ಹಿರಿಯ ನಾಯಕ, ಭಾರತದ ಉಪ ಪ್ರಧಾನಿ, ರಾಮ ರಥ ಯಾತ್ರೆ ಮೂಲಕ ದೇಶದಲ್ಲಿ ರಾಮಜನ್ಮ ಭೂಮಿ ಹೋರಾಟಕ್ಕೆ ಹೊಸ ಹುರುಪು ತುಂಬಿದ ಎಲ್‌ಕೆ ಅಡ್ವಾಣಿಗೆ ಭಾರತ ರತ್ನ ಘೋಷಣೆಯಾಗಿದೆ. ಅಡ್ವಾಣಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಇದೀಗ ಪುತ್ರಿ ಎಲ್‌ಕೆ ಅಡ್ವಾಣಿಗೆ ಸಿಹಿ ತಿನ್ನಿಸುವ ವಿಡಿಯೋ ಭಾರಿ ವೈರಲ್ ಆಗಿದೆ.
ನವದೆಹಲಿ(ಫೆ.03) ಭಾರತದ ಉಪ ಪ್ರಧಾನಿ, ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿಗೆ ಭಾರತ್ ರತ್ನ ಘೋಷಣೆ ಮಾಡಲಾಗಿದೆ. ಕೇಂದ್ರದ ಘೋಷಣೆ ಹೊರಬೀಳುತ್ತಿದ್ದಂತೆ ದೇಶಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಇತ್ತ ಅಡ್ವಾಣಿ ಮನೆಯಲ್ಲಿ ಸಂಭ್ರಮದ ವಾತವರಣ ನಿರ್ಮಾಣವಾಗಿದೆ. ಅಡ್ವಾಣಿಗೆ ಸಿಹಿ ತಿನ್ನಿಸಿ ಸಂಭ್ರಮ ಆಚರಿಸಲಾಗಿದೆ. ರಾಮ ಮಂದಿರ ಪ್ರಾಣಪ್ರತಿಷ್ಠೆ ಆಮಂತ್ರಣ ಪತ್ರಿಕೆ ನೀಡುವ ವೇಳೆ ಕಾಣಿಸಿಕೊಂಡಿದ್ದ 96ರ ಹರೆಯ ಅಡ್ವಾಣಿ ಇದೀಗ ಮತ್ತೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದಾರೆ.
ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ಘೋಷಿಸಿದ ಬಳಿಕ ಎಲ್‌ಕೆ ಅಡ್ವಾಣಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅಡ್ವಾಣಿ ಪುತ್ರಿ ಪ್ರತಿಭಾ ಅಡ್ವಾಣಿ, ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ. ಕೇಸರಿ ಜಾಕೆಟ್ ಮೂಲಕ ಕಾಣಿಸಿಕೊಂಡ ಅಡ್ವಾಣಿ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ಹಲವು ಬಿಜೆಪಿ ನಾಯಕರು, ಕಾರ್ಯಕರ್ತರು ಅಡ್ವಾಣಿಗೆ ಮನೆಗೆ ತೆರೆಳಿ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ.
Breaking: ಬಿಜೆಪಿಯ ಭೀಷ್ಮ ಎಲ್ ಕೆ ಅಡ್ವಾಣಿಗೆ ಭಾರತರತ್ನ ಘೋಷಣೆ
ಇತ್ತ ಬಿಜೆಪಿ ನಾಯಕರು ಅಡ್ವಾಣಿಗೆ ಭಾರತ್ ರತ್ನ ಘೋಷಣೆಗೆ ಹರ್ಷ ವ್ಯಕ್ತಪಡಿಸಿದ್ದರೆ. ರಾಜ್ಯ ಬಿಜೆಪಿ ಕೂಡ ಅಡ್ವಾಣಿಗೆ ಅಭಿನಂದನೆ ಸಲ್ಲಿಸಿದೆ. ಕೇಂದ್ರ ಸರ್ಕಾರವು ಬಿಜೆಪಿಯ ಹಿರಿಯ ನಾಯಕರು, ಬಿಜೆಪಿ ಭೀಷ್ಮ ಎಂದೇ ಖ್ಯಾತರಾದ ಶ್ರೀ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಿದೆ. ಸಾರ್ವಜನಿಕ ಜೀವನದಲ್ಲಿ ಶ್ರೀ ಎಲ್. ಕೆ. ಅಡ್ವಾಣಿ ಅವರ ದಶಕಗಳ ಸುದೀರ್ಘ ಸೇವೆ, ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ಪುನರುತ್ಥಾನದೆಡೆಗಿನ ಅವರ ಅವಿರತ ಪ್ರಯತ್ನಗಳು ಅಭಿನಂದನಾರ್ಹ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.
ಭಾರತದ ಸಂಸತ್ ನ ಗೌರವಕ್ಕೆ ಬಹುದೊಡ್ಡ ಘನತೆ ತಂದು ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿದ ದೇಶ ಕಂಡ ಶ್ರೇಷ್ಠ ರಾಜಕಾರಣಿ ಮಾಜಿ ಉಪ ಪ್ರಧಾನಿ ಶ್ರೀ ಲಾಲ್ ಕೃಷ್ಣ ಅಡ್ವಾಣಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ “ಭಾರತ ರತ್ನ” ಲಭಿಸಿರುವುದು ಕೋಟ್ಯಾಂತರ ಭಾರತೀಯರಿಗೆ ಅತೀವ ಹರ್ಷವನ್ನುಂಟು ಮಾಡಿದೆ, ಮಾನ್ಯ ಅಡ್ವಾಣಿಜೀ ಅವರನ್ನು ಅತ್ಯಂತ ಗೌರವ ಪೂರ್ವಕವಾಗಿ ಅಭಿನಂದಿಸುವೆ ಎಂದು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿವಿ ವೈಜಯೇಂದ್ರ ಟ್ವೀಟ್ ಮಾಡಿದ್ದಾರೆ. ಅಯೋಧ್ಯೆಯ ರಾಮನಿಗಾಗಿ ರಥಯಾತ್ರೆ ನಡೆಸಿ, ಭಾರತೀಯರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿದ್ದ ಆಧ್ಯಾತ್ಮಿಕ ಚಿಂತಕರೂ ಆದ ಶ್ರೀ ಲಾಲ್ ಕೃಷ್ಣ ಅಡ್ವಾಣಿ ಜೀ ಅವರು ಸರ್ವೋಚ್ಚ ‘ಭಾರತರತ್ನ’ ಪ್ರಶಸ್ತಿಗೆ ಭಾಜನರಾಗಿದ್ದು ಭಾರತದ ಪರಂಪರೆಗೆ ಸಂದ ಮಹಾನ್ ಗೌರವವಾಗಿದೆ ಎಂದಿದ್ದಾರೆ.
ಎಲ್‌ಕೆ ಅಡ್ವಾಣಿಗೆ ಭಾರತ ರತ್ನ ಘೋಷಣೆ; ಅಯೋಧ್ಯೆಯಿಂದ ಬಂತು ಪೇಜಾವರ ಶ್ರೀಗಳ ಸಂದೇಶ!
