ಮಹಾರಾಷ್ಟ್ರ[ಜ.25]: ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶದಿಂದ ನಮ್ಮ ದೇಶಕ್ಕೆ ಬಂದಿರುವ ಮುಸ್ಲಿಮರನ್ನು ಹೊರಗೆ ಹಾಕಲೇಬೇಕು ಎಂದು ಶಿವಸೇನೆ ಹೇಳಿದೆ. ಈ ಮೂಲಕ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ಸೂಚಿಸಿದೆ.

ದೇಶದಾದ್ಯಂತ ಪೌರತ್ವ ಕಾಯ್ದೆ ಹಾಗೂ NRC ಪರ- ವಿರೋಧ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಇಂತಹುದ್ದೊಂದು ಅಭಿಪ್ರಾಯ ಪ್ರಕಟಿಸಿದೆ. ಮಹರಾಷ್ಟ್ರದಲ್ಲಿ ಶಿವಸೇನೆಯು ಕಾಂಗ್ರೆಸ್ ಹಾಗೂ NCP ಜೊತೆಗೂಡಿ ಸರ್ಕಾರ ರಚಿಸಿದೆ. ಈ ಮೂಲಕ ಬಿಜೆಪಿಗೆ ಸೆಡ್ಡು ಹೊಡೆದಿದೆ. ಹೀಗಿದ್ದರೂ ಪೌರತ್ವ ಕಾಯ್ದೆ ವಿಚಾರದಲ್ಲಿ ಇದು ಬಿಜೆಪಿ ನಿಲುವನ್ನು ಬೆಂಬಲಿಸಿರುವುದು ಹಲವರಿಗೆ ಅಚ್ಚರಿಯುಂಟು ಮಾಡಿದೆ. 

ಏನಿದೆ ಸಾಮ್ನಾ ಪತ್ರಿಕೆಯಲ್ಲಿ?

ಪೌರತ್ವ ಕಾಯ್ದೆ ಪರ ಸಾಮ್ನಾದಲ್ಲಿ ಪ್ರಕಟವಾಗಿರುವ ಲೇಖನದಲ್ಲಿ 'ದೇಶದೊಳಗೆ ನುಸುಳಿರುವ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಮುಸಲ್ಮಾನರನ್ನು ಹೊರಗೆ ಕಳುಹಿಸಿ. ಅವರನ್ನು ಹೊರಗೆ ಹಾಕಲೇಬೇಕು, ಇದರಲ್ಲಿ ಎರಡು ಮಾತಿಲ್ಲ. ಆದರೆ ಇದಕ್ಕಾಗಿ ಯಾವುದೇ ರಾಜಕೀಯ ಪಕ್ಷವೊಂದು ತಮ್ಮ ಧ್ವಜದ ಬಣ್ಣ ಬದಲಾಯಿಸಬೇಕಾದ ಅನಿವಾರ್ಯತೆ ಬರುತ್ತದೆ ಎಂಬುವುದು ಮಜಾದಾಯಕ ವಿಚಾರ' ಎಂದಿದೆ. ಕಳೆದೆರಡು ದಿನಗಳ ಹಿಂದಷ್ಟೇ ರಾಜ್ ಠಾಕ್ರೆ ನೀಲಿ ಬಣ್ಣವಿದ್ದ ತಮ್ಮ ಪಕ್ಷದ ಧ್ವಜದ ಬಣ್ಣವನ್ನು ಕೇಸರಿಮಯವನ್ನಾಗಿಸಿತ್ತು. ಇನ್ನು ಇದೇ ಸಂದರ್ಭದಲ್ಲಿ ಶಿವಸೇನೆಯು 'ಪೌರತ್ವ ಕಾಯ್ದೆಯಲ್ಲೂ ಲೋಪದೋಷಗಳಿವೆ' ಎಂದು ಬರೆದಿರುವುದು ಉಲ್ಲೇಖನೀಯ.

ನಾವು ಧ್ವಜದ ಬಣ್ಣ ಬದಲಿಸಿಲ್ಲ

ಇನ್ನು ಕಳೆದೆರಡು ದಿನಗಳ ಹಿಂದೆ ಪಕ್ಷದ ಧ್ವಜದ ಬಣ್ಣ ಬದಲಾಯಿಸಿದ ರಾಜ್ ಠಾಕ್ರೆಗೆ ಸಾಮ್ನಾದಲ್ಲಿ ಟಾಂಗ್ ನೀಡಿದ್ದು, 'ಮರಾಠಿಗರ ಪರ ಹೋರಾಟ ನಡೆಸುತ್ತಿರುವ, ಕಳೆದ 14 ವರ್ಷಗಳ ಹಿಂದೆ ಸ್ಥಾಪನೆಯಾದ ಪಕ್ಷವೊಂದು ಹಿಂದುತ್ವದೆಡೆ ಸರಿಯುತ್ತಿರುವುದು ಸ್ಪಷ್ಟವಾಗುತ್ತಿದೆ. ಶಿವಸೇನೆ ಕೂಡಾ ಮರಾಠರ ಪರ ಕೆಲಸ ಮಾಡಿದೆ. ಹಳೆಯ ರಾಜಕೀಯ ಪ್ರತಿಸ್ಪರ್ಧಿಗಳನ್ನೇ ಪಾಲುದಾರರಾನ್ನಾಗಿಸಿಕೊಂಡು ನಾನು ಹೊಸ ರಾಜಕೀಯ ಮಾರ್ಗವನ್ನು ಆರಿಸಿಕೊಂಡಿದ್ದೇನೆ. ನಮ್ಮ ಧ್ವಜದ ಬಣ್ಣ ಬದಲಾಯಿಸಿಲ್ಲ. ನಮ್ಮದು ಕೇಸರಿಯಾಗಿಯೇ ಉಳಿದಿದೆ' ಎಂದಿದೆ. 

ಜನವರಿ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ