ನವದೆಹಲಿ(ಅ.​​ 26): ಪಿಎಂ ಮೋದಿ ಪ್ರತಿಮೆಯನ್ನು ಸುಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಪ್ರತಿಕ್ರಿಯಿಸಿದ್ದು, ಇದೊಂದು ನಾಚಿಕೆಗೇಡಿನ ಕೆಲಸ ಎಂದು ಕಾಂಗ್ರೆಸ್​ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. 

ದಸರಾ ಹಬ್ಬದ ಪ್ರಯುಕ್ತ ಎಲ್ಲೆಡೆ ಮಹಿಷಾಸುರನ ಪ್ರತಿಕೃತಿ ದಹಿಸಿ ಸಂಭ್ರಮಿಸುವುದು ವಾಡಿಕೆ. ಆದರೆ, ಕೇಂದ್ರದ ಇತ್ತೀಚಿನ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರು ದೇಶಾದ್ಯಂತ ಉಗ್ರ ಹೋರಾಟ ನಡೆಸುತ್ತಿರುವ ಹಿನ್ನೆಲೆ, ಪಂಜಾಬ್​ನಲ್ಲಿ ನಿನ್ನೆ ದಸರಾ ಹಬ್ಬದ ಆಚರಣೆ ವೇಳೆ ಮಹಿಷಾಸುರನ ಪ್ರತಿಮೆ ಬದಲು ಮೋದಿ ಪ್ರತಿಮೆ ಸುಡಲಾಗಿತ್ತು. ಈ ಘಟನೆ ಇದೀಗ ರಾಷ್ಟ್ರಾದ್ಯಂತ ದೊಡ್ಡ ಚರ್ಚೆ ಹುಟ್ಟು ಹಾಕಿದೆ. 

ಪಂಜಾಬ್​ನಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್​ ಸರ್ಕಾರ ಈ ಹಿಂದಿನಿಂದಲೂ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿತ್ತು. ಹೀಗಾಗಿ ಕಾಂಗ್ರೆಸ್​ ನಾಯಕರೇ ಮುಂದೆ ನಿಂತು ಈ ಹೀಗೆ ಮಾಡಿದ್ದಾರೆಂಬುವುದು ಬಿಜೆಪಿ ನಾಯಕರ ಆರೋಪ. ಈ ಸಂಬಂಧ ಇಂದು ಸರಣಿ ಟ್ವೀಟ್ ಮಾಡುವ ಮೂಲಕ ಜೆ.ಪಿ. ನಡ್ಡಾ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್​ವಿರುದ್ಧ ಕಿಡಿಕಾರಿದ್ದಾರೆ.

ಈ ಘಟನೆ ಬೆನ್ನಲ್ಲೇ ಸರಣಿ ಟ್ವೀಟ್​ ಮಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಕಾಂಗ್ರೆಸ್​ ವಿರುದ್ಧ ಕಿಡಿಕಾರಿ 'ಪ್ರಜಾಪ್ರಭುತ್ವದಲ್ಲಿ ನಿರಾಶೆ ಮತ್ತು ನಾಚಿಕೆಗೇಡು ತನದ ಸಂಯೋಜನೆ ನಿಜಕ್ಕೂ ಅಪಾಯಕಾರಿ. ಒಂದೆಡೆ ತಾಯಿ ಸಭ್ಯತೆ ಪ್ರಜಾಪ್ರಭುತ್ವದ ಮಹತ್ವ ಎಂದು ಖಾಲಿ ವಾಕ್ಚಾತುರ್ಯ ಪ್ರದರ್ಶಿಸುತ್ತಿದ್ದರೆ, ಮತ್ತೊಂದೆಡೆ ಮಗ ದ್ವೇಷ, ಕೋಪ, ಸುಳ್ಳು, ಮತ್ತು ಆಕ್ರಮಣಶೀಲತೆಯನ್ನು ಪ್ರದರ್ಶಿಸುತ್ತಿದ್ದಾರೆ. ಕಾಂಗ್ರೆಸ್​ ಪಕ್ಷದಲ್ಲಿ ಈ ಡಬಲ್​ ಸ್ಟ್ಯಾಂಡರ್ಡ್ಸ್ ಸಮೃದ್ಧವಾಗಿದೆ!' ಎಂದು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧ ಹರಿಹಾಯ್ದಿದ್ದಾರೆ.