ಅಯೋಧ್ಯೆಯಲ್ಲಿ ರಾಮಜ್ಯೋತಿ ಪಡೆದು ಕಾಶಿಗೆ ಹೊರಟ ಮುಸ್ಲಿಂ ಮಹಿಳೆಯರು!
ಮುಸ್ಲಿಂ ಮಹಿಳೆಯರಿಬ್ಬರು ರಾಮ ಜ್ಯೋತಿ ಪಡೆಯಲು ಕಾಶಿಯಿಂದ ಅಯೋಧ್ಯೆಗೆ ತಲುಪಿದ್ದಾರೆ. ಅಲ್ಲಿ ರಾಮಜ್ಯೋತಿ ಸ್ವೀಕರಿಸಿ ಸಂತೋಷಗೊಂಡ ಅವರು ಈ ದೇಶ ರಾಮನದ್ದು ಎಂದಿದ್ದಾರೆ.
ರಾಮ ಜ್ಯೋತಿ ತರಲು ಮುಸ್ಲಿಂ ಮಹಿಳೆಯರಿಬ್ಬರು ಕಾಶಿಯಿಂದ ಅಯೋಧ್ಯೆಗೆ ತೆರಳಿದ ಅಪರೂಪದ ವಿದ್ಯಮಾನವಿದು. ಅವರೇ ನಜ್ನೀನ್ ಅನ್ಸಾರಿ ಹಾಗೂ ನಜ್ಮಾ ಪರ್ವೀನ್.
ನಜ್ನೀನ್ ಅನ್ಸಾರಿ. ಮುಸ್ಲಿಂ ಮಹಿಳಾ ಪ್ರತಿಷ್ಠಾನದ ರಾಷ್ಟ್ರೀಯ ಅಧ್ಯಕ್ಷೆ. ರಾಮಪಂಥ್ ಆಯೋಜಿಸಿದ್ದ ರಾಮಜ್ಯೋತಿ ಯಾತ್ರೆಯ ನೇತೃತ್ವ ವಹಿಸಿದ್ದ ಆಕೆ, ತಂಡವನ್ನು ಕಾಶಿಯಿಂದ ಅಯೋಧ್ಯೆಗೆ ಮುನ್ನಡೆಸಿದರು. ಅಲ್ಲಿ ಮಹಾಂತ ಶಂಭು ಪ್ರಭು ದೇವಾಚಾರ್ಯ ಅವರಿಂದ ರಾಮಜ್ಯೋತಿ ಪಡೆದ ಆಕೆ, ಈ ದೇಶ ರಾಮನದ್ದು ಎಂದು ಹೇಳಿದರು.
ಮುಂದುವರಿದು, 'ರಾಮನ ರಾಷ್ಟ್ರವಿದು, ಅವನಿಲ್ಲದೆ ಭಾರತದ ಶ್ರೇಷ್ಠ ಸಂಸ್ಕೃತಿಯನ್ನು ವಿವರಿಸಲು ಸಾಧ್ಯವಿಲ್ಲ. ಶಾಂತಿ ಮತ್ತು ಏಕತೆಗಾಗಿ ಪ್ರತಿ ಮನೆಯಲ್ಲೂ ರಾಮಜ್ಯೋತಿ ಬೆಳಗಿಸುವುದು ಅಗತ್ಯ. ನಾವು ರಾಮನ ಮಕ್ಕಳೇ. ಯಾವುದೇ ಕಾರಣಕ್ಕೂ ಅವನಿಂದ ಬೇರ್ಪಡುವುದು ಸಾಧ್ಯವಿಲ್ಲ. ಮುಸ್ಲಿಮರು ಈ ಸಂತೋಷದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು, ' ಎಂದು ಕರೆ ನೀಡಿದರು.
'ರಾಮನ ಆದರ್ಶಗಳು ಮತ್ತು ಚಾರಿತ್ರ್ಯ ಇಂದು ಇಡೀ ಜಗತ್ತಿನ ಅಗತ್ಯವಾಗಿದೆ. ರಾಮನ ಹೆಸರು ಜಗತ್ತನ್ನು ಭಯೋತ್ಪಾದನೆ ಮತ್ತು ಹಿಂಸಾಚಾರದಿಂದ ಮುಕ್ತಗೊಳಿಸಲು ಸಮರ್ಥವಾಗಿದೆ. ರಾಮಜ್ಯೋತಿಯು ಮನೆಗಳನ್ನು ಮಾತ್ರವಲ್ಲದೆ ಜನರ ಆತ್ಮವನ್ನೂ ಬೆಳಗಿಸುತ್ತದೆ' ಎಂದರು.
ಅಯೋಧ್ಯೆ ನಿರ್ಮಾಣ ಕಾರ್ಯದಲ್ಲಿ ಕನ್ನಡಿಗರ ಹವಾ: ಕೋಟೆನಾಡಿನ ಶಿಲ್ಪಿ ಕೈ ...
ಇನ್ನು ನಜ್ಮಾ ಮಾತನಾಡಿ, 'ಜನರು ಧರ್ಮವನ್ನು ಬದಲಾಯಿಸಬಹುದು ಆದರೆ ಪೂರ್ವಜರು, ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಬದಲಾಯಿಸಲು ಸಾಧ್ಯವಿಲ್ಲ ' ಎಂದರು.
ಈ ಯಾತ್ರೆ ಸಂದರ್ಭದಲ್ಲಿ ಕಾಶಿಯಿಂದ ಅಯೋಧ್ಯೆವರೆಗೆ ದಾರಿಯುದ್ದಕ್ಕೂ ಅನೇಕ ಸ್ಥಳಗಳಲ್ಲಿ ಮುಸ್ಲಿಂ ಸಮುದಾಯದ ಜನರು ಯಾತ್ರೆಯಲ್ಲಿ ಭಾಗವಹಿಸಿದ ಸದಸ್ಯರನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.
ರಾಮಜ್ಯೋತಿ ಪಡೆದು ನಜ್ನೀನ್ ಹಾಗೂ ನಜ್ಮಾ ಭಾನುವಾರ ಕಾಶಿಗೆ ಮರಳಲಿದ್ದಾರೆ.
ಯಾರೀ ಮಹಿಳೆಯರು?
ಕಾಶಿ ನಿವಾಸಿಗಳಾದ ನಜ್ನೀನ್ ಅನ್ಸಾರಿ ಮತ್ತು ಡಾ.ನಜ್ಮಾ ಪರ್ವೀನ್ ಕಳೆದ 17 ವರ್ಷಗಳಿಂದ ರಾಮನ ಭಕ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. 2006ರಲ್ಲಿ ಭಯೋತ್ಪಾದಕರು ಕಾಶಿಯ ಸಂಕಟ್ ಮೋಚನ್ ದೇಗುಲದಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದಾಗ ನಜ್ನೀನ್ ಮತ್ತು ಡಾ.ನಜ್ಮಾ ಅವರು 70 ಮುಸ್ಲಿಂ ಮಹಿಳೆಯರೊಂದಿಗೆ ಸಂಕತ್ ಮೋಚನ್ ದೇವಸ್ಥಾನಕ್ಕೆ ತೆರಳಿ ಹನುಮಾನ್ ಚಾಲೀಸಾ ಪಠಿಸಿದರು. ಈ ಮೂಲಕ ಹಿಂದೂ-ಮುಸ್ಲಿಂ ನಡುವೆ ಹುಟ್ಟಿಕೊಂಡಿದ್ದ ದ್ವೇಷವನ್ನು ಕೊನೆಗಾಣಿಸುವ ಪ್ರಯತ್ನ ಮಾಡಿದರು. ಪ್ರತಿ ವರ್ಷ ರಾಮನವಮಿ ಮತ್ತು ದೀಪಾವಳಿಯಂದು ಅವರು ನೂರಾರು ಮುಸ್ಲಿಂ ಮಹಿಳೆಯರೊಂದಿಗೆ ಭಗವಾನ್ ಶ್ರೀರಾಮನ ಮಹಾ ಆರತಿಯನ್ನು ಮಾಡುತ್ತಾರೆ. ನಜ್ನೀನ್ ಅವರು ಹನುಮಾನ್ ಚಾಲೀಸಾವನ್ನು ಉರ್ದುವಿನಲ್ಲಿ ಬರೆದಿದ್ದಾರೆ. ಡಾ. ನಜ್ಮಾ ಅವರು ಬಿಎಚ್‌ಯುನಿಂದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಪಿಎಚ್‌ಡಿ ಮಾಡಿದ್ದಾರೆ.
ಯಾರಾದ್ರೂ ರಾಮ ಮಂದಿರ ಕೆಡವಿ ಮಸೀದಿ ಕಟ್ಟಿದರೆ, ಅವರಪ್ಪನಿಗೆ ಹುಟ್ಟಿದೋ ...
ಪೂರ್ವಜರನ್ನು ಸೇರಿಸುವ ಕಾರ್ಯಕ್ರಮ
ಜನವರಿ 7 ರಂದು ಕಾಶಿಯ ಸುಭಾಷ್ ಭವನದಲ್ಲಿ ವಿಶಾಲ ಭಾರತ ಸಂಸ್ಥಾನ ಮತ್ತು ರಾಮಪಂಥ್ ವತಿಯಿಂದ 'ನಿಮ್ಮ ಪೂರ್ವಜರನ್ನು ಸೇರಿಕೊಳ್ಳಿ, ರಾಮನನ್ನು ಸೇರಿಕೊಳ್ಳಿ' ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪೂರ್ವ ಉತ್ತರ ಪ್ರದೇಶದ ನೂರಾರು ಮುಸ್ಲಿಂ ಕಾರ್ಯಕರ್ತರು ಇದರಲ್ಲಿ ಭಾಗವಹಿಸಲಿದ್ದಾರೆ.