* 94ರ ಹುಬ್ಬಳ್ಳಿ ಗಲಭೆ ವೇಳೆ ಯಾವ ಸರ್ಕಾರ ಇತ್ತು?: ಬಿಜೆಪಿ ಅಧ್ಯಕ್ಷ ಪ್ರಶ್ನೆ* ದೇಶದಲ್ಲಿನ ಗಲಭೆ ಪಶ್ನಿಸುತ್ತಿರುವ ಕಾಂಗ್ರೆಸ್‌ಗೆ ಬಿಜೆಪಿ ಅಧ್ಯಕ್ಷ ತಿರುಗೇಟು* ಮೋದಿ ಸರ್ಕಾರದ ಅಭಿವೃದ್ಧಿ ರಾಜಕೀಯ ಸಹಿಸಲು ವಿಪಕ್ಷಕ್ಕೆ ಆಗುತ್ತಿಲ್ಲ* ಹೀಗಾಗಿ ವಿಪಕ್ಷದಿಂದ ತುಷ್ಟೀಕರಣದ ಮತಬ್ಯಾಂಕ್ ರಾಜಕೀಯ
ನವದೆಹಲಿ(ಏ.19): ಇತ್ತೀಚೆಗೆ ದೇಶದಲ್ಲಿ ನಡೆದಿರುವ ಕೋಮುಗಲಭೆಗಳನ್ನು ಪ್ರಸ್ತಾಪಿಸಿ ಮೋದಿ ಸರ್ಕಾರದ ಮೇಲೆ ದೂಷಣೆ ಮಾಡಿ ಜಂಟಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಸೇರಿದಂತೆ 13 ರಾಜಕೀಯ ಪಕ್ಷಗಳಿಗೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ‘ಬಹಿರಂಗ ಪತ್ರ’ದ ಮೂಲಕ ತಿರುಗೇಟು ನೀಡಿದ್ದಾರೆ. ‘ಮೋದಿ ಸರ್ಕಾರದ ‘ಅಭಿವೃದ್ಧಿ ರಾಜಕೀಯ’ದಿಂದ ಕಂಗೆಟ್ಟು, ಕೇಂದ್ರದ ಮೇಲೆ ವಿಪಕ್ಷಗಳು ವೃಥಾ ಆರೋಪ ಮಾಡುತ್ತಿವೆ. ಧರ್ಮದ ವಿಭಜಕ ರಾಜಕಾರಣದ ಮೂಲಕ ತಮ್ಮ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿವೆ’ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ, 1994ರಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನದ ರಾಷ್ಟ್ರಧ್ವಜ ಆರೋಹಣ ವಿವಾದವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ, ‘1994ರಲ್ಲಿ ಹುಬ್ಬಳ್ಳಿಯಲ್ಲಿ ಕೋಮುಗಲಭೆ ನಡೆದಾಗ ಯಾವ ಸರ್ಕಾರವಿತ್ತು?’ ಎಂದು ಕಾಂಗ್ರೆಸ್ಸನ್ನು ತಿವಿದಿದ್ದಾರೆ.
ಸೋಮವಾರ ಭಾರತದ ಜನರಿಗೆ ಬಹಿರಂಗ ಪತ್ರ ಬರೆದಿರುವ ನಡ್ಡಾ, ‘ಮೋದಿ ಸರ್ಕಾರ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಹಾಗೂ ಸಬ್ ಕಾ ಪ್ರಯಾಸ್’ ಧ್ಯೇಯದಡಿ ಕೆಲಸ ಮಾಡುತ್ತಿದೆ. ಆದರೆ ಪ್ರತಿಪಕ್ಷಗಳು ಇಂಥ ಅಭಿವೃದ್ಧಿ ರಾಜಕೀಯ ಸಹಿಸುತ್ತಿಲ್ಲ. ಮತ್ತೆ ಅದೇ ಮತ ಬ್ಯಾಂಕ್ ರಾಜಕೀಯ, ಧರ್ಮ ವಿಭಜನೆ ರಾಜಕೀಯ ಮಾಡುತ್ತಿವೆ. ದೇಶ ಇಂದು 2 ರೀತಿಯ ರಾಜಕೀಯ ನೋಡುತ್ತಿದೆ. ಒಂದು ಎನ್‌ಡಿಎ ಅಭಿವೃದ್ಧಿ ಕೆಲಸ ಹಾಗೂ ವಿಪಕ್ಷಗಳ ಕ್ಷುಲ್ಲಕ ರಾಜಕೀಯ. ಇಂಥ ರಾಜಕೀಯವು ದೇಶದ ಸ್ಫೂರ್ತಿ ಹಾಗೂ ಶ್ರಮವಹಿಸಿ ಕೆಲಸ ಮಾಡುತ್ತಿರುವ ಜನರ ಮೇಲೆ ನಡೆದಿರುವ ಆಕ್ರಮಣ. ಹೀಗಾಗಿ ಇಂಥದ್ದನ್ನು ಬಿಟ್ಟು ಅಭಿವೃದ್ಧಿ ರಾಜಕೀಯ ಅಪ್ಪಿಕೊಳ್ಳಬೇಕು’ ಎಂದು ಕುಟುಕಿದ್ದಾರೆ.
‘ಇನ್ನು ಮೋದಿ ಸರ್ಕಾರದ ಅವಧಿಯಲ್ಲಿ ಕೋಮುಗಲಭೆ ನಡೆಯುತ್ತಿವೆ’ ಎಂಬ ಆರೋಪಕ್ಕೆ ಉತ್ತರಿಸಿರುವ ನಡ್ಡಾ, ‘1996ರಲ್ಲಿ ಇಂದಿರಾ ಗಾಂಧಿ ಅವರು ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಹಿಂದೂ ಸಾಧುಗಳ ಮೇಲೆ ಗೋಲಿಬಾರ್‌ಗೆ ಆದೇಶಿಸಿದ್ದರು. ಸಿಖ್ ಅಂಗರಕ್ಷಕರಿಂದ ಇಂದಿರಾ ಗಾಂಧಿ ಹತ್ಯೆ ವಿರೋಧಿಸಿ ನಡೆದ ಸಿಖ್ ವಿರೋಧಿ ಗಲಭೆ ವೇಳೆ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ‘ದೊಡ್ಡ ಆಲದ ಮರ ಬಿದ್ದಾಗ ಪಕ್ಕದ ಭೂಮಿ ಅಲುಗಾಡುವುದು ಸಹಜ’ ಎಂದಿದ್ದರು. ಹಾಗಿದ್ದರೆ ಹಿಂಸೆಗೆ ಪ್ರಚೋದಿಸಿದ್ದು ಯಾರು?’ ಎಂದು ಪ್ರಶ್ನಿಸಿದ್ದಾರೆ.
‘1984ರಲ್ಲಿ ಭಿವಾನಿ ಗಲಭೆ, 1987ರಲ್ಲಿ ಮೇರಠ್ ಗಲಭೆ, 1989ರಲ್ಲಿ ಭಾಗಲ್ಪುರ ಹಿಂಸಾಚಾರ, 1994ರಲ್ಲಿ ಹುಬ್ಬಳ್ಳಿ ಕೋಮು ಗಲಭೆ (ಈದ್ಗಾ ಮೈದಾನ ಧ್ವಜಾರೋಹಣ ವಿವಾದ) ನಡೆದಾಗ ಕಾಂಗ್ರೆಸ್ ಸರ್ಕಾರಗಳೇ ಇದ್ದವು. ಇಂಥ ಪಟ್ಟಿಬೆಳೆಯುತ್ತಲೇ ಇರುತ್ತವೆ, 2013ರಲ್ಲಿ ಮುಜಫ್ಫರ್‌ನಗರ ಹಾಗೂ 2012ರಲ್ಲಿ ಅಸ್ಸಾಂ ಕೋಮುಗಲಭೆ ನಡೆದಾಗ ಯಾವ ಸರ್ಕಾರ ಇತ್ತು?’ ಎಂದು ಕಾಂಗ್ರೆಸ್ಸನ್ನು ನಡ್ಡಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಏನಿದು ಹುಬ್ಬಳ್ಳಿ ಈದ್ಗಾ ಗಲಭೆ?
1994ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ನಡೆದಿದ್ದ ಹುಬ್ಬಳ್ಳಿ ಈದ್ಗಾ ಮೈದಾನ ರಾಷ್ಟ್ರಧ್ವಜಾರೋಹಣ ಕುರಿತಾದ ಹಿಂಸಾಚಾರದಲ್ಲಿ 6 ಮಂದಿ ಬಲಪಂಥೀಯರು ಗೋಲಿಬಾರ್‌ಗೆ ಬಲಿಯಾಗಿದ್ದರು. 1995ರಲ್ಲಿ ಜನತಾದಳ ಸರ್ಕಾರ ಬಂದಾಗ ವಿವಾದ ಬಗೆಹರಿದಿತ್ತು.
