4ನೇ ಬಾರಿ ಪುದುಚೇರಿಗೆ ರಂಗಸಾಮಿ ಸಿಎಂ| ಎಐಎನ್‌ಆರ್‌ಸಿ- ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ| ದಕ್ಷಿಣದ 2ನೇ ರಾಜ್ಯದಲ್ಲಿ ಬಿಜೆಪಿ ಉದಯ

ಪುದುಚೇರಿ(ಮೇ.08): ಎಐಎನ್‌ಆರ್‌ಸಿ ಸ್ಥಾಪಕ ಎನ್‌. ರಂಗಸಾಮಿ ಅವರು ಶುಕ್ರವಾರ ಪುದುಚೇರಿಯ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿಗೆ ಅಧಿಕಾರ ಸ್ವೀಕರಿಸಿದ್ದಾರೆ. ಈ ಬಾರಿ ಬಿಜೆಪಿಯ ಮೈತ್ರಿಯೊಂದಿಗೆ ಪುದುಚೇರಿಯಲ್ಲಿ ಎಐಎನ್‌ಆರ್‌ಸಿ ಸರ್ಕಾರ ರಚಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜನಿವಾಸದಲ್ಲಿ ಶುಕ್ರವಾರ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದ ವೇಳೆ ರಂಗಸಾಮಿ ಅವರು ಏಕಾಂಗಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮುಂದಿನ ಕೆಲವು ದಿನಗಳಲ್ಲೇ ಎಐಎನ್‌ಆರ್‌ಸಿ ಹಾಗೂ ಬಿಜೆಪಿಯ ಸದಸ್ಯರು ಸಂಪುಟಕ್ಕೆ ಸೇರ್ಪಡೆ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರಿಂದಾಗಿ, ಕರ್ನಾಟಕ ಬಳಿಕ ದಕ್ಷಿಣದ 2ನೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಂತಾಗಿದೆ.

ಮೃದು ಭಾಷಿ:

ಸರಳ ಹಾಗೂ ಮೃಧು ಭಾಷೆಯ 71 ವರ್ಷ ವಯಸ್ಸಿನ ರಂಗಸಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆಯೂ ದ್ವಿಚಕ್ರ ವಾಹನದಲ್ಲೇ ಓಡಾಡುವುದಕ್ಕೆ ಹೆಸರಾಗಿದ್ದಾರೆ. 1990ರಲ್ಲಿ ತಟ್ಟಂಚಾವಡಿ ವಿಧಾನಸಭಾ ಕ್ಷೇತ್ರದಿಂದ ರಂಗಸಾಮಿ ಮೊದಲ ಬಾರಿ ವಿಧಾನಸಭೆಗೆ ಆಯ್ಕೆ ಆಗಿದ್ದರು. 2001ರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಯ್ಕೆಯಾದ ಅವರು ಮೊದಲಬಾರಿ ಮುಖ್ಯಮಂತ್ರಿಯಾದರು. 2011ರಲ್ಲಿ ಕಾಂಗ್ರೆಸ್‌ ಅನ್ನು ತೊರೆದು ಆಲ್‌ ಇಂಡಿಯಾ ಎನ್‌ಆರ್‌ ಕಾಂಗ್ರೆಸ್‌ ಅನ್ನು ಸ್ಥಾಪಿಸಿದರು. ಎಐಎಡಿಎಂಕೆಯ ಜೊತೆಗೂಡಿ ಚುನಾವಣೆಯಲ್ಲಿ ಸ್ಪರ್ಧಿಸಿ ಮೂರನೇ ಅವಧಿಗೆ ಮುಖ್ಯಮಂತ್ರಿಯಾದರು. 2016ರಲ್ಲಿ ಎಐಎನ್‌ಆರ್‌ಸಿ ಅಧಿಕಾರಕ್ಕೆ ಏರಲು ವಿಫಲವಾಗಿದ್ದರಿಂದ ವಿಪಕ್ಷನಾಯಕರಾಗಿದ್ದರು.