Asianet Suvarna News Asianet Suvarna News

ನಂದಿಗ್ರಾಮ ರಣಾಂಗಣ : ಮತದಾನದ ವೇಳೆ ವ್ಯಾಪಕ ಹಿಂಸಾಚಾರ

ಬಿಜೆಪಿ ಕಾರ್ಯಕರ್ತರು ತೃಣಮೂಲ ಕಾಂಗ್ರೆಸ್‌ ಏಜೆಂಟ್‌ಗಳ ಮತಗಟ್ಟೆ ಪ್ರವೇಶಕ್ಕೆ ಅಡ್ಡಿಪಡಿಸಿ, ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರು ಮತದಾನ ಮಾಡದಂತೆ ತಡೆಯೊಡ್ಡಿದ್ದಾರೆ ಎಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಪಾದಿಸಿದ್ದಾರೆ.

Nandigram Election Mamata Banerjee Allegation Against BJP snr
Author
Bengaluru, First Published Apr 2, 2021, 10:43 AM IST

 ನಂದಿಗ್ರಾಮ (ಏ.02):  ಜಿದ್ದಾಜಿದ್ದಿ ಪೈಪೋಟಿಯ ಮೂಲಕ ದೇಶದ ಗಮನಸೆಳೆದಿರುವ ನಂದಿಗ್ರಾಮ ಕ್ಷೇತ್ರದ ವಿವಿಧೆಡೆ ಮತದಾನದ ವೇಳೆ ಗುರುವಾರ ಭಾರಿ ಹಿಂಸಾಚಾರ ಸಂಭವಿಸಿದೆ. ಬಿಜೆಪಿ ಕಾರ್ಯಕರ್ತರು ತೃಣಮೂಲ ಕಾಂಗ್ರೆಸ್‌ ಏಜೆಂಟ್‌ಗಳ ಮತಗಟ್ಟೆ ಪ್ರವೇಶಕ್ಕೆ ಅಡ್ಡಿಪಡಿಸಿ, ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರು ಮತದಾನ ಮಾಡದಂತೆ ತಡೆಯೊಡ್ಡಿದ್ದಾರೆ ಎಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಪಾದಿಸಿದ್ದಾರೆ. ಅವರ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿರುವ ಮಾಜಿ ಆಪ್ತ ಸುವೇಂದು ಅಧಿಕಾರಿ ಬೆಂಗಾವಲು ವಾಹನದ ಮೇಲೆ ಎರಡು ಕಡೆ ಕಲ್ಲು ತೂರಲಾಗಿದೆ ಎಂದು ಭಾಜಪ ದೂರಿದೆ.

ಇದರ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಹಾಗೂ ಸುವೇಂದು ಅಧಿಕಾರಿ ಅವರು ಹಿಂಸಾಚಾರ ನಡೆದ ಮತಗಟ್ಟೆಗಳಿಗೆ ಭೇಟಿ ನೀಡಿ ಪ್ರತ್ಯೇಕವಾಗಿ ಪರಿಶೀಲನೆ ನಡೆಸಿದ್ದಾರೆ. ಮಮತಾ ಅವರು ಸೋಲೊಪ್ಪಿಕೊಂಡಿರುವ ಕಾರಣ ಈ ರೀತಿಯ ಆಪಾದನೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಕಟಕಿಯಾಡಿದೆ.

ಈ ನಡುವೆ, ಬೆಳಗ್ಗೆಯಿಂದ ಬಿಜೆಪಿ ವಿರುದ್ಧ 63 ದೂರು ಕೊಟ್ಟರೂ ಚುನಾವಣಾ ಆಯೋಗ ಒಂದೂ ಕ್ರಮ ಜರುಗಿಸಿಲ್ಲ. ಇದನ್ನು ಒಪ್ಪಲಾಗದು. ಆಯೋಗ ಅಮಿತ್‌ ಶಾ ಅವರ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದೆ. ನಾವು ಕೋರ್ಟಿಗೆ ಹೋಗುತ್ತೇವೆ ಎಂದು ಮಮತಾ ಹೇಳಿದ್ದಾರೆ.

ಭವಾನಿಪುರ ಬಿಟ್ಟು ನಂದಿಗ್ರಾಮ: ಮೋದಿ ಫಾರ್ಮುಲಾ ಬಳಸಿ ದೀದೀ ಆಟ!

2ನೇ ಹಂತದಲ್ಲಿ 30 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ವಿವಿಧ ಕ್ಷೇತ್ರಗಳಲ್ಲೂ ತೃಣಮೂಲ ಕಾಂಗ್ರೆಸ್‌- ಬಿಜೆಪಿ ಕಾರ್ಯಕರ್ತರ ನಡುವೆ ಹಿಂಸಾಚಾರ ನಡೆದ ಬಗ್ಗೆ ವರದಿಯಾಗಿವೆ.

ಈ ನಡುವೆ, ಉದಯ ದುಬೆ ಎಂಬ ಬಿಜೆಪಿ ಕಾರ್ಯಕರ್ತನೊಬ್ಬನ ಶವ ನೇಣು ಬಿಗಿದ ಸ್ಥಿತಿಯಲ್ಲಿ ನಂದಿಗ್ರಾಮದಲ್ಲಿ ಪತ್ತೆ ಆಗಿದೆ. ಇತ್ತೀಚೆಗಷ್ಟೇ ಸುವೇಂದು ಪರ ರಾರ‍ಯಲಿಯಲ್ಲಿ ಭಾಗಿಯಾಗಿದ್ದಕ್ಕೆ ದುಬೆಗೆ ಟಿಎಂಸಿಯಿಂದ ಬೆದರಿಕೆಗಳು ಬಂದಿದ್ದು, ಇದರಿಂದ ಭಯಗೊಂಡು ಆತ್ಮಹತ್ಯೆಗೆ ಶರಣಾಗಿರಬಹುದು ಅಥವಾ ಇದು ಟಿಎಂಸಿಗರ ಕೃತ್ಯ ಇರಬಹುದು ಎಂಬ ಆರೋಪ ಕೇಳಿಬಂದಿದೆ.

ನಂದಿಗ್ರಾಮದಲ್ಲಿ ಆಗಿದ್ದೇನು?:  ನಂದಿಗ್ರಾಮ ಚುನಾವಣೆ ಹಿನ್ನೆಲೆಯಲ್ಲಿ ಮಮತಾ ಅವರು ಕ್ಷೇತ್ರದಲ್ಲೇ ಬೀಡುಬಿಟ್ಟಿದ್ದರು. ಬಿಜೆಪಿ ಅಕ್ರಮ ನಡೆಸುತ್ತಿದೆ ಎಂದು ಕಾರ್ಯಕರ್ತರು ದೂರಿದ ಹಿನ್ನೆಲೆಯಲ್ಲಿ ವಿವಿಧ ಮತಗಟ್ಟೆಗೆ ತೆರೆಳಿದರು. ಬೋಯಲ್‌ ಎಂಬ ಮತಗಟ್ಟೆಬಳಿ ತೆರಳಿದಾಗ ಬಿಜೆಪಿ ಕಾರ್ಯಕರ್ತರು ‘ಜೈ ಶ್ರೀರಾಮ್‌’ ಎಂದು ಘೋಷಣೆ ಕೂಗಿದರು. ಆ ವೇಳೆ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಹಿಂಸಾಚಾರ ನಡೆಯಿತು. ಭಾರಿ ಪ್ರಮಾಣದಲ್ಲಿ ಪೊಲೀಸರನ್ನು ಕರೆಸಿ ಪರಿಸ್ಥಿತಿ ನಿಯಂತ್ರಿಸಲಾಯಿತು.

ಈ ನಡುವೆ, ಕ್ಷೇತ್ರ ಪರ್ಯಟನೆ ನಡೆಸುತ್ತಿದ್ದ ಮಮತಾ ಮಾಜಿ ಆಪ್ತ ಸುವೇಂದು ಅಧಿಕಾರಿ ಅವರ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ಸುವೇಂದು ಅಧಿಕಾರಿ ಅವರಿಗೆ ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರು ಮುತ್ತಿಗೆ ಹಾಕಿದ ಘಟನೆಯೂ ನಡೆಯಿತು. ತಾರಕಾಪುರ, ಸತೇಂಗಬರಿ ಎಂಬಲ್ಲಿ ಕಲ್ಲು ತೂರಾಟ ನಡೆಯಿತು. ಮತ್ತೊಂದೆಡೆ, ಕೇಶಪುರ ಎಂಬಲ್ಲಿ ಬಿಜೆಪಿ ಅಭ್ಯರ್ಥಿ ವಾಹನವನ್ನು ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರು ಧ್ವಂಸಗೊಳಿಸಿದರು.

ಈ ನಡುವೆ ಮಾತನಾಡಿದ ಮಮತಾ, ಬಿಹಾರ ಹಾಗೂ ಉತ್ತರಪ್ರದೇಶದಿಂದ ಜನರನ್ನು ಕರೆಸಿ ಬಿಜೆಪಿ ಇಲ್ಲಿ ಘೋಷಣೆ ಕೂಗಿಸುತ್ತಿದೆ. ಅವರಿಗೆಲ್ಲಾ ಕೇಂದ್ರೀಯ ಪಡೆಗಳು ರಕ್ಷಣೆ ಒದಗಿಸಿವೆ ಎಂದು ಕಿಡಿಕಾರಿದರು.

ಬಿಜೆಪಿಗನ ಶವ ಪತ್ತೆ:  ಈ ನಡುವೆ, ನಂದಿಗ್ರಾಮ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತನೋರ್ವ ನೇಣು ಬಿಗಿದುಕೊಂಡು ಸಾವಿಗೀಡಾಗಿರುವ ಘಟನೆ ನಡೆದಿದೆ. ಉದಯ್‌ ದುಬೆ ಎಂಬುವರೇ ಆತ್ಮಹತ್ಯೆಗೆ ಶರಣಾದ ಬಿಜೆಪಿ ಕಾರ್ಯಕರ್ತ. ಇತ್ತೀಚೆಗಷ್ಟೇ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಪರ ರಾರ‍ಯಲಿಯಲ್ಲಿ ಭಾಗಿಯಾಗಿದ್ದಕ್ಕೆ ದುಬೆ ಅವರಿಗೆ ಟಿಎಂಸಿಯಿಂದ ಬೆದರಿಕೆಗಳು ಬಂದಿದ್ದು, ಇದರಿಂದ ಭಯಗೊಂಡು ಆತ್ಮಹತ್ಯೆಗೆ ಶರಣಾಗಿರಬಹುದು ಅಥವಾ ಟಿಎಂಸಿ ಕಾರ‍್ಯಕರ್ತರೇ ಈ ಕೃತ್ಯವೆಸಗಿರಬಹುದು ಎನ್ನಲಾಗಿದೆ. ಇದರಿಂದಾಗಿ ಕ್ಷೇತ್ರದಾದ್ಯಂತ ಗಲಭೆ ಮತ್ತು ಬಿಗುವಿನ ವಾತಾವರಣ ಸೃಷ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೌರ್ನರ್‌ಗೆ ಫೋನ್‌ ಮಾಡಿ ದೂರು ಹೇಳಿದ ಮಮತಾ

ಕೋಲ್ಕತಾ: ಎರಡನೇ ಹಂತದ ಚುನಾವಣೆ ವೇಳೆ ನಡೆದ ಹಿಂಸಾಚಾರ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯಪಾಲ ಜಗದೀಪ್‌ ಧನಖಡ್‌ ಅವರಿಗೆ ದೂರವಾಣಿ ಕರೆ ಮಾಡಿ ದೂರು ನೀಡಿದ್ದಾರೆ. ಯಾವುದೇ ಕ್ಷಣದಲ್ಲಿ ಏನೂ ಬೇಕಾದರೂ ಆಗಬಹುದು. ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದುಬಿದ್ದಿದೆ. ಹೊರಗಿನವರೆಲ್ಲಾ ಕ್ಷೇತ್ರಕ್ಕೆ ಬಂದಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯಪಾಲರು, ಮಮತಾ ಅವರು ಎತ್ತಿರುವ ವಿಷಯಗಳನ್ನು ಸಂಬಂಧಿಸಿದವರಿಗೆ ತಲುಪಿಸಲಾಗಿದೆ ಎಂದಷ್ಟೇ ಹೇಳಿದ್ದಾರೆ.

Follow Us:
Download App:
  • android
  • ios