PIB Fact Check: ಹೊಸ 1,000 ರೂಪಾಯಿ ಮುಖಬೆಲೆಯ ನೋಟು ಬಿಡುಗಡೆಯಾಗಿದೆ ಮತ್ತು ನವೆಂಬರ್ 15ರಿಂದ ಚಲಾವಣೆಗೆ ಬರಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ಆರ್‌ಬಿಐ ಅಂತಹ ಯಾವುದೇ ನೋಟು ಬಿಡುಗಡೆ ಮಾಡಿಲ್ಲ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ.

Fact Check: ದೇವಸ್ಥಾನದ ಚಿತ್ರವಿರುವ ಹಳದಿ ಬಣ್ಣದ ಹೊಸ 1,000 ರು. ಮುಖಬೆಲೆಯ ನೋಟು ಬಿಡುಗಡೆಯಾಗಿದ್ದು, ನ.15ರಿಂದ ಈ ನೋಟು ಚಲಾವಣೆಗೆ ಬರಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ದಿನಗಳಿಂದ ಹರಿದಾಡುತ್ತಿದೆ. ಆದರೆ ಈ ಸುದ್ದಿ ಸಂಪೂರ್ಣ ಸುಳ್ಳು. ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಹೊಸ ₹1,000 ನೋಟು ಬಿಡುಗಡೆ ಮಾಡುವ ಕುರಿತು ಯಾವುದೇ ಪ್ರಕಟಣೆ ಹೊರಡಿಸಿಲ್ಲ ಎಂದು ಕೇಂದ್ರ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋದ (ಪಿಐಬಿ) ಫ್ಯಾಕ್ಟ್‌ ಚೆಕ್‌ ಘಟಕ ಸ್ಪಷ್ಟಪಡಿಸಿದೆ.

1,000 ರು. ನೋಟು ಬಿಡುಗಡೆ ಕುರಿತು RBI ಯಾವುದೇ ಘೋಷಣೆ ಮಾಡಿಲ್ಲ

ಆರ್‌ಬಿಐನ ಅಧಿಕೃತ ಪ್ರಕಟಣೆಗಳನ್ನು ಪರಿಶೀಲಿಸಿದಾಗ ಹೊಸ 1,000 ರು. ನೋಟು ಬಿಡುಗಡೆ ಕುರಿತು ಯಾವುದೇ ಘೋಷಣೆ ಕಂಡುಬಂದಿಲ್ಲ. ಹೀಗಾಗಿ ವೈರಲ್‌ ಸುದ್ದಿಯನ್ನು ನಕಲಿ ಎಂದು ಗುರುತಿಸಿದೆ. 2016ರ ನ.8ರಂದು ಹಳೆಯ ₹500 ಮತ್ತು ₹1,000 ನೋಟುಗಳನ್ನು ಅಮಾನ್ಯಗೊಳಿಸಲಾಗಿತ್ತು. ಪ್ರಸ್ತುತ ₹10, ₹20, ₹50, ₹100, ₹200 ಮತ್ತು ₹500 ಮುಖಬೆಲೆಯ ನೋಟುಗಳು ಮಾತ್ರ ಚಲಾವಣೆಯಲ್ಲಿ ಇವೆ.

ಹೀಗಿರುವಾಗ, ಹೊಸ ₹1,000 ನೋಟು ಬಿಡುಗಡೆಯಾಗಿದೆ ಎಂಬುದಕ್ಕೆ ಯಾವುದೇ ಅಧಿಕೃತ ಪುರಾವೆ ಇಲ್ಲ ಹಾಗೂ ಈ ಸುದ್ದಿ ಸಂಪೂರ್ಣ ಹುಸಿ.

Scroll to load tweet…