ಜೈಪುರ(ಡಿ.01): ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಎನ್‌ಡಿಎ ಮಿತ್ರ ಪಕ್ಷವಾದ ರಾಷ್ಟ್ರೀಯ ಲೋಕತಾಂತ್ರಿಕ ಪಾರ್ಟಿ(ಆರ್‌ಎಲ್‌ಪಿ) ಬೆಂಬಲಿಸಿದೆ.

‘ಒಂದು ವೇಳೆ ಕೇಂದ್ರ ಸರ್ಕಾರ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯದಿದ್ದರೆ ಎನ್‌ಡಿಎ ಮೈತ್ರಿಕೂಟದಿಂದ ಹೊರಬರಬೇಕಾಗುತ್ತದೆ’ ಎಂದು ಆರ್‌ಎಲ್‌ಪಿ ಸಂಸ್ಥಾಪಕ ಹಾಗೂ ನಾಗೌರ್‌ ಸಂಸದ ಹನುಮಾನ್‌ ಬೇನಿವಾಲ್‌ ಸೋಮವಾರ ಎಚ್ಚರಿಸಿದ್ದಾರೆ. ಬೇನಿವಾಲ್‌ ಆರ್‌ಎಲ್‌ಪಿಯ ಏಕೈಕ ಸಂಸದರಾಗಿದ್ದು, ಪಕ್ಷವು ರಾಜಸ್ಥಾನದಲ್ಲಿ ಮೂವರು ಶಾಸಕರನ್ನು ಹೊಂದಿದೆ.

‘ರೈತರ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ಕೇಂದ್ರ ಸರ್ಕಾರ ಸೂಕ್ತ, ಪ್ರಾಮಾಣಿಕ ಕ್ರಮ ಕೈಗೊಳ್ಳದೇ ಇದ್ದಲ್ಲಿ ಎನ್‌ಡಿಎ ಮೈತ್ರಿಯನ್ನು ತ್ಯಜಿಸುವ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಆರ್‌ಎಲ್‌ಪಿ ಎನ್‌ಡಿಎ ಪಾಲುದಾರ ಪಕ್ಷವಾಗಿರಬಹುದು. ಆದರೆ ಅದರ ಶಕ್ತಿ ಯುವಜನತೆ ಮತ್ತು ಕೃಷಿಕರಲ್ಲಿ ಅಡಗಿದೆ’ ಎಂದು ಬೆನಿವಾಲ್‌ ಟ್ವೀಟ್‌ ಮಾಡಿದ್ದಾರೆ.

ಇದೇ ವೇಳೆ ಕೃಷಿ ಕಾಯ್ದೆಯನ್ನು ತತ್‌ಕ್ಷಣವೇ ಹಿಂಪಡೆಯುವಂತೆ ಮತ್ತು ಸ್ವಾಮಿನಾಥನ್‌ ಆಯೋಗದ ಎಲ್ಲಾ ಶಿಫಾರಸುಗಳನ್ನು ಜಾರಿ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಮನವಿ ಮಾಡಿದ್ದಾರೆ.