ನಾಡಿದ್ದು ಮೋದಿ 3.0 ಪ್ರಮಾಣ?: ಬಿಜೆಪಿಗೆ ಟಿಡಿಪಿ, ಜೆಡಿಯು ಬೆಂಬಲ ಘೋಷಣೆ
ಲೋಕಸಭಾ ಚುನಾವಣೆಯಲ್ಲಿ 293 ಸ್ಥಾನ ಗೆದ್ದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ನಾಯಕರಾಗಿ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ನವದೆಹಲಿ (ಜೂ.06): ಲೋಕಸಭಾ ಚುನಾವಣೆಯಲ್ಲಿ 293 ಸ್ಥಾನ ಗೆದ್ದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ನಾಯಕರಾಗಿ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಬುಧವಾರ ಇಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಸೇರಿದಂತೆ ಮೈತ್ರಿಕೂಟದ ನಾಯಕರು ಎನ್‌ಡಿಎ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಇದರೊಂದಿಗೆ ನಿತೀಶ್ ಹಾಗೂ ನಾಯ್ಡು ಇಂಡಿಯಾ ಕೂಟದ ಕಡೆ ವಾಲುವ ಸಾಧ್ಯತೆಗೆ ಅಂತಿಮ ವಿರಾಮ ಬಿದ್ದಿದೆ.ತನ್ಮೂಲಕ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ದೇಶದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ.
ಎನ್‌ಡಿಎ ನಾಯಕರು ಜೂ.7ರಂದು (ಶುಕ್ರವಾರ) ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಸರ್ಕಾರ ರಚನೆ ಹಕ್ಕು ಮಂಡಿಸುವ ನಿರೀಕ್ಷೆಯಿದೆ. ಅಲ್ಲದೆ, ಜೂ.8ರಂದು ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಂದು ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರೆ ಪಂ. ಜವಾಹರಲಾಲ್ ನೆಹರು ನಂತರ ಸತತ 3ನೇ ಅವಧಿಗೆ ಪ್ರಧಾನಿ ಆದ ಮೊದಲ ವ್ಯಕ್ತಿ ಎನ್ನಿಸಿಕೊಳ್ಳಲಿದ್ದಾರೆ. ಅಂತೆಯೇ ಸತತ 3ನೇ ಬಾರಿ ಪ್ರಧಾನಿಯಾದ ಮೊದಲ ಕಾಂಗ್ರೆಸ್ಸೇತರ ವ್ಯಕ್ತಿ ಎಂಬ ಕೀರ್ತಿಯನ್ನೂ ಪಡೆಯಲಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ: ಗ್ಯಾರಂಟಿ ಯೋಜನೆಗಳ ನಿಲ್ಲಿಸಲು ಕಾಂಗ್ರೆಸ್ ಶಾಸಕರ ಒತ್ತಡ?
ಎನ್‌ಡಿಎ ಕೂಟದ ಸಭೆ: ಬುಧವಾರ ಸಂಜೆ ಪ್ರಧಾನಿ ನಿವಾಸದಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ‘2024ರ ಲೋಕಸಭಾ ಚುನಾವಣೆಯನ್ನು ನಾವೆಲ್ಲರೂ ಒಂದಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎದುರಿಸಿ ಗೆದ್ದಿದ್ದಕ್ಕೆ ನಮಗೆ ಹೆಮ್ಮೆ ಇದೆ. ಎನ್‌ಡಿಎ ನಾಯಕರಾದ ನಾವೆಲ್ಲಾ ನರೇಂದ್ರ ಮೋದಿ ಅವರನ್ನು ನಮ್ಮ ನಾಯಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದೇವೆ’ ಎಂದು ಎನ್‌ಡಿಎ ಕೂಟ ನಿರ್ಣಯ ಅಂಗೀಕರಿಸಿತು. ನಿರ್ಣಯಕ್ಕೆ ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಸೇರಿ ಎಲ್ಲ ಎನ್‌ಡಿಎ ಅಂಗಪಕ್ಷಗಳ ನಾಯಕರು ಸಹಿ ಹಾಕಿದರು.
ಜೊತೆಗೆ, ‘ಎನ್‌ಡಿಎ ಸರ್ಕಾರದ ಕಳೆದ 10 ವರ್ಷಗಳ ಅವಧಿಯಲ್ಲಿ ಜನ ಪರ ಯೋಜನೆಗಳೊಂದಿಗೆ ಪ್ರತಿಯೊಂದು ವಲಯದ ಮೂಲಕವೇ ದೇಶದ ಅಭಿವೃದ್ಧಿಯಾಗುವುದನ್ನು ದೇಶದ ಜನತೆ ನೋಡಿದ್ದಾರೆ. ಮುಂದಿನ ದಿನಗಳಲ್ಲೂ ಎನ್‌ಡಿಎ ಸರ್ಕಾರ ದೇಶದ ಪರಂಪರೆಯನ್ನು ಕಾಪಾಡಿಕೊಂಡೇ ಸರ್ವಾಂಗೀಣ ಅಭಿವೃದ್ಧಿಯ ಮೂಲಕ ಜನರ ಜೀವನದ ಗುಣಮಟ್ಟ ಹೆಚ್ಚಿಸಲು ಶ್ರಮಿಸಲಿದೆ’ ಎಂದು ಗೊತ್ತುವಳಿಯಲ್ಲಿ ಹೇಳಲಾಗಿದೆ.
ಮೋದಿ ರಾಜೀನಾಮೆ: ಮಂಗಳವಾರ ಪ್ರಕಟವಾದ ಫಲಿತಾಂಶದಲ್ಲಿ ಬಿಜೆಪಿ 240 ಮತ್ತು ಒಟ್ಟಾರೆ ಎನ್‌ಡಿಎ 293 ಸ್ಥಾನ ಪಡೆದು ಸರ್ಕಾರ ರಚನೆಯ ಅವಕಾಶ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಎನ್‌ಡಿಎ ಕೂಟದ ಸಭೆಗೂ ಮುನ್ನ ಸಚಿವ ಸಂಪುಟ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, 17ನೇ ಲೋಕಸಭೆ ವಿಸರ್ಜಿಸುವಂತೆ ರಾಷ್ಟ್ರಪತಿಗೆ ಶಿಫಾರಸು ಮಾಡುವ ನಿರ್ಣಯ ಅಂಗೀಕರಿಸಿದರು.ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ ಮೋದಿ, ಲೋಕಸಭೆ ವಿಸರ್ಜನೆ ಶಿಫಾರಸು ಮತ್ತು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಎರಡನ್ನೂ ಅಂಗೀಕರಿಸಿದ ರಾಷ್ಟ್ರಪತಿ, ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೂ ಹುದ್ದೆಯಲ್ಲಿ ಮುಂದುವರೆಯುವಂತೆ ಸೂಚಿಸಿದರು. 17ನೇ ಲೋಕಸಭೆಗೆ ಅವಧಿ ಜೂ.16ರವರೆಗೂ ಇದೆ. ಅಷ್ಟರೊಳಗೆ ನೂತನ ಸರ್ಕಾರ ರಚನೆಯಾಗಬೇಕಿದೆ.
ಸಿಎಂ, ಡಿಸಿಎಂ ದುರಹಂಕಾರದ ಮಾತಾಡ್ತಿದ್ರು, ಗ್ಯಾರಂಟಿಗಳು ಅವರ ಕೈ ಹಿಡಿದಿಲ್ಲ: ಆರ್.ಅಶೋಕ್
ಬಿಜೆಪಿ ಬಲ ಕುಸಿತ: 2014ರಲ್ಲಿ ಬಿಜೆಪಿ ಏಕಾಂಗಿಯಾಗಿ 282 ಸ್ಥಾನ, 2019ರಲ್ಲಿ 303 ಸ್ಥಾನ ಪಡೆದುಕೊಂಡಿತ್ತು. ಆದರೆ ಈ ಬಾರಿ ಅದರ ಬಲ 240ಕ್ಕೆ ಕುಸಿದಿದ್ದು, ಸರಳ ಬಹುಮತಕ್ಕೆ ಅಗತ್ಯವಾದ 272 ತಲುಪಲು ವಿಫಲವಾಗಿದೆ. ಹೀಗಾಗಿ 28 ಸ್ಥಾನ ಗೆದ್ದಿರುವ ಟಿಡಿಪಿ ಹಾಗೂ ಜೆಡಿಯು ಬೆಂಬಲ ಮೋದಿಗೆ ಅನಿವಾರ್ಯವಾಗಿದೆ.