ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ‘ಮನ್ ಕೀ ಬಾತ್’ ಭಾಷಣದಲ್ಲಿ, ವಿನೂತನ ವಿಧಾನದಲ್ಲಿ ಮೀನು ಸಾಕಣೆ ಮಾಡಿ ಯಶಸ್ಸು ಕಂಡ ಬೆಳಗಾವಿ ತಾಲೂಕಿನ ರೈತ ರಾಜು ಶಿವಲಿಂಗಪ್ಪ ಹುದ್ದಾರ (27) ಅವರನ್ನು ಶ್ಲಾಘಿಸಿದ್ದಾರೆ.
ನವದೆಹಲಿ/ಬೆಳಗಾವಿ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ‘ಮನ್ ಕೀ ಬಾತ್’ ಭಾಷಣದಲ್ಲಿ, ವಿನೂತನ ವಿಧಾನದಲ್ಲಿ ಮೀನು ಸಾಕಣೆ ಮಾಡಿ ಯಶಸ್ಸು ಕಂಡ ಬೆಳಗಾವಿ ತಾಲೂಕಿನ ರೈತ ರಾಜು ಶಿವಲಿಂಗಪ್ಪ ಹುದ್ದಾರ (27) ಅವರನ್ನು ಶ್ಲಾಘಿಸಿದ್ದಾರೆ. ‘ಕೃಷಿಯಲ್ಲಿನ ನಾವೀನ್ಯತೆಯು ಆದಾಯವನ್ನು ಹೇಗೆ ಹೆಚ್ಚಿಸುತ್ತದೆ ಮತ್ತು ಗ್ರಾಮೀಣ ಯುವಕರಿಗೆ ಸ್ಫೂರ್ತಿ ನೀಡುತ್ತದೆ ಎಂಬುದಕ್ಕೆ ಇದು ಒಂದು ಉದಾಹರಣೆ’ ಎಂದು ಉಲ್ಲೇಖಿಸಿದ್ದಾರೆ.
ಭಾನುವಾರ ಬೆಳಗ್ಗೆ ರೇಡಿಯೋ ಭಾಷಣ ಮಾಡಿದ ಮೋದಿ, ‘ಇಂದು ದೇಶದಲ್ಲಿ ಸ್ಫೂರ್ತಿ ನೀಡುವಂತಹ ಪ್ರಯತ್ನಗಳು ನಡೆಯುತ್ತಿವೆ. ಬೆಳಗಾವಿಯ ಯುವ ರೈತ ಹುದ್ದಾರ್ ಅವರು ಸಾಂಪ್ರದಾಯಿಕ ಕೃಷಿಗಿಂತ ಭಿನ್ನ ವಿಧಾನ ಆರಿಸಿಕೊಂಡರು. ತರಬೇತಿ ಪಡೆದು ಕೃಷಿ ಹೊಂಡ (ಕೊಳ) ನಿರ್ಮಿಸಿದರು. ಅವರು ಆ ಕೊಳದಲ್ಲಿ ಮೀನು ಸಾಕಣೆ ಮಾಡಿ ಉತ್ತಮ ವರಮಾನ ಗಳಿಸುತ್ತಿದ್ದಾರೆ. ಆರ್ಥಿಕತೆ ಬಲಪಡಿಸಲು ಅವರ ಪ್ರಯತ್ನಗಳು ಅತ್ಯಂತ ಶ್ಲಾಘನೀಯ’ ಎಂದು ಕೊಂಡಾಡಿದರು.
ಹುದ್ದಾರ್ ಸಾಧನೆ ಏನು?:
ಬೆಳಗಾವಿ ತಾಲೂಕಿನ ಬೋಡಕ್ಯಾನಟ್ಟಿ ಗ್ರಾಮದ ರಾಜು ಶಿವಲಿಂಗಪ್ಪ ಹುದ್ದಾರ್ ಎಂಬ ಯುವ ರೈತ ಆಧುನಿಕ ಮೀನು ಸಾಕಣೆ ಪದ್ಧತಿಗಳನ್ನು ವಿಶೇಷವಾಗಿ ಬಯೋಫ್ಲಾಕ್ ತಂತ್ರಜ್ಞಾನ ಅಳವಡಿಸಿಕೊಂಡು, ಮರ್ರೆಲ್ ಮೀನುಗಳನ್ನು (ಹಾವಿನ ತಲೆ ಮೀನು) ಬೆಳೆಸುವ ಮೂಲಕ ಯಶಸ್ವಿ ಮೀನು ಕೃಷಿಕನಾಗಿ ಹೊರಹೊಮ್ಮಿದ್ದಾರೆ.
ಕಲಾ ಪದವೀಧರರಾದ ರಾಜು ಆರಂಭದಲ್ಲಿ ಸೇನೆಗೆ ಸೇರುವ ಆಕಾಂಕ್ಷೆ ಹೊಂದಿದ್ದರು. ಆದರೆ ಆ ಆಸೆ ಈಡೇರದ ಕಾರಣ ಸ್ವಯಂ ಉದ್ಯೋಗದತ್ತ ಮುಖ ಮಾಡಿದರು.
ಮೊದಲು ಹೈನುಗಾರಿಕೆಯಲ್ಲಿ ಯತ್ನ ಮಾಡಿದ ಅವರು ನಂತರ, ಮೀನು ಸಾಕಣೆ ಆರಿಸಿಕೊಂಡು ಅದರಲ್ಲಿ ಹೊಸ ವೈಜ್ಞಾನಿಕ ವಿಧಾನ ಕಲಿತರು. 4 ವೈಜ್ಞಾನಿಕವಾಗಿ ವಿನ್ಯಾಸ ಮಾಡಿದ ಕೊಳ ಸ್ಥಾಪಿಸಿ ಆಂಧ್ರಪ್ರದೇಶದ ವಿಜಯವಾಡದಿಂದ ಮೀನಿನ ಮರಿಗಳನ್ನು ತಂದರು. ಪರಿಣತಿ ಪಡೆಯಲು 1 ವರ್ಷ ತುಮಕೂರು, ಮಂಡ್ಯ, ವಿಜಯಪುರ, ಹೈದರಾಬಾದ್ ಮತ್ತು ವಿಜಯವಾಡದ ಮತ್ಸ್ಯ ಕೇಂದ್ರಗಳಿಗೆ ಭೇಟಿ ನೀಡಿ, ಮೀನು ಸಾಕಣೆ ತಂತ್ರಗಳ ಪ್ರಾಯೋಗಿಕ ತರಬೇತಿ ಪಡೆದರು.
ಬಳಿಕ ತಮ್ಮ ಜಮೀನಲ್ಲಿ ಮೀನು ಕೃಷಿ ಆರಂಭಿಸಿ ಕೃಷಿ ಹೊಂಡ (ಕೊಳ) ನಿರ್ಮಿಸಿದರು. ಮೀನಿನ ಮರಿ, ಮೇವು ಮತ್ತು ಔಷಧಿಗಳಿಗಾಗಿ ಸುಮಾರು 31 ಲಕ್ಷ ರು. ಆರಂಭಿಕ ಹೂಡಿಕೆ ಮಾಡಿದರು. ಇದಕ್ಕೆ ಸಮಾಜ ಸೇವಕ ಶಿವಾನಂದ್ ನೀಲಣ್ಣವರ್ ಆರ್ಥಿಕ ನೆರವು ನೀಡಿದರು.
ಎಂಟೇ ತಿಂಗಳೊಳಗೆ, ಮೊದಲ ಬಾರಿ ಮೀನು ಸಾಕಣೆ ಮೂಲಕ 25 ಲಕ್ಷ ರು. ಆದಾಯವನ್ನು ಹುದ್ದಾರ್ ಗಳಿಸಿದರು. ನಂತರ ಎರಡನೇ ಬ್ಯಾಚ್‌ನಿಂದ 22 ಲಕ್ಷ ರು. ಸಂಪಾದಿಸಿದರು. ಮೂರನೇ ಚಕ್ರ ಚಾಲ್ತಿಯಲ್ಲಿದ್ದು, ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ.
ಈ ಜಮೀನಿನಲ್ಲಿ ಆಮ್ಲಜನಕದ ಮಟ್ಟವನ್ನು ಕಾಯ್ದುಕೊಳ್ಳಲು ಏರೇಟರ್‌ಗಳು, ರಕ್ಷಣೆಗಾಗಿ ಪಕ್ಷಿ ಪರದೆ, ನೀರು ಸರಬರಾಜಿಗಾಗಿ ಹತ್ತಿರದ ಜಲಾಶಯಕ್ಕೆ ಸಂಪರ್ಕ ಹೊಂದಿದ ಪೈಪ್‌ಲೈನ್ ವ್ಯವಸ್ಥೆ ಮತ್ತು ಭದ್ರತೆಗಾಗಿ ಸಿಸಿಟಿವಿ ಕಣ್ಗಾವಲು ಅಳವಡಿಸಲಾಗಿದೆ.
ಭಾರಿ ಬೇಡಿಕೆ:
ವಿಶೇಷವಾಗಿ ಹೈದರಾಬಾದ್‌ನ ವ್ಯಾಪಾರಿಗಳು ನೇರವಾಗಿ ತೋಟಕ್ಕೆ ಭೇಟಿ ನೀಡಿ ತಕ್ಷಣವೇ ದುಡ್ಡು ಕೊಟ್ಟು ಮೀನು ಖರೀದಿಸುತ್ತಾರೆ. ಉತ್ತರದ ಮಾರುಕಟ್ಟೆಗಳಲ್ಲಿ ಮರ್ರೆಲ್ ಮೀನಿಗೆ ಬಲವಾದ ಬೇಡಿಕೆ ಇದೆ. ಗಾತ್ರ ಆಧರಿಸಿ ಪ್ರತಿ ಕೇಜಿಗೆ 250 ರಿಂದ 320 ರು. ಬೆಲೆ ಸಿಗುತ್ತದೆ.
ಹೊಸತು ಬಯಸಿ ಯಶ ಕಂಡೆ:
‘ನಾನು ಏನಾದರೂ ಹೊಸತು ಮಾಡಬೇಕೆಂದು ಬಯಸಿದ್ದೆ. 2023–24ರಲ್ಲಿ, ನಮ್ಮ 4 ಎಕರೆ ಭೂಮಿಯಲ್ಲಿ 1 ಎಕರೆಯನ್ನು ಮೀನು ಸಾಕಣೆಗಾಗಿ ಬಳಸಿಕೊಳ್ಳಲು ನಿರ್ಧರಿಸಿದೆ. ನನ್ನ ತಂದೆ ಮತ್ತು ಸಹೋದರ ನನಗೆ ಬೆಂಬಲ ನೀಡಿದರು’ ಎಂದು ರಾಜು ಹುದ್ದಾರ್ ತಿಳಿಸಿದರು.
‘ಆರಂಭದಲ್ಲಷ್ಟೇ ಹೆಚ್ಚು ಹೂಡಿಕೆ ಬೇಕು. ನಂತರದ ವೆಚ್ಚವು ಮೀನು ಆಹಾರ ಮತ್ತು ನಿರ್ವಹಣೆಯಂತಹ ಅಗತ್ಯ ವಸ್ತುಗಳಿಗೆ ಸೀಮಿತವಾಗಿರುತ್ತವೆ. ದೈನಂದಿನ ಕೆಲಸವು ಹೆಚ್ಚಾಗಿ ಮೀನುಗಳಿಗೆ 3 ಸಲ ಆಹಾರ ನೀಡುವುದಕ್ಕೆ ಸೀಮಿತವಾಗಿರುತ್ತದೆ’ ಎಂದು ರಾಜು ಹೇಳಿದರು.
ಅವರ ತಂದೆ ಶಿವಲಿಂಗಪ್ಪ ಹುದ್ದಾರ್ ಮಾತನಾಡಿ, ‘ಈ ಉಪಕ್ರಮವು ಕುಟುಂಬದ ಆರ್ಥಿಕ ಸ್ಥಿತಿಯನ್ನು ಗಮನಾರ್ಹವಾಗಿ ಸುಧಾರಿಸಿದೆ. ಹೊಸ ಮನೆಯನ್ನು ಸಹ ನಿರ್ಮಿಸುತ್ತಿದ್ದೇವೆ’ ಎಂದರು.
ಮೀನುಗಾರಿಕೆ ಅಧಿಕಾರಿಗಳು ರಾಜು ಬಗ್ಗೆ ಶ್ಲಾಘಿಸಿ, ರೈತರಿಗೆ ಸುಸ್ಥಿರ ಮತ್ತು ಲಾಭದಾಯಕ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದ್ದಾರೆ.

