ನವದೆಹಲಿ(ಏ.13): ಕೊರೋನಾ ಮಾರ್ಗಸೂಚಿಗಳನ್ನು ಜನರು ಸರಿಯಾಗಿ ಪಾಲಿಸದೇ ಇರುವುದು ಹಾಗೂ ರೂಪಾಂತರಿ ಕೊರೋನಾ ವೈರಸ್‌ ಹಾವಳಿಯು, ಕೋವಿಡ್‌ 2ನೇ ಅಲೆ ಭೀಕರ ಸ್ವರೂಪದಲ್ಲಿ ಎದ್ದೇಳಲು ಕಾರಣವಾಗಿರಬಹುದು ಎಂದು ದಿಲ್ಲಿಯ ಪ್ರತಿಷ್ಠಿತ ಏಮ್ಸ್‌ ಆಸ್ಪತ್ರೆ ಮುಖ್ಯಸ್ಥ ಡಾ| ರಣದೀಪ್‌ ಗುಲೇರಿಯಾ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ಮಾತನಾಡಿದ ಅವರು, ‘ಕೊರೋನಾ ಮೊದಲನೇ ಅಲೆ ಸಂದರ್ಭದಲ್ಲಿ ಒಬ್ಬ ಸೋಂಕಿತನಿಂದ 30 ಜನರಿಗೆ ಸೋಂಕು ಹರಡಬಹುದು ಎಂದು ಅಂದಾಜು ಮಾಡುತ್ತಿದ್ದೆವು. ಆದರೆ 2ನೇ ಅಲೆಯನ್ನು ಗಮನಿಸಿದರೆ ಒಬ್ಬ ಸೋಂಕಿತನಿಂದ 30ಕ್ಕೂ ಹೆಚ್ಚು ಜನರಿಗೆ ಸೋಂಕು ಹರಡುತ್ತದೆ ಎನ್ನಿಸುತ್ತದೆ’ ಎಂದು ಹೇಳಿದರು.

ಫೆಬ್ರವರಿಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದ್ದಂತೆಯೇ ಜನರು, ‘ಕೊರೋನಾ ತನ್ನ ಶಕ್ತಿ ಕಳೆದುಕೊಂಡಿದೆ’ ಎಂದು ಭಾವಿಸಿದರು. ಹೋಟೆಲ್‌, ಮಾರುಕಟ್ಟೆ, ಮಳಿಗೆಗಳು ಎಲ್ಲೆಂದರಲ್ಲಿ ಜನರು ಅಲೆದಾಟ ಆರಂಭಿಸಿದರು. ಇವರೆಲ್ಲ ಇಂದು ವೈರಸ್‌ನ ಸೂಪರ್‌ ಸ್ಪ್ರೆಡರ್‌‌ಗಳು. ಬಹುಶಃ ಇಂದು ಸೋಂಕು ಹರಡುವಿಕೆ ತೀವ್ರಗೊಳ್ಳಲು ವೈರಾಣು ರೂಪಾಂತರಗೊಂಡಿರುವುದು ಕಾರಣ ಇರಬಹುದು’ ಎಂದು ವಿಶ್ಲೇಷಿಸಿದರು.

ಒಂದು ವೇಳೆ ಜನರು ಈಗಲಾದರೂ ಮಾರ್ಗಸೂಚಿ ಹಾಗೂ ಸುರಕ್ಷತಾ ಕ್ರಮ ಪಾಲನೆ ಮಾಡದೇ ಹೋದರೆ ಭಾರತದ ಆರೋಗ್ಯ ವ್ಯವಸ್ಥೆಗೇ ದೊಡ್ಡ ಕಪ್ಪುಚುಕ್ಕೆಯಾಗಲಿದೆ. ಹಾಗಾಗಿ ಸೋಂಕು ನಿಯಂತ್ರಣಕ್ಕೆ ಬಿಗಿ ಕ್ರಮ ಅತ್ಯಂತ ಜರೂರಾಗಿದೆ ಎಂದು ಆಗ್ರಹಿಸಿದರು.