ವಕ್ಫ್ ಆಸ್ತಿ ಮಾತು ಬಿಡಿ, ಈ ರೈಲು ನಿಲ್ದಾಣದ ಪಕ್ಕದ ಸ್ಥಳ ಪಾಕಿಸ್ತಾನ ಪ್ರಧಾನಿ ಆಸ್ತಿ ಎಂದ ಅಧಿಕಾರಿಗಳು!
ದೇಶದ ಹಲವು ಭಾಗದಲ್ಲಿ ವಕ್ಫ್ ವಿರುದ್ಧ ಹೋರಾಟ ನಡೆಯುತ್ತಿದೆ. ರೈತರ ಭೂಮಿ, ಸಾವಿರಾರು ವರ್ಷ ಇತಿಹಾಸವಿರುವ ದೇವಸ್ಥಾನ, ಶಾಲೆಗಳು ವಕ್ಫ್ ಎಂದು ಒಕ್ಕೆಲೆಬ್ಬಿಸುವ ಕೆಲಸಗಳು ನಡೆಯುತ್ತಿದೆ. ಇದರ ನಡುವೆ ವಿಚಿತ್ರ ಘಟನೆಯೊಂದು ನಡೆದಿದೆ. ಈ ರೈಲ್ವೇ ನಿಲ್ದಾಣದ ಪಕ್ಕದಲ್ಲಿರುವ ನಾಲ್ಕು ಅಂಗಡಿ, ಒಂದು ಮಸೀದಿ ಎಲ್ಲವೂ ಪಾಕಿಸ್ತಾನಿ ಪ್ರಧಾನಿ ಆಸ್ತಿ ಅನ್ನೋದು ಬಹಿರಂಗವಾಗಿದೆ.
ಲಖನೌ(ಡಿ.08) ವಕ್ಫ್ ಬೋರ್ಡ್ ವಿರುದ್ದ ದೇಶಾದ್ಯಂತ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ಇಡೀ ಗ್ರಾಮ, ದೇವಸ್ಥಾನ, ಶಾಲೆ, ಹೀಗೆ ಸಾವಿರಾರು ವರ್ಷಗಳ ಇತಿಹಾಸವಿರುದ ಹಲವು ಪ್ರದೇಶಗಳನ್ನು ವಕ್ಫ್ ತನ್ನದು ಎಂದು ಹಕ್ಕು ಮಂಡಿಸಿದೆ. ಇದರ ವಿರುದ್ದ ಹೋರಾಟ ನಡೆಯುತ್ತಿದೆ. ಭಾರತದ ಪ್ರತಿ ಜಿಲ್ಲೆಯಲ್ಲೂ ವಕ್ಫ್ ವಿರುದ್ದ ಹೋರಾಟ, ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆಗಳು ಒಂದಡೆಯಾದರೆ ಇದೀಗ ಉತ್ತರ ಪ್ರದೇಶದ ಮುಜಾಫರ್‌ನಗರದ ರೈಲು ನಿಲ್ದಾಣದ ಪಕ್ಕದಲ್ಲಿರುವ ನಾಲ್ಕು ಅಂಗಡಿ, ಒಂದು ಮಸೀದಿ ಸೇರಿದಂತೆ ಇಡೀ ಸ್ಥಳ ಪಾಕಿಸ್ತಾನದ ಮಾಜಿ ಪ್ರಧಾನಿ ಆಸ್ತಿ ಅನ್ನೋದು ಬಹಿರಂಗವಾಗಿದೆ.
ಮುಜಾಫರ್‌ನಗರ ರೈಲು ನಿಲ್ದಾಣದ ಪಕ್ಕದಲ್ಲಿ ಮಸೀದಿ ಹಾಗೂ ಕೆಲ ಅಂಗಡಿ ಮುಂಗಟ್ಟುಗಳು ವಿವಾದಿತ ಜಮೀನಿನಲ್ಲಿ ತಲೆ ಎತ್ತಿದೆ ಎಂದು ರಾಷ್ಟ್ರೀಯ ಹಿಂದೂ ಶಕ್ತಿ ಸಂಘಟನೆ ದೂರು ದಾಖಲಿಸಿತ್ತು. ವಕ್ಫ್ ಬೋರ್ಡ್ ತನ್ನದು ಎಂದು ಹೇಳಿಕೊಳ್ಳುತ್ತಿರುವ ಈ ಜಮೀನು ವಿವಾದಿತ ಪ್ರದೇಶ. ಈ ವಿವಾದಿತ ಪ್ರದೇಶದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗಿದೆ ಎಂದು ದೂರು ನೀಡಲಾಗಿತ್ತು. ಈ ದೂರಿನಿಂದ ಸ್ಫೋಟಕ ಮಾಹಿತಿಗಳು ಬಹಿರಂಗಗೊಂಡಿದೆ. ತನಿಖೆ ನಡೆಸಿದ ಅಧಿಕಾರಿಗಳೂ ಶಾಕ್ ಆಗಿದ್ದಾರೆ. ಕಾರಣ ಈ ಆಸ್ತಿ ವಕ್ಫ್ ಬೋರ್ಡ್ ಹೆಸರಿನಲ್ಲಿ ಇರಲಿಲ್ಲ. ದಾಖಲೆ ಪರಿಶೀಲಿಸಿ ದೆಹಲಿ ತೆರಳಿದ ಅಧಿಕಾರಿಗಳು, ಉತ್ತರ ಪ್ರದೇಶದ ಮುಜಾಫರ್‌ನಗರದ ರೈಲು ನಿಲ್ದಾಣದ ಪಕ್ಕದಲ್ಲಿರುವ ಸಂಪೂರ್ಣ ಸ್ಥಳ ಪಾಕಿಸ್ತಾನದ ಮೊದಲ ಪ್ರಧಾನಿ ಲಿಖಾಯತ್ ಆಲಿ ಖಾನ್ ಆಸ್ತಿ ಅನ್ನೋದು ಬಹಿರಂಗವಾಗಿದೆ.
ಈ ವಿವಾದಿತ ಸ್ಥಳದ ಮೂಲ ದಾಖಲೆ 1918ರಲ್ಲಿದೆ. ಲಿಖಾಯತ್ ಆಲಿ ಖಾನ್ ಪಾಕಿಸ್ತಾನದ ಮೊದಲ ಪ್ರಧಾನಿ. ಆದರೆ ಹುಟ್ಟಿದ್ದು ಭಾರತದ ಹರ್ಯಾಣದಲ್ಲಿ. ಭಾರತ ವಿಭಜನೆ ವೇಳೆ ಪಾಕಿಸ್ತಾನಕ್ಕೆ ತೆರಳಿದ ಲಿಖಾಯತ್ ಆಲಿ ಖಾನ್, ಪಾಕಿಸ್ತಾನದ ಮೊದಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಲಿಖಾಯತ್ ಆಲಿ ಖಾನ್ ತಂದೆ ರುಸ್ತಮ್ ಆಲಿ ಖಾನ್, ಬ್ರಿಟಿಷ್ ಸರ್ಕಾರದ ವೇಳೆ ಈ ಆಸ್ತಿಯನ್ನು ತಮ್ಮ ಹೆಸರಿಗೆ ಬೆರೆಸಿಕೊಂಡಿದ್ದಾರೆ. 1918ರಲ್ಲಿ ಈ ಆಸ್ತಿಯನ್ನು ಪುತ್ರರಾದ ಸಾಜಿದ್ ಖಾನ್ ಹೆಸರಿಗೆ ವರ್ಗಾಯಿಸಿದ್ದಾರೆ. ಸಾಜಿದ್ ಖಾನ್, ಲಿಖಾಯಾತ್ ಆಲಿ ಖಾನ್ ಸಹೋದರ. ಸಾಜಿದ್ ಖಾನ್ ಹಾಗೂ ಲಿಖಾಯತ್ ಆಲಿ ಖಾನ್ ಹೆಸರಿನಲ್ಲಿ ಈ ಆಸ್ತಿ ಇದೆ.
ದಾಖಲೆ ಪ್ರಕಾರ ಇದು ಪಾಕಿಸ್ತಾನ ಮೊದಲ ಪ್ರಧಾನಿ ಲಿಖಾಯತ್ ಹಾಗೂ ಸಹೋದರ ಸಾಜಿದ್ ಖಾನ್ ಹೆಸರಲ್ಲಿದೆ. ಇದು ಭಾರತದ ಶತ್ರು ದೇಶದ ಪ್ರಜೆ ಹೆಸರಲ್ಲಿರುವ ಕಾರಣ ಇದು ವಿವಾದಿತ ಭೂಮಿಯಾಗಿದೆ. 1947ರಲ್ಲಿ ಭಾರತ ವಿಭಜನೆ ವೇಳೆ ಭಾರತದಿಂದ ಪಾಕಿಸ್ತಾನ, ಚೀನಾ ಅಥವಾ ಇತರ ದೇಶಕ್ಕೆ ತೆರಳಿದ, ಪಲಾಯನ ಮಾಡಿದವರ ಆಸ್ತಿಯನ್ನು ವಿವಾದಿತ ಭೂಮಿ ಎಂದು ಪರಿಗಣಿಸಲಾಗುತ್ತದೆ.
ಇತ್ತ ಮಸೀದಿ ಹಾಗೂ ಪಕ್ಕದಲ್ಲಿರುವ ನಾಲ್ಕು ಶಾಪ್‌ಗಳ ಮಾಲೀಕ ಮೊಹಮ್ಮದ್ ಅಥರ್ ಈ ಕುರಿತು ಮತ್ತೊಂದು ವಾದ ಮುಂದಿಟ್ಟಿದ್ದಾರೆ. ಭಾರತ ವಿಭಜನೆಗೂ ಮೊದಲು ಇಲ್ಲಿ ಮಸೀದಿ ಇತ್ತು. ಈ ಜಾಗವನ್ನು ಮಸೀದಿಗೆ ಲಿಖಾಯತ್ ಹಾಗೂ ಅವರ ಸಹೋದರ ದಾನ ಮಾಡಿದ್ದರು ಎಂದು ಮೊಹಮ್ಮದ್ ಆಥರ್ ಹೇಳಿದ್ದಾರೆ. ಆದರೆ ವಿವಾದ ಮತ್ತಷ್ಟು ಹೆಚ್ಚಾಗಿದೆ. ಇದಕ್ಕೆ ಪೂರಕ ದಾಖಲೆ ಸಲ್ಲಿಸುವುದಾಗಿ ಮೊಹಮ್ಮದ್ ಅಥರ್ ಹೇಳಿದ್ದಾರೆ. ಭಾರತ ವಿಭಜನೆಗೂ ಮೊದಲೇ ಮಸೀದಿ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಇದು ವಿವಾದಿತ ಜಮೀನು ಅಲ್ಲ ಎಂದು ಮೊಹಮ್ಮದ್ ಅಥರ್ ಹೇಳಿದ್ದಾರೆ.