ಮುಂಬೈ ದಾಳಿಗೆ 11 ವರ್ಷ: ಉಸಿರಿರುವವರೆಗೂ ಹುತಾತ್ಮರನ್ನು ನೆನೆಯುವ ಉದ್ಘೋಷ!
ಮುಂಬೈ ಭಯೋತ್ಪಾದಕ ದಾಳಿಗೆ ಭರ್ತಿ 11 ವರ್ಷ| ಮನುಕುಲದ ಮೇಲೆ ಭಯೋತ್ಪಾದನೆಯ ಪೈಶಾಚಿಕ ದಾಳಿ| ವಿದೇಶಿಯರೂ ಸೇರಿ ಒಟ್ಟು 166 ಜನರನ್ನು ಬಲಿ ಪಡೆದಿದ್ದ ಪಾಕ್ ಉಗ್ರರು| ನಗರದ ವಿವಿಧೆಡೆ ಏಕಕಾಲದಲ್ಲಿ ದಾಳಿ ನಡೆಸಿದ್ದ ದುರುಳರು| ಮಾನವೀಯತೆಯ ಉಳಿವಿಗಾಗಿ ಪ್ರಾಣ ತೆತ್ತ ಧೀರ ಸಮವಸ್ತ್ರಧಾರಿಗಳು| ಧೀರ ಹುತಾತ್ಮರನ್ನು ನೆನದು ಕಂಬನಿ ಮಿಡಿದ ದೇಶವಾಸಿಗಳು|
ಮುಂಬೈ(ನ.26): 26/11.. ಈ ದಿನವನ್ನು ಭಾರತವಷ್ಟೇ ಅಲ್ಲ, ಇಡೀ ಜಗತ್ತು ತುಂಬು ಕಣ್ಣುಗಳಿಂದ ನೆನಯುತ್ತದೆ. ಮನುಕುಲದ ಮೇಲೆ ಭಯೋತ್ಪಾದನೆಯ ಪೈಶಾಚಿಕ ದಾಳಿಯನ್ನು ಇಡೀ ಜಗತ್ತು ದು:ಖದಿಂದ ಸ್ಮರಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ಮಾನವೀಯತೆಯನ್ನು ಉಳಿಸಲು ತಮ್ಮ ಪ್ರಾಣವನ್ನೇ ಸಮರ್ಪಿಸಿದ ಸಮವಸ್ತ್ರದ ಧೀರರನ್ನು ಅತ್ಯಂತ ಹೆಮ್ಮೆಯಿಂದ ನೆನೆಯುತ್ತದೆ.
ಮುಂಬೈ ಭಯೋತ್ಪಾದಕ ದಾಳಿಗೆ ಇಂದು ಭರ್ತಿ 11 ವರ್ಷ. ಸಮುದ್ರ ಮಾರ್ಗವಾಗಿ ದೇಶದ ವಾಣಿಜ್ಯ ನಗರಿ ತಲುಪಿದ್ದ 10 ಜನ ಪಾಕಿಸ್ತಾನಿ ರಾಕ್ಷಸರು, ನಗರದಾದ್ಯಂತ ಗುಂಡಿನ ಮಳೆಗರೆದು ಸುಮಾರು 166 ಜನರನ್ನು ಬಲಿ ಪಡೆದಿದ್ದಲ್ಲದೇ ಸರಿಸುಮಾರು 300 ಜನರನ್ನು ಘಾಸಿಗೊಳಿಸಿದ್ದರು.
"
ನಗರದ ಪ್ರಮುಖ ಸ್ಥಳಗಳ ಮೇಲೆ ಏಕಾಏಕಿ ದಾಳಿ ನಡೆಸಿದ್ದ ಪೈಶಾಚಿಕ ಉಗ್ರರು, ಮಕ್ಕಳು ಮಹಿಳೆಯರನ್ನಲ್ಲದೇ ಮುಗ್ಧ ಜನರ ಮೇಲೆ ಗುಂಡಿನ ಮಳೆಗರೆದರು.
ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್, ತಾಜ್ ಹೋಟೆಲ್, ನಾರಿಮನ್ ಹೌಸ್, ಲಿಯೊಪೋಲ್ಡ್ ಕೆಫೆ ಸೇರಿದಂತೆ ನಗರದ ಪ್ರಮುಖ ಸ್ಥಳಗಳು ಉಗ್ರರ ಟಾರ್ಗೆಟ್ ಆದವು.
ಉಗ್ರರ ಗುಂಡೇಟಿಗೆ 139 ಜನ ಭಾರತೀಯರು, 6 ಅಮೆರಿಕ, 3 ಜರ್ಮನಿ, 7 ಇಸ್ರೇಲ್, 2 ಆಸ್ಟ್ರೆಲೀಯಾ, 2 ಕೆನಾಡಾ, 2 ಫ್ರಾನ್ಸ್, 1 ಇಟಲಿ, 1, ಇಂಗ್ಲೆಂಡ್, 1 ನೆದರ್’ಲ್ಯಾಂಡ್, 1 ಜಪಾನ್, 1 ಜೋರ್ಡಾನ್, 1 ಮಲೇಷಿಯಾ, 1 ಮಾರಿಷಸ್, 1 ಮೆಕ್ಸಿಕೋ, 1 ಸಿಂಗಾಪುರ್, 1 ಥಾಯ್ಲೆಂಡ್ ನಾಗರಿಕರು ಸಾವೀಗಿಡಾದರು.
ಪಾಕಿಸ್ತಾನದಲ್ಲಿ ದಾಳಿಗೆ ಸೂಕ್ತ ತರಬೇತಿ ಪಡೆದಿದ್ದ ಉಗ್ರರು, ಯೋಜಿತವಾಗಿ ವಿವಿಧೆಡೆ ದಾಳಿ ನಡೆಸಿ ನಗರವನ್ನು ಸ್ಮಶಾನಗೊಳಿಸಿದ್ದರು.
ಈ ರಾಕ್ಷಸರನ್ನು ಮಟ್ಟ ಹಾಕಲು ಸಜ್ಜಾದ ಮುಂಬೈ ಪೊಲೀಸ್ ಇಲಾಖೆ, ಭಾರತೀಯ ಸೇನೆ ಹಾಗೂ NSG, ಜಂಟಿ ಕಾರ್ಯಾಚರಣೆಯ ಮೂಲಕ ಎಲ್ಲ 10 ಭಯೋತ್ಪಾದಕರನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾದರು. 9 ಭಯೋತ್ಪಾದಕರು ಕಾರ್ಯಾಚರಣೆಯಲ್ಲಿ ಹತರಾದರೆ, ಓರ್ವ ಉಗ್ರ ಅಜ್ಮಲ್ ಕಸಾಬ್’ನನ್ನು ದೀರ್ಘ ವಿಚಾರಣೆ ಬಳಿಕ ಪುಣೆಯ ಯರವಾಡಾ ಜೈಲಿನಲ್ಲಿ ನೇಣಿಗೇರಿಸಲಾಯಿತು.
ಅಲ್ಲದೇ ದಾಳಿಗೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಪಾಕಿಸ್ತಾನ ಮೂಲದ ಉಗ್ರ ಡೆವಿಡ್ ಹೆಡ್ಲಿಯ ವಿಚಾರಣೆ ನಡೆದು 35 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಅನುಭವಿಸುತ್ತಿದ್ದಾನೆ.
ಆದರೆ ಈ ಕಾರ್ಯಾಚರಣೆಯಲ್ಲಿ ಜನರ ಪ್ರಾಣ ರಕ್ಷಣೆಗಾಗಿ 15 ಜನ ಪೊಲೀಸರು ಹಾಗೂ ಇಬ್ಬರು NSG ಕಮಾಂಡೋಗಳು ಹತರಾದರು. ದೇಶ ರಕ್ಷಣೆಯಲ್ಲಿ ಹುತಾತ್ಮರಾದ ಈ ವೀರರಿಗೆ ಇಡೀ ದೇಶ ನಮನ ಸಲ್ಲಿಸುತ್ತಿದೆ. ಅಂತೆಯೇ ನಿಮ್ಮ ಸುವರ್ಣನ್ಯೂಸ್.ಕಾಂ ಕೂಡ ಹುತಾತ್ಮ ವೀರರನ್ನು ನೆನೆಯುತ್ತಾ ಅವರಿಗಾಗಿ ಈ ವರದಿಯನ್ನು ಸಮರ್ಪಿಸುತ್ತಿದೆ.
ಹೇಮಂತ ಕರ್ಕರೆ:
ಮಹಾರಾಷ್ಟ್ರದ ಎಟಿಎಫ್ ಮುಖ್ಯತಸ್ಥರಾಗಿದ್ದ ಐಪಿಎಸ್ ಅಧಿಕಾರಿ ಹೇಮಂತ್ ಕರ್ಕರೆ, ಕಾರ್ಯಾಚರಣೆ ವೇಳೆ ಉಗ್ರರ ಗುಂಡೇಟಿಗೆ ಬಲಿಯಾಗಿದ್ದರು.
ಅಶೋಕ್ ಕಾಮ್ಟೆ:
ಮುಂಬೈ ನಗರದ ಅಡಿಶನ್ ಕಮಿಷನರ್ ಆಗಿದ್ದ ಅಶೋಕ್ ಕಾಮ್ಟೆ, ಕಾರ್ಯಾಚರಣೆ ವೇಳೆ ಉಗ್ರರ ಗುಂಡೇಟಿಗೆ ಎದೆಯೊಡ್ಡಿ ಹುತಾತ್ಮರಾದರು.
ವಿಜಯ್ ಸಾಲಸ್ಕರ್:
ಎನ್’ಕೌಂಟರ್ ಸ್ಪೆಶಲಿಸ್ಟ್ ಎಂದೇ ಖ್ಯಾತಿಗಳಿಸಿದ್ದ ವಿಜಯ್ ಸಾಲಸ್ಕರ್, ಉಗ್ರರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿ ತಮ್ಮ ಪ್ರಾಣ ತೆತ್ತರು.
ಶಶಾಂಕ್ ಶಿಂಧೆ:
ಸಿನಿಯರ್ ಇನ್ಸಪೆಕ್ಟರ್ ಹುದ್ದೆಯಲ್ಲಿದ್ದ ಶಶಾಂಕ್ ಶಿಂಧೆ, ಕಾರ್ಯಾಚರಣೆ ವೇಳೆ ಉಗ್ರರ ಗುಂಡೇಟಿಗೆ ಬಲಿಯಾದರು.
ತುಕಾರಾಂ ಓಂಬ್ಳೆ:
ಮುಂಬೈ ಪೊಲೀಸ್ ಇಲಾಖೆಯಲ್ಲಿ ಅಸಿಸ್ಟಂಟ್ ಸಬ್ ಇನ್ಸಪೆಕ್ಟರ್ ಹುದ್ದೆಯಲ್ಲಿದ್ದ ತುಕಾರಾಂ ಓಂಬ್ಳೆ, ಉಗ್ರ ಅಜ್ಮಲ್ ಕಸಬ್’ನನ್ನು ಸೆರೆ ಹಿಡಿಯುವ ವೇಳೆ ಗುಂಡೇಟು ತಗುಲು ಹುತಾತ್ಮರಾದರು. ಕಸಬ್ ಹಾರಿಸಿದ ಗುಂಡು ತಮ್ಮ ದೇಹ ಛಿದ್ರ ಮಾಡಿದ್ದರೂ, ಆತನನ್ನು ಗಟ್ಟಿಯಾಗಿ ಹಿಡಿದು ಕೊನೆಗೆ ಪ್ರಾಣ ಬಿಟ್ಟ ಧೀರ ತುಕಾರಾಂ ಓಂಬ್ಳೆ.
ಸಂದೀಪ್ ಉನ್ನಿಕೃಷ್ಣನ್:
NSG ಕಮಾಂಡೋ ಆಗಿದ್ದ ಮೇಜರ್ ಸಂದೀಪ್ ಉನ್ನಿಕೃಷ್ಣನ್, ತಾಜ್ ಹೋಟೆಲ್’ನಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದ ತಮ್ಮ ಸಹೋದ್ಯೋಗಿಯನ್ನು ರಕ್ಷಿಸುವ ವೇಳೆ ಗುಂಡೇಟು ತಗುಲಿ ಹುತಾತ್ಮರಾದರು.
ಗಜೇಂದ್ರ ಸಿಂಗ್ ಬಿಷ್ಟ:
NSGಯಲ್ಲಿ ಹವಾಲ್ದಾಶರ್ ಆಗಿದ್ದ ಗಜೇಂದ್ರ ಸಿಂಗ್ ಬಿಷ್ಟ, ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ ಗುಂಡೇಟಿಗೆ ಹುತಾತ್ಮರಾದರು.
ನವೆಂಬರ್ 26ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: