆಗೆ ಹೆಸರು ರವಾನಿಸಿದವರ ಪೈಕಿ 25000 ಜನರ ಹೆಸರನ್ನು ಬರೆದು ಅದನ್ನೂ ಉಪಗ್ರಹದಲ್ಲಿ ಕಳುಹಿಸಲಾಗುವುದು ಎಂದು ಸ್ಪೇಸ್‌ಕಿಡ್ಜ್‌ ಸಂಸ್ಥಾಪಕ ಶ್ರೀಮತಿ ಕೇಶನ್‌ ತಿಳಿಸಿದ್ದಾರೆ.