ಪಟನಾ(ಅ.25): ಬಿಹಾರದಲ್ಲಿ ಮತ್ತೊಂದು ಚುನಾವಣಾಪೂರ್ವ ಸಮೀಕ್ಷೆಯು ಬಿಜೆಪಿ-ಜೆಡಿಯು ಕೂಟ ಜಯಿಸಲಿದೆ ಎಂದು ಭವಿಷ್ಯ ನುಡಿದಿದೆ.

ಜೆಡಿಯು+ಬಿಜೆಪಿ ಮಿತ್ರಕೂಟವಾಗಿರುವ ಎನ್‌ಡಿಎಗೆ 135ರಿಂದ 159 ಸ್ಥಾನ, ಆರ್‌ಜೆಡಿ+ಕಾಂಗ್ರೆಸ್‌ ಹಾಗೂ ಇತರರ ಮಹಾಮೈತ್ರಿಕೂಟಕ್ಕೆ 77ರಿಂದ 98 ಸ್ಥಾನ, ಎನ್‌ಡಿಎ ಕೂಟದಿಂದ ಹೊರಬಿದ್ದು ಪ್ರತ್ಯೇಕವಾಗಿ ಸ್ಪರ್ಧಿಸಿರುವ ಎಲ್‌ಜೆಪಿಗೆ ಕೇವಲ 1ರಿಂದ 5 ಸ್ಥಾನ ಹಾಗೂ ಇತರರಿಗೆ ಕೇವಲ 4ರಿಂದ 8 ಸ್ಥಾನ ದೊರಕಬಹುದು ಎಂದು ‘ಎಬಿಪಿ ನ್ಯೂಸ್‌’ ಹಿಂದಿ ಸುದ್ದಿವಾಹಿನಿಯು ಶನಿವಾರ ಸಂಜೆ ಸಮೀಕ್ಷಾ ವರದಿ ಪ್ರಸಾರ ಮಾಡಿದೆ. ಮೂರು ದಿನಗಳ ಹಿಂದೆ ಇಂಗ್ಲಿಷ್‌ ವಾಹಿನಿಯೊಂದು ಬಿತ್ತರಿಸಿದ ಸಮೀಕ್ಷೆಯಲ್ಲೂ ಇದೇ ರೀತಿಯ ಫಲಿತಾಂಶ ಬಂದಿತ್ತು ಎಂಬುದು ಗಮನಾರ್ಹ.

ಇದೇ ವೇಳೆ ಎನ್‌ಡಿಎಗೆ ಶೇ.45, ಆರ್‌ಜೆಡಿ ಕೂಟಕ್ಕೆ ಶೇ.35, ಎಲ್‌ಜೆಪಿಗೆ ಶೇ.4 ಹಾಗೂ ಇತರರಿಗೆ ಶೇ.18 ಮತ ಬೀಳುವ ಅಂದಾಜು ಲಭಿಸಿದೆ ಎಂದು ಎಬಿಪಿ ನ್ಯೂಸ್‌ ವರದಿ ಮಾಡಿದೆ.

ಮುಖ್ಯಮಂತ್ರಿ ಯಾರಾಗಬೇಕು ಎಂಬ ಪ್ರಶ್ನೆಗೆ ಜೆಡಿಯುನ ನಿತೀಶ್‌ ಕುಮಾರ್‌ ಪರ ಶೇ.30, ಆರ್‌ಜೆಡಿಯ ತೇಜಸ್ವಿ ಯಾದವ್‌ ಪರ ಶೇ.20, ಎಲ್‌ಜೆಪಿಯ ಚಿರಾಗ್‌ ಪಾಸ್ವಾನ್‌ ಪರ ಶೇ.14 ಹಾಗೂ ಬಿಜೆಪಿಯ ಸುಶೀಲ್‌ ಮೋದಿ ಪರ ಶೇ.10 ಮಂದಿ ಮತ ಚಲಾಯಿಸಿದ್ದಾರೆ.