ಎಐಎಸ್ಎ ಅಧ್ಯಕ್ಷೆ ನೇಹಾ ಬೋರಾ ಅವರು ದೇವಸ್ಥಾನದ ಅರ್ಚಕರು ಮತ್ತು ಬ್ರಾಹ್ಮಣ ಮಹಿಳೆಯರ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಇಂಡಿ ಒಕ್ಕೂಟದ ನಾಯಕರು ಮೌನ ವಹಿಸಿರುವುದನ್ನು ಬಿಜೆಪಿ ನಾಯಕರು ಕಟುವಾಗಿ ಟೀಕಿಸಿದ್ದಾರೆ.
ನವದೆಹಲಿ (ನ.3): ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ಅಧ್ಯಕ್ಷೆ ನೇಹಾ ಬೋರಾ, ದೇವಸ್ಥಾನಗಳ ಅರ್ಚಕರು ಹಾಗೂ ಬ್ರಾಹ್ಮಣ ಮಹಿಳೆಯರ ಕುರಿತು ನೀಡಿರುವ ಹೇಳಿಕೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ರಾಜಕೀಯ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ವೀಡಿಯೊ ಹಂಚಿಕೊಂಡಿರುವ ಭಾರತೀಯ ಜನತಾ ಪಕ್ಷ (BJP), ವಿಪಕ್ಷಗಳ ನಾಯಕರ ನಿಲುವನ್ನು ಕಠಿಣವಾಗಿ ಪ್ರಶ್ನಿಸಿದೆ. ಎಐಎಸ್ಎ ಸಂಘಟನೆಯ ಪ್ರತಿಭಟನೆಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದ್ದ ನೇಹಾ ಬೋರಾ, ಇತ್ತೀಚೆಗೆ ಸಿಜೆಪಿ ಪ್ರತಿಭಟನೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮಾರ್ಚ್ಗಳಲ್ಲಿಯೂ ಭಾಗವಹಿಸಿ ಸುದ್ದಿಯಲ್ಲಿದ್ದರು. ಇದೀಗ ಅವರು ದೇವಾಲಯಗಳು ಹಾಗೂ ಅರ್ಚಕರ ಕುರಿತು ನೀಡಿರುವ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.
ಕಾಕ್ರೋಚ್ ಜನತಾ ಪಾರ್ಟಿಯಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುತ್ತಿದ್ದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಆಲ್ ಇಂಡಿಯಾ ಸ್ಟೂಡೆಂಟ್ ಅಸೋಸಿಯೇಷನ್ನ ಅಧ್ಯಕ್ಷ ನೇಹಾ ಬೋರಾ ಬ್ರಾಹ್ಮಣ ಹೆಣ್ಣುಮಕ್ಕಳು, ದೇವಸ್ಥಾನ, ದೇವಸ್ಥಾನದ ಅರ್ಚಕರ ವಿರುದ್ಧ ಅತ್ಯಂತ ಕೀಳು ಮಟ್ಟದ ಭಾಷೆಯನ್ನು ಬಳಸಿದ್ದಾರೆ. ಈ ಹಿಂದೆ ಎಐಎಸ್ಎ ಪ್ರತಿಭಟನೆಯಲ್ಲಿ ಮಾತ್ರವೇ ಕಾಣಿಸಿಕೊಳ್ಳತ್ತಿದ್ದ ನೇಹಾ ಬೋರಾಗೆ ಈಗ ಕಾಂಗ್ರೆಸ್ನ ವೇದಿಕೆಯಲ್ಲೇ ದೊಡ್ಡ ಸ್ಥಾನ ಸಿಕ್ಕಿದೆ. ಸ್ವತಃ ರಾಹುಲ್ ಗಾಂಧಿಯೇ ಈಕೆಯನ್ನು ಬೆಂಬಲಿಸಿ ಮಾತನಾಡಿದ್ದಾರೆ. ಆದರೆ, ಬ್ರಾಹ್ಮಣರು ಅರ್ಚಕರು ಹಾಗೂ ದೇವಸ್ಥಾನದ ಕುರಿತಾಗಿ ಈಕೆ ಮಾತನಾಡಿರುವ ವಿಚಾರಕ್ಕೆ ಈವರೆಗೂ ಕಾಂಗ್ರೆಸ್ ಸೇರಿದಂತೆ ಇಂಡಿ ಒಕ್ಕೂಟದ ಯಾವೊಂದು ಪಕ್ಷದ ಯಾವೊಬ್ಬ ನಾಯಕ ಕೂಡ ಆಕ್ಷೇಪ ಎತ್ತಿಲ್ಲ. ಕನಿಷ್ಠ ಆಕೆ ಹೇಳಿದ್ದು ತಪ್ಪು ಎನ್ನುವ ಧೈರ್ಯವನ್ನು ತೋರುತ್ತಿಲ್ಲ. ಅಷ್ಟಕ್ಕೂ ನಮ್ಮ ದೇಶದ್ದೇ ಒಂದು ಸಮುದಾಯದ ಮೇಲೆ ರಾಹುಲ್ ಗಾಂಧಿಗಾಗಲಿ, ಕಾಂಗ್ರೆಸ್ಗಾಗಲಿ, ಇಂಡಿ ಒಕ್ಕೂಟಕ್ಕಾಗಲಿ ಇರುವ ಸಮಸ್ಯೆಯೇನು ಅನ್ನೋದು ಅರ್ಥವಾಗಿಲ್ಲ.
ಈ ಹೇಳಿಕೆಯನ್ನು ಇಂಡಿ ಒಕ್ಕೂಟ ಯಾಕೆ ಖಂಡಿಸಲಿಲ್ಲ
ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ನೇಹಾ ಬೋರಾ ಅವರ ವಿಡಿಯೋವನ್ನು ಹಂಚಿಕೊಂಡು ಟೀಕಿಸಿದ್ದಾರೆ. 'ನೇಹಾ ಬೋರಾ ನೀಡಿರುವ ಹೇಳಿಕೆಯು ಧಾರ್ಮಿಕ ಸಂಪ್ರದಾಯಗಳು ಮತ್ತು ಅರ್ಚಕ ಸಮುದಾಯಕ್ಕೆ ಮಾಡಿದ ಅವಮಾನ. ರಾಹುಲ್ ಗಾಂಧಿ ಅವರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಈ ನಾಯಕರ ಹೇಳಿಕೆಗಳ ವಿರುದ್ಧ ಕಾಂಗ್ರೆಸ್ ಮತ್ತು ಇಂಡಿ (INDI) ಒಕ್ಕೂಟದ ನಾಯಕರು ಯಾಕೆ ಇದುವರೆಗೆ ಯಾವುದೇ ಸ್ಪಷ್ಟ ಆಕ್ಷೇಪ ವ್ಯಕ್ತಪಡಿಸಿಲ್ಲ ಅಥವಾ ಖಂಡಿಸಿಲ್ಲ?' ಎಂದು ಭಂಡಾರಿ ಪ್ರಶ್ನಿಸಿದ್ದಾರೆ.
ಅಲ್ಲದೆ, ಈ ಹಿಂದೆ ರಾಹುಲ್ ಗಾಂಧಿ ಅವರು ದೇವಾಲಯಗಳ ಕುರಿತು ನೀಡಿದ್ದ ಹೇಳಿಕೆಗಳನ್ನು ಪ್ರಸ್ತಾಪಿಸಿದ ಬಿಜೆಪಿ ನಾಯಕರು, ಮತಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಇಂತಹ ನಡೆಗಳನ್ನು ಪ್ರೋತ್ಸಾಹಿಸುತ್ತಿದೆ ಎಂದು ಆರೋಪಿಸಿದ್ದಾರೆ.
ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕ ಗೌರವ್ ಭಾಟಿಯಾ,'ಭಾರತದಲ್ಲಿ ಅರ್ಚಕರು ಮತ್ತು ಧಾರ್ಮಿಕ ಸಂಸ್ಥೆಗಳು ಇತಿಹಾಸದುದ್ದಕ್ಕೂ ಸಮಾಜ ಸೇವೆಯಲ್ಲಿ ತೊಡಗಿವೆ. ಪ್ರತಿಯೊಬ್ಬರನ್ನು ಒಟ್ಟಾರೆಯಾಗಿ ಗುರಿಯಾಗಿಸಿಕೊಂಡು ಮಾತನಾಡುವುದು ದುರುದ್ದೇಶಪೂರಿತ. ನೇಹಾ ಬೋರಾ ಅವರು ತಮ್ಮ ಹೇಳಿಕೆಗಳ ಮೂಲಕ ಸಮಾಜದಲ್ಲಿ ಧ್ರುವೀಕರಣ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಇತರ ಧಾರ್ಮಿಕ ಪ್ರಾರ್ಥನಾ ಮಂದಿರಗಳು ಅಥವಾ ಮೌಲ್ವಿಗಳ ಬಗ್ಗೆ ಇಂತಹ ವಿಮರ್ಶಾತ್ಮಕ ಮಾತುಗಳನ್ನು ಆಡಲು ಇವರು ಧೈರ್ಯ ತೋರುತ್ತಾರೆಯೇ?' ಎಂದು ಕಿಡಿಕಾರಿದ್ದಾರೆ.
ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸಮಾಜವಾದಿ ಪಕ್ಷದ ಸಂಸದ ರಾಜೀವ್ ರೈ 'ಯಾವುದೇ ಒಂದು ಸಮುದಾಯ, ಜಾತಿ ಅಥವಾ ಧರ್ಮದ ಬಗ್ಗೆ ಇಡೀ ಸಮೂಹವನ್ನು ಸಾಮಾನ್ಯೀಕರಿಸಿ ಮಾತನಾಡುವುದು ಸಂಪೂರ್ಣವಾಗಿ ತಪ್ಪು. ಪ್ರತಿಯೊಂದು ಧರ್ಮದಲ್ಲೂ ಒಳ್ಳೆಯವರು ಮತ್ತು ಕೆಟ್ಟವರು ಇರುತ್ತಾರೆ. ಇಂತಹ ವಿಚಾರಗಳನ್ನು ಇಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಯತ್ನಿಸುವುದು ಸರಿಯಲ್ಲ. ಇಂತಹ ಹೇಳಿಕೆಗಳಿಂದ ಪ್ರತಿಯೊಬ್ಬರೂ ದೂರವಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ನೇಹಾ ಬೋರಾ ಅವರ ಹೇಳಿಕೆ ಹಾಗೂ ಅದರ ಸುತ್ತಲೂ ನಡೆಯುತ್ತಿರುವ ರಾಜಕೀಯ ವಾಕ್ಸಮರವು ಸೋಶಿಯಲ್ ಮೀಡಿಯಾ ಹಾಗೂ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ನೇಹಾ ಬೋರಾ ತಾವು ಸಾಕಿ ಬೆಳೆಸಿರುವ ಮಗು ಎನ್ನುವಂತೆ ಪಾಲನೆ ಮಾಡ್ತಿರುವ ಕಾಂಗ್ರೆಸ್ ಪಕ್ಷದ ಉಳಿದ ನಾಯಕರು ಕೂಡ ಆಕೆ ಹೇಳಿದ್ದು ಸರಿಯಲ್ಲ ಎಂದೂ ಹೇಳುತ್ತಿಲ್ಲ. ನೇಹಾ ಬೋರಾ ಅವರ ಇಂಥ ಬಾಲಿಶ ಹೇಳಿಕೆಗಳು ಕಾಂಗ್ರೆಸ್ಗೆ ಲಾಭವಾಗುವುದಕ್ಕಿಂತ ಹೆಚ್ಚಾಗಿ, ಇದ್ದಿರುವ ಮತಗಳನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ ಅನ್ನೋದಂತೂ ಸ್ಪಷ್ಟ.






