ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಶಿಕ್ಷಣ ತಜ್ಞ ಸೋನಮ್ ವಾಂಗ್‌ಚುಕ್ ಅವರನ್ನು ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಪ್ರತಿಭಟನೆಗೆ ಹಲವಾರು ವಿರೋಧ ಪಕ್ಷಗಳು ಮತ್ತು ಚಲನಚಿತ್ರ ರಂಗದ ಸೆಲೆಬ್ರಿಟಿಗಳು ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ನೀಟ್ ಪರೀಕ್ಷೆಯಲ್ಲಿನ ಅಕ್ರಮ ವಿರೋಧಿಸಿ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಸುತ್ತಿದ್ದ ಪ್ರತಿಭಟನೆ ಮಹತ್ವರ ತಿರುವು ಪಡೆದುಕೊಂಡಿದೆ. ಉಪವಾಸ ಸತ್ಯಾಗ್ರಹದಲ್ಲಿದ್ದ ಶಿಕ್ಷಣ ತಜ್ಞ ಸೋನಮ್ ವಾಂಗ್‌ಚುಕ್ ಅವರನ್ನು ಪೊಲೀಸರು ಬಲವಂತವಾಗಿ ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ಪ್ರತಿಭಟನೆ ನಡೆಸುತ್ತಿದೆ. ಈ ವೇಳೆ ಪೊಲೀಸರು ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ನಡೆಸಿ ಸೋನಮ್ ವಾಂಗ್‌ಚುಕ್ ಅವರನ್ನು ಕರೆದುಕೊಂಡು ಹೋಗಲಾಗಿದೆ.

ಪರೀಕ್ಷಾ ಅಕ್ರಮಗಳ ವಿರುದ್ಧ ಸಿಜೆಪಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಹಲವು ವಿರೋಧ ಪಕ್ಷಗಳು ಈಗಾಗಲೇ ಬೆಂಬಲ ಸೂಚಿಸಿವೆ. ಆದರೆ ಕಾಂಗ್ರೆಸ್ ಅಧಿಕೃತವಾಗಿ ಬೆಂಬಲ ಘೋಷಿಸಿಲ್ಲ ಎಂಬ ಟೀಕೆಗಳು ಕೇಳಿಬಂದಿದ್ದವು. ಈ ಟೀಕೆಗಳ ಬೆನ್ನಲ್ಲೇ, ಕಾಂಗ್ರೆಸ್ ವಕ್ತಾರ ಹಾಗೂ ಸಂಸದ ಪವನ್ ಖೇರ್ ನಿನ್ನೆ ಸಿಜೆಪಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಸೋನಮ್ ವಾಂಗ್‌ಚುಕ್ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ಗೌರವಿಸದ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಕರೆ ನೀಡಿದರು.

ವಾಂಗ್ಚುಕ್‌ ಸತ್ಯಾಗ್ರಹಕ್ಕೆ ಸೆಲೆಬ್ರಿಟಿಗಳ ಭಾರಿ ಬೆಂಬಲ

ಸೋನಮ್ ವಾಂಗ್‌ಚುಕ್ ಅವರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಹಲವಾರು ಸೆಲೆಬ್ರಿಟಿಗಳು ಬೆಂಬಲ ನೀಡಿದ್ದಾರೆ. ಪ್ರಮುಖರಲ್ಲಿ ನಟರಾದ ಇಮ್ರಾನ್ ಖಾನ್, ಫಾತಿಮಾ ಸನಾ ಶೇಖ್ ಮತ್ತು ಸೋನಾಕ್ಷಿ ಸಿನ್ಹಾ ಸೇರಿದ್ದಾರೆ.

ಸೋನಾಕ್ಷಿ ಸಿನ್ಹಾ ಹೇಳಿಕೆ ನೀಡಿ, ‘ಅವರು ಹಸಿದಿದ್ದಾರೆ. ಅವರು ಏನನ್ನೂ ತಿಂದಿಲ್ಲ. ಅವರು ಯಾರಿಗಾಗಿ ಕುಳಿತಿದ್ದಾರೆ? ಆ ಮಕ್ಕಳ ಭವಿಷ್ಯಕ್ಕಾಗಿ ಅವರು ಕುಳಿತಿದ್ದಾರೆ. ನಾನು ಈ ದೇಶದ ಯುವಕರನ್ನು ಅಭಿನಂದಿಸಲು ಬಯಸುತ್ತೇನೆ. ಅವರು ತಮ್ಮ ಧ್ವನಿಯನ್ನು ಎತ್ತಿದ್ದಾರೆ. ಅವರು ಸತ್ಯಕ್ಕಾಗಿ, ಒಳ್ಳೆಯದಕ್ಕಾಗಿ ಹೋರಾಡುತ್ತಿದ್ದಾರೆ. ಆದರೆ ಯಾರೂ ಅವರ ಮಾತು ಏಕೆ ಕೇಳುತ್ತಿಲ್ಲ? ಯಾರೂ ಏಕೆ ಮಾತನಾಡುತ್ತಿಲ್ಲ? ಯಾರೂ ಅವರನ್ನು ನೋಡುತ್ತಿಲ್ಲ. ಆ ಮನುಷ್ಯ ಸತ್ತಾಗ ನೀವು ಎದ್ದೇಳುತ್ತೀರಾ? ಮತ್ತು ಅದು ಯಾರ ಜವಾಬ್ದಾರಿ?’ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ, ಶಬಾನಾ ಅಜ್ಮಿ, ಜೀನತ್ ಅಮಾನ್, ಪ್ರಕಾಶ್ ರಾಜ್, ನಾಸಿರುದ್ದೀನ್ ಶಾ, ರತ್ನಾ ಪಾಠಕ್ ಶಾ, ಅಭಯ್ ಡಿಯೋಲ್, ಸೋನಿ ರಜ್ದಾನ್ ಮತ್ತು ಓಮಿ ವೈದ್ಯ ಸೇರಿದಂತೆ ಚಲನಚಿತ್ರೋದ್ಯಮದ ಹಲವಾರು ಸೆಲೆಬ್ರಿಟಿಗಳು ಸೋನಮ್ ವಾಂಗ್ಚುಕ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Scroll to load tweet…