ಚೆನ್ನೈ(ಸೆ. 14) ಕೊರೋನಾ ನಡುವೆ ನೀಟ್ ಮತ್ತು ಜೆಇಇ  ಪರೀಕ್ಷೆ ನಡೆಸುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ  ಮಾತನಾಡಿದ್ದ  ತಮಿಳು ನಟ ಸೂರ್ಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು ಎಂದು  ಮದ್ರಾಸ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಅಮ್ರೇಶ್ವರ್ ಪ್ರತಾಪ್ ಸಹಿ ಅವರನ್ನು ನ್ಯಾಯಾಧೀಶ ಎಸ್ಎಂ ಸುಬ್ರಹ್ಮಣ್ಯಂ ಒತ್ತಾಯಿಸಿದ್ದಾರೆ.

ತಮಿಳು ನಾಡಿನಲ್ಲಿ ಮೂವರು ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳ ಕನಸುಗಳನ್ನು ಕಿತ್ತು ಹಾಕುತ್ತಿರುವ ನೀಟ್ ಪರೀಕ್ಷೆಯನ್ನು ಶಾಶ್ವತವಾಗಿ ರದ್ದುಗೊಳಿಸಿ. ಎಲ್ಲರೂ ಈ ಬಗ್ಗೆ ದನಿ ಎತ್ತಬೇಕು ಎಂದು  ಸೂರ್ಯ ಕೇಳಿಕೊಂಡಿದ್ದರು.

ಕೊರೋನಾ ಭಯಕ್ಕೆ ಎಲ್ಲ ಕಡೆ ವಿಡಿಯೋ ಕಾನ್ಫರೆನ್ಸ್ ಮೂಲಕ ವ್ಯವಹಾರ ನಡೆಸಲಾಗುತ್ತಿದೆ.  ನ್ಯಾಯಾಲಯಗಳು ಸಹ ವರ್ಚುವಲ್ ವಿಚಾರಣೆ ಮೂಲಕ ನ್ಯಾಯದಾನ ಮಾಡುತ್ತಿವೆ, ಆದರೆ ವಿದ್ಯಾರ್ಥಿಗಳಿಗೆ ಮಾತ್ರ ಯಾವುದೇ ಭಯವಿಲ್ಲದೆ ನೀಟ್ ಪರೀಕ್ಷೆಯನ್ನು ಪರೀಕ್ಷಾ ಕೇಂದ್ರಗಳಿಗೆ ಹೋಗಿ ಬರೆಯಿರಿ ಎನ್ನುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದರು.

NEET ಪರೀಕ್ಷೆ ನಿಯಮಗಳು ಗಮನವಿಟ್ಟು ನೋಡಿ

ನ್ಯಾಯಾಧೀಶರು ತಮ್ಮ ಸ್ವಂತ ಜೀವದ ಭಯದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಕಲಾಪ ನಡೆಸುತ್ತಿದ್ದಾರೆ.  ವಿದ್ಯಾರ್ಥಿಗಳಿಗೆ ಯಾವುದೇ ಭಯವಿಲ್ಲದೆ ನೀಟ್ ಪರೀಕ್ಷೆ ಬರೆಯಿರಿ ಎಂದು ಆದೇಶ ನೀಡುವ ಮೂಲಕ ಮಾನವೀಯತೆ, ನೈತಿಕತೆ ತೋರಿಸುತ್ತಿಲ್ಲ ಎಂಬರ್ಥದಲ್ಲಿ ಸೂರ್ಯ ಮಾತನಾಡಿದ್ದು ಕ್ರಮ ಯಾಕೆ ತೆಗೆದುಕೊಳ್ಳಬಾರದು ಎಂದು ನ್ಯಾಯಾಧೀಶ ಸುಬ್ರಹ್ಮಣ್ಯಂ ಕೇಳಿದ್ದಾರೆ.

ಕೊರೋನಾ ಕಾರಣಕ್ಕೆ ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ಮುಂದೂಡುವಂತೆ ವಿದ್ಯಾರ್ಥಿಗಳ ಸಮೂಹ ಮಾಡಿಕೊಂಡಿದ್ದ ಮನವಿಯನ್ನು ಆಗಸ್ಟ್ 17ರಂದು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಇನ್ನೊಂದು ಕಡೆ ಕಾಂಗ್ರೆಸ್ ಸೇರಿ ವಿಪಕ್ಷಗಳು ನೀಟ್ ಪರೀಕ್ಷೆ ನಡೆಸುವ ಮೂಲಕ ಸರ್ಕಾರ ವಿದ್ಯಾರ್ಥಿಗಳ ಬದುಕಿನೊಂದಿಗೆ ಆಟ ಆಡುತ್ತಿದೆ ಎಂದು ಆರೋಪಿಸಿದ್ದವು.