ನವದೆಹಲಿ(ಸೆ.07): ಮಾದಕವಸ್ತು ಕಳ್ಳಸಾಗಣೆ ಜಾಲವೊಂದನ್ನು ಬಯಲಿಗೆಳೆದಿರುವ ದೆಹಲಿಯ ಎನ್‌ಸಿಬಿ ಅಧಿಕಾರಿಗಳು, 7 ಜನರನ್ನು ಬಂಧಿಸಿ ಅವರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 48 ಕೋಟಿ ರು. ಬೆಲೆಬಾಳುವ ಹೆರಾಯಿನ್‌ ಅನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರಲ್ಲಿ ಓರ್ವ ಆಫ್ರಿಕನ್‌ ಪುರುಷ ಮತ್ತು ಮ್ಯಾನ್ಮಾರ್‌ ಮೂಲದ ಓರ್ವ ಮಹಿಳೆ ಸೇರಿದ್ದಾಳೆ. ಅಂತಾರಾಷ್ಟ್ರೀಯ ಕೊರಿಯರ್‌ ಸೇವೆಗಳ ಮೂಲಕ ವಿದೇಶದಿಂದ ಈ ಮಾದಕ ವಸ್ತುಗಳನ್ನು ಭಾರತಕ್ಕೆ ತರಲಾಗುತ್ತಿತ್ತು ಎಂಬ ಸುಳಿವಿನ ಹಿನ್ನೆಲೆಯಲ್ಲಿ ದಾಳಿ ಮಾಡಿದ ಅಧಿಕಾರಿಗಳು 7 ಜನರನ್ನು ಬಂಧಿಸಿದ್ದಾರೆ.

ಆಗಸ್ಟ್‌ ಮೊದಲ ವಾರದಲ್ಲಿ ದಕ್ಷಿಣ ಆಫ್ರಿಕಾದಿಂದ ಬಂದಿದ್ದ 970 ಗ್ರಾಂ ತೂಕದ ಹೆರಾಯಿನ್‌ ಅನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಆದರೆ ಇಡೀ ಜಾಲವನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ಹೆರಾಯಿನ್‌ ಪ್ಯಾಕೆಟ್‌ ಅನ್ನು ನಕಲಿ ಪ್ಯಾಕ್‌ನೊಂದಿಗೆ ಬದಲಾಯಿಸಿ ಹಾಗೆಯೇ ಬಿಟ್ಟಿದ್ದರು.

ಬಳಿಕ ಅದನ್ನು ಪಡೆದುಕೊಳ್ಳುವವರ ಮೇಲೆ ನಿಗಾ ಇರಿಸಿದ್ದ ಅಧಿಕಾರಿಗಳ ತಂಡ, ಮನೆಯೊಂದರ ಮೇಲೆ ದಾಳಿ ನಡೆಸಿ ಇಡೀ ಜಾಲವನ್ನು ಬಯಲಿಗೆಳೆದಿದೆ. ಜೊತೆಗೆ 48 ಕೋಟಿ ರು. ಮೌಲ್ಯದ ಹೆರಾಯಿನ್‌ ಅನ್ನು ವಶಪಡಿಸಿಕೊಂಡಿದೆ.