ನಾಗ್ಪುರದ ಹೊರವಲಯದಲ್ಲಿ ರಹಸ್ಯವಾಗಿ ನಡೆಯುತ್ತಿದ್ದ ರೇವ್ ಪಾರ್ಟಿಯ ಮೇಲೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಮುಂಬೈ: ನಾಗ್ಪುರ ನಗರದಲ್ಲಿ ರಹಸ್ಯವಾಗಿ ನಡೆಯುತ್ತಿದ್ದ ರೇವ್ ಪಾರ್ಟಿಯೊಂದರ ಮೇಲೆ ಪೊಲೀಸರು ದಾಳಿ ಮಾಡಿದ್ದು, ಈ ರೇವ್ ಪಾರ್ಟಿಯನ್ನು ಆಯೋಜನೆ ಮಾಡಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ನಾಗಪುರ ನಗರದ ಹೊರವಲಯದಲ್ಲಿರುವ ಶಾಂತ ಪ್ರದೇಶವಾದ ನವೀನ್ ಕಾಮತಿ ಪ್ರದೇಶದ ರಹಸ್ಯ ಬಂಗಲೆಯೊಂದರಲ್ಲಿ ಭಾನುವಾರ ರಾತ್ರಿ ದೊಡ್ಡ ಪ್ರಮಾಣದ ರೇವ್ ಪಾರ್ಟಿ ನಡೆಯುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿದ್ದು, ಕೂಡಲೇ ಪೊಲೀಸರು ಆ ಸ್ಥಳದ ಮೇಲೆ ದಾಳಿ ಮಾಡಿ, ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಒಬ್ಬ ಬಿಲ್ಡರ್, ಒಬ್ಬ ಕಾರ್ಯಕ್ರಮ ವ್ಯವಸ್ಥಾಪಕ ಮತ್ತು ಇಬ್ಬರು ಉನ್ನತ ಮಟ್ಟದ ಅತಿಥಿಗಳು ಎಂದು ತಿಳಿದು ಬಂದಿದೆ. ಈ ದಾಳಿಯು ನಾಗ್ಪುರದ ಉಪನಗರಗಳಲ್ಲಿ ಹೈಲೆವೆಲ್ ರೇವ್‌ಪಾರ್ಟಿಗಳು ಹೆಚ್ಚುತ್ತಿರುವುದನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ.
ಶನಿವಾರ ರಾತ್ರಿ ನ್ಯೂ ಕಾಮತಿ ಪ್ರದೇಶದ ಸುಸಜ್ಜಿತ ಬಂಗಲೆಯಲ್ಲಿ ನಡೆದ ಪಾರ್ಟಿಯಲ್ಲಿ ಡಿಜೆ ಸಂಗೀತವನ್ನು ಎಂಜಾಯ್ ಮಾಡುತ್ತಾ ಪಾರ್ಟಿಯಲ್ಲಿದ್ದವರು ಮಾದಕ ದ್ರವ್ಯ ಸೇವಿಸುತ್ತಿದ್ದರು ಹಾಗೂ ಮಾದಕ ದ್ರವ್ಯಗಳ ಬಹಿರಂಗ ಬಳಕೆ ಇಲ್ಲಿತ್ತು ಎಂಬ ಮಾಹಿತಿ ಸ್ಥಳೀಯರಿಗೆ ಸಿಕ್ಕಿದೆ. ಇದಾದ ನಂತರ ಸ್ಥಳೀಯರು ಅಪರಾಧ ವಿಭಾಗಕ್ಕೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಪಾರ್ಟಿ ನಡೆದ ಸ್ಥಳದಲ್ಲಿ ವಿದೇಶಿ ಬ್ರಾಂಡ್‌ಗಳ ಮದ್ಯ, ಹುಕ್ಕಾ ಮತ್ತು ಕೆಲವು ನಿಷೇಧಿತ ರಾಸಾಯನಿಕಗಳ ಬಳಕೆ ಮಾಡಿರುವುದು ಕಂಡು ಬಂದಿದೆ.
ಈ ರೇವ್ ಪಾರ್ಟಿ ನಡೆದ ಕ್ಲಬ್ ಕೇವಲ ಯುವಕ ಯುವತಿಯರಿಗೆ ಮಾತ್ರ ಸೀಮಿತವಾಗಿಲ್ಲ, ಈಗ ಅವು ಗಣ್ಯ ವ್ಯಕ್ತಿಗಳ ಕ್ಲಬ್ ಎನಿಸಿವೆ. ಇತ್ತೀಚಿನ ದಿನಗಳಲ್ಲಿ, ಇದು ಕಾಲೇಜು ಯುವಕರು ಕುಡಿದು ಮಜಾ ಮಾಡುವ ಸ್ಥಳ ಮಾತ್ರವಲ್ಲ, ಗಣ್ಯ ವ್ಯಕ್ತಿಗಳು, ಉದ್ಯಮಿಗಳು ಮತ್ತು ಈವೆಂಟ್ ನೆಟ್‌ವರ್ಕಿಂಗ್ ಉತ್ಸಾಹಿಗಳಿಗೆ ಆಪ್ತತಾಣವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರ ಅನುಮಾನಗಳು ಹೆಚ್ಚಿದ್ದು, ವ್ಯವಸ್ಥಿತ ಮಾದಕವಸ್ತು ಜಾಲ ಇದರ ಹಿಂದೆ ಇರಬಹುದೇ ಎಂಬ ಬಗ್ಗೆ ತನಿಖೆ ನಡೆಯುವ ಸಾಧ್ಯತೆ ಇದೆ.
ಇದು ಪ್ರೊಫೆಷನಲ್ ನೆಟ್‌ವರ್ಕಿಂಗ್ ಪಾರ್ಟಿ ಎಂದು ಕರೆಯಲಾಗಿತ್ತು. ಅಂದರೆ ಪೊಫೆಷನಲ್ ಮೀಟಿಂಗ್, ನೆಟ್‌ವರ್ಕಿಂಗ್ ಕಾರ್ಯಕ್ರಮ ಎಂದು ಬಿಂಬಿಸಲಾಗುತ್ತಿತ್ತು. ಹೀಗೆ ಇದೊಂದು ಪ್ರೊಫೆನಲ್ ಮೀಟಿಂಗ್ ಎಂದು ನಂಬಿಸುವ ಮೂಲಕ ನಗರದ ಕೆಲವು ಶ್ರೀಮಂತ ಕುಟುಂಬಗಳ ಯುವಕ-ಯುವತಿಯರಿಗೆ ಇದ್ಕೆ ಆಹ್ವಾನಗಳನ್ನು ನೀಡಲಾಗುತ್ತಿತ್ತು ಎಂದು ವರದಿಯಾಗಿದೆ. ಯಾವುದೇ ಪೂರ್ವ ಸೂಚನೆ, ಅನುಮತಿ ಇಲ್ಲದೆ, ಸ್ಥಳೀಯ ಪೊಲೀಸ್ ಠಾಣೆಯ ಕಣ್ಗಾವಲಿನಲ್ಲಿಯೇ ಈ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಹೀಗಾಗಿ ಇದರಲ್ಲಿ ಸ್ಥಳೀಯ ಪೊಲೀಸರ ಪಾತ್ರದ ಬಗ್ಗೆಯೂ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.


