ಮೀರತ್(ಡಿ.30): ಮಾರಕ ವೈರಸ್ ಕೊರೋನಾ ಲಂಡನ್‌ನಿಂದ ಉತ್ತರ ಪ್ರದೇಶಕ್ಕೆ ಎಂಟ್ರಿ ಕೊಟ್ಟಿದೆ. ಮೀರತ್‌ನಲ್ಲಿ ಎರಡು ವರ್ಷದ ಕಂದನಲ್ಲಿ ಈ ಸೋಂಕು ದೃಢಪಟ್ಟಿದೆ. ಡಿಸ್ಟ್ರಿಕ್ಟ್‌ ಸರ್ವಿಲನ್ಸ್ ಆಫೀಸರ್ ಡಾ. ಪ್ರಶಾಂತ್ ಕುಮಾರ್ ಈ ಮಾಹಿತಿ ಖಚಿತಪಡಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಡಾ. ಪ್ರಶಾಂತ್ ಕುಮಾರ್ ಮೀರತ್‌ನ ಟಿ. ಪಿ. ನಗರದ ಪ್ರಕರಣ ಇದಾಗಿದ್ದು, ದೆಹಲಿ ಕಳುಹಿಸಿದ್ದ ಸ್ಯಾಂಪಲ್‌ ವರದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ನೂ ನಾಲ್ವರು ಕೊರೋನಾ ಸೋಂಕಿತರ ಸ್ಯಾಂಪಲ್‌ ಟೆಸ್ಟ್‌ಗೆಂದು ಕಳುಹಿಸಿಕೊಟ್ಟಿದ್ದೆವು. ಮಗುವನ್ನು ಹೊರತುಪಡಿಸಿ ಉಳಿದವರೆಲ್ಲರ ವರದಿ ನೆಗೆಟಿವ್ ಬಂದಿದೆ ಎಂದಿದ್ದಾರೆ. 

ಇನ್ನು ಮಗುವಿಗೆ ಹೊಸ ಮಾದರಿಯ ಕೊರೋನಾ ಸೋಂಕಿರುವುದು ದೃಢಪಟ್ಟ ಬೆನ್ನಲ್ಲೇ ಆರೋಗ್ಯ ಇಲಾಖೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇನ್ನು ಈ ಮಗು ತನ್ನ ತಂದೆ ತಾಯಿಯೊಂದಿಗೆ ಲಂಡನ್‌ನಿಂದ ಬಂದಿತ್ತು. ತಂದೆ, ತಾಯಿಯ ವರದಿ ನೆಗೆಟಿವ್ ಬಂದಿದೆ. ಜೊತೆಗೆ ಈ ಕುಟುಂಬದೊಂದಿಗೆ ಸಂಪರ್ಕ ಹೊಂದಿದ್ದ ಮತ್ತೋರ್ವ ಮಹಿಳೆಯ ವರದಿಯೂ ನೆಗೆಟಿವ್ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿನ ಆರೋಗ್ಯ ಇಲಾಖೆ ಲಂಡನ್‌ನಿಂದ ಮರಳಿದ್ದ ನಾಲ್ವರ ಸ್ಯಾಂಪಲ್ ಪಡೆದು ಪರೀಕ್ಷೆಗೆಂದು ದೆಹಲಿಗೆ ಕಳುಹಿಸಿದ್ದರು. ಇನ್ನು ಇವರೆಲ್ಲರಲ್ಲೂ ಕೊರೋನಾದ ಆರಂಭಿಕ ಲಕ್ಷಣಗಳಿದ್ದು, ಎರಡನೇ ಹಂತದ ಕೊರೋನಾ ಲಕ್ಷಣಗಳು ಕಂಡು ಬಂದಿಲ್ಲ ಎಂದು ಮುಖ್ಯಮಂತ್ರಿಗಳ ಕಚೆರಿ ತಿಳಿಸಿದೆ.