* ಪಕ್ಷದಲ್ಲಿ ಉನ್ನತ ಹುದ್ದೆಗಾಗಿ ಬಂಡಾಯ ಬಾವುಟ ಹಾರಿಸಿದ್ದ ಸಿಧು* ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ಸಿಧು ನೇಮಕ* ಜೊತೆಗೆ ಇತರೆ ನಾಲ್ವರನ್ನು ಕಾರ್ಯಾಧ್ಯಕ್ಷರಾಗಿ ನೇಮಕ
ನವದೆಹಲಿ(ಜು.19): ಪಕ್ಷದಲ್ಲಿ ಉನ್ನತ ಹುದ್ದೆಗಾಗಿ ಬಂಡಾಯ ಬಾವುಟ ಹಾರಿಸಿದ್ದ ಮಾಜಿ ಕ್ರಿಕೆಟಿಗನ ಒತ್ತಡಕ್ಕೆ ಮಣಿದಿರುವ ಕಾಂಗ್ರೆಸ್, ನವಜೋತ್‌ಸಿಂಗ್ ಸಿಧು ಅವರನ್ನು ಪಂಜಾಬ್ ರಾಜ್ಯ ಕಾಂಗ್ರೆಸ್ ಘಟಕದ ನೂತನ ಅಧ್ಯಕ್ಷರಾಗಿ ನೇಮಿಸಿದೆ. ಜೊತೆಗೆ ಇತರೆ ನಾಲ್ವರನ್ನು ಕಾರ್ಯಾಧ್ಯಕ್ಷರಾಗಿ ನೇಮಿಸಿ ಭಾನುವಾರ ಆದೇಶ ಹೊರಡಿಸಿದೆ.
ಇದರೊಂದಿಗೆ ಅಧ್ಯಕ್ಷ ಹುದ್ದೆ ಸಿಗದಿದ್ದಲ್ಲಿ ಆಮ್‌ಆದ್ಮಿ ಪಕ್ಷ ಸೇರಲು ಸಜ್ಜಾಗಿದ್ದ ಸಿಧು ಅವರನ್ನ ತನ್ನಲ್ಲೇ ಉಳಿಸಿಕೊಳ್ಳುವ ಯತ್ನವನ್ನು ಕಾಂಗ್ರೆಸ್ ಮಾಡಿದೆ. ಸಿಎಂ ಅಮರೀಂದರ್ ಜೊತೆ ಬಹಿರಂಗವಾಗಿಯೇ ಸಂಘರ್ಷಕ್ಕೆ ಇಳಿದಿದ್ದ ಡಿಸಿಎಂ ಇಲ್ಲವೇ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಸಿಧುಗೆ ಈ ಹುದ್ದೆಗಳನ್ನೂ ನೀಡಲು ಹಲವು ಹಳೆಯ ಮತ್ತು ಹಿರಿಯ ಕಾಂಗ್ರೆಸ್ಸಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಹೊರತಾಗಿಯೂ ಚತುರ ಮಾತುಕಾರನಿಗೆ ಮಣೆ ಹಾಕುವ ಮೂಲಕ, ಮುಂದಿನ ಚುನಾವಣೆಯಲ್ಲಿ ಅವರನ್ನು ತನ್ನ ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳುವ ಇರಾದೆಯನ್ನು ವ್ಯಕ್ತಪಡಿಸಿದೆ.
2004ರಲ್ಲಿ ಬಿಜೆಪಿ ಸೇರಿದ್ದ ಸಿಧು, ಅಂದಿನಿಂದ 2014ರವರೆಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಬಂದಿದ್ದರು. 2016ರಲ್ಲಿ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗಿತ್ತು. ಆದರೆ 2017ರಲ್ಲಿ ಬಿಜೆಪಿ ತೊರೆದಿದ್ದ ಸಿಧು ಕಾಂಗ್ರೆಸ್ ಸೇರಿದ್ದರು. ಜೊತೆಗೆ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದರು.
