* ಕೋಳಿ ಮಾಂಸವನ್ನು ಹಿಂದೂ ದೇವರ ಫೋಟೊಗಳಲ್ಲಿ ಸುತ್ತಿ ಮಾರಾಟ* ಉತ್ತರ ಪ್ರದೇಶದ ವ್ಯಕ್ತಿ ಪೊಲೀಸರ ವಶಕ್ಕೆ* ತನಿಖೆಯ ವೇಳೆ ಪೊಲೀಸರ ಮೇಲೂ ಮಾರಣಾಂತಿಕ ಹಲ್ಲೆ

ಲಖನೌ(ಜು;.06): ಕೋಳಿ ಮಾಂಸವನ್ನು ಹಿಂದೂ ದೇವರ ಫೋಟೊಗಳಲ್ಲಿ ಸುತ್ತಿ ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಬಂಧನದ ವೇಳೆ ಪೊಲೀಸರ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ತಾಲಿಬ್‌ ಹುಸೇನ್‌ ಎಂಬ ವ್ಯಕ್ತಿಯು ಹಿಂದೂ ದೇವತೆಯ ಚಿತ್ರಗಳಿರುವ ಹಾಳೆಗಳಲ್ಲಿ ಕೋಳಿ ಮಾಂಸವನ್ನು ಸುತ್ತಿ ಮಾರುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತಿದ್ದಾನೆ ಎಂದು ಭಾನುವಾರ ಜನರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಗೆ ಅಂಗಡಿಗೆ ಹೋದಾಗ ತಾಲಿಬ್‌ ಚಾಕುವಿನಿಂದ ಪೊಲೀಸರ ಮೇಲೆ ಹತ್ಯೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ತಾಲಿಬ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದು ಬಂಧಿಸಿದ್ದಾರೆ.

ಬಕ್ರೀದ್‌; ಗೋಹತ್ಯೆ ತಡೆಯಲು ಮನವಿ

ಬಕ್ರೀದ್‌ ಹಬ್ಬದ ನಿಮಿತ್ತ ಹೆಚ್ಚಳಗೊಳ್ಳಬಹುದಾದ ಗೋಹತ್ಯೆ ಪ್ರಕರಣಗಳನ್ನು ತಡೆಗಟ್ಟುವುದಲ್ಲದೇ ತೇರದಾಳ ಪೊಲೀಸ್‌ ಠಾಣೆ ವ್ಯಾಪ್ತಿಯ ರಬಕವಿ ನಗರ, ತೇರದಾಳ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ್ಲ ಗೋ ಹತ್ಯೆ, ಗೋವುಗಳ ಸಾಗಾಟ, ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುವಂತಹ ಕುಕೃತ್ಯಗಳ ಬಗ್ಗೆ ಮುಂಜಾಗ್ರತೆಯಾಗಿ ಅತ್ಯಗತ್ಯ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ವೀರ ಸಾವರಕರ ಯುವಕರ ಸಂಘ ಪೊಲೀಸ್‌ ಠಾಣೆಗೆ ತೆರಳಿ ಮನವಿ ಸಲ್ಲಿಸಿದೆ.

ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಗೋವುಗಳನ್ನು ದೇವರ ಸ್ವರೂಪ ಎಂದು ನಂಬಿರುವ ಹಿಂದೂಗಳ ಭಾವನೆಗೆ ಧಕ್ಕೆ ಬರಬಾರದು. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಘ ಮನವಿ ಮಾಡಿದೆ.

ಗೋವುಗಳ ಕಳ್ಳ ಸಾಗಾಣೆ ತಡೆಗೆ ಚೆಕ್‌ಪೊಸ್ಟ್‌

ಬಕ್ರಿದ್‌ ಹಬ್ಬ ಆಗಮಿಸಿದ ಹಿನ್ನೆಲೆ ಹಬ್ಬಕ್ಕಾಗಿ ಗೋವುಗಳನ್ನು ಕಳ್ಳ ಸಾಗಾಣೆ ತಡೆಗಟ್ಟುವ ಸಲುವಾಗಿ ಅಫಜಲ್ಪುರ ತಾಲೂಕಿನ ಚವಡಾಪುರ, ಸೊನ್ನ, ಬಳೂರ್ಗಿ ಹಾಗೂ ಅರ್ಜುಣಗಿ ಗ್ರಾಮಗಳಲ್ಲಿ ಚೆಕ್‌ಪೊಸ್ಟ್‌ ತೆರೆಯಲಾಗಿದೆ ಎಂದು ಸಿಪಿಐ ಜಗದೇವಪ್ಪ ಪಾಳಾ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು ಮುಸಲ್ಮಾನರು ಬಕ್ರೀದ್‌ ಹಬ್ಬವನ್ನು ಆಚರಿಸಲಿ. ಆದರೆ ಗೋವುಗಳನ್ನು ಕಳ್ಳ ಸಾಗಾಣೆ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಹೀಗಾಗಿ ಅಕ್ರಮ ಗೋವು ಸಾಗಾಟ ತಡೆಗಟ್ಟುವ ಸಲುವಾಗಿ ತಾಲೂಕಿನ ನಾಲ್ಕು ಕಡೆ ಚೆಕ್‌ಪೊಸ್ಟ್‌ ತೆರೆಯಲಾಗಿದ್ದು, ಹಗಲು ರಾತ್ರಿ ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದರು.

ಅತನೂರ ಗ್ರಾಪಂ ಪಿಡಿಒ ಹಣಮಂತ್ರಾಯ ಮಾತನಾಡಿ, ಪ್ರತಿ ಬುಧವಾರಕ್ಕೊಮ್ಮೆ ನಡೆಯುತ್ತಿದ್ದ ದನಗಳ ಸಂತೆಯನ್ನು ಬಕ್ರಿದ್‌ ಹಬ್ಬದ ಹಿನ್ನೆಲೆ ರದ್ದುಗೊಳಿಸಲಾಗಿದೆ. ಬಕ್ರಿದ್‌ ಮುಗಿದ ಬಳಿಕ ಎಂದಿನಂತೆ ಪ್ರತಿ ಬುಧವಾರಕ್ಕೊಮ್ಮೆ ದನಗಳಸಂತೆ ನಡೆಯಲಿದೆ ಎಂದು ತಿಳಿಸಿದ್ದಾರೆ.