ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಬಾಂಬ್ ಸ್ಫೋಟವು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಈ ನಡುವೆ, ಮುಸ್ಲಿಂ ಐಟಿ ಸೆಟ್ ಒಂದು ಶಾಂತಿಯುತವಾಗಿರಲು ಮನವಿ ಮಾಡಿದ್ದು, ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಯನ್ನು ಹುಟ್ಟುಹಾಕಿದೆ.

ದೆಹಲಿಯ ಕೆಂಪುಕೋಟೆಯಲ್ಲಿ ನಡೆದಿರುವ ಬಾಂಬ್​ ಬ್ಲಾಸ್ಟ್​ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಬಾಬ್ರಿ ಮಸೀದಿ ಧ್ವಂಸದ ಹಿನ್ನೆಲೆಯಲ್ಲಿ ಡಿಸೆಂಬರ್​ 6 ರಂದು ಸರಣಿ ಬಾಂಬ್​ ಸ್ಫೋಟದ ಸಂಚು ರೂಪಿಸಿದ್ದ ಉಗ್ರರು, ಅದರ ಬಗ್ಗೆ ಭದ್ರತಾ ಸಿಬ್ಬಂದಿಗೆ ತಿಳಿಯುತ್ತಲೇ ಇಂಥದ್ದೊಂದು ಕೃತ್ಯ ಮಾಡಿರುವುದು ಬೆಳಕಿಗೆ ಬಂದಿದೆ. ಇದೀಗ ರಾಜಕೀಯ ತಿರುವು ಕೂಡ ಪಡೆದುಕೊಂಡಿದೆ. ಬಿಹಾರದ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಈ ಬ್ಲಾಸ್ಟ್​ ಮಾಡಿಸಿದ್ದಾರೆ ಎನ್ನುವ ಅಸಂಬದ್ಧ ಹೇಳಿಕೆ ಕಾಂಗ್ರೆಸ್ಸಿಗರು ನೀಡುತ್ತಿದ್ದಾರೆ. ಐವಿಎಂ ಆಯ್ತು, ವೋಟ್​ ಚೋರಿ ಆರೋಪವಾಯ್ತು, ಇದೀಗ ಬಿಹಾರದಲ್ಲಿ ಸೋಲುವ ಭೀತಿಯಿಂದ ಬಾಂಬ್​ ಬ್ಲಾಸ್ಟ್​ ಬಗ್ಗೆ ಮಾತನಾಡುತ್ತಿರುವುದಾಗಿ ಬಿಜೆಪಿ ಬೆಂಬಲಿಗರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪೋಸ್ಟ್​ನಲ್ಲಿ ಏನಿದೆ?

ಇವೆಲ್ಲವುಗಳ ನಡುವೆಯೇ, ಮುಸ್ಲಿಂ ಐಟಿ ಸೆಟ್​ ಜನರಲ್ಲಿ ಒಂದು ಮನವಿಯನ್ನು ಮಾಡಿಕೊಂಡಿದೆ. ಇದು ಅದರಲ್ಲಿ ಅವರು ಬರೆದಿರುವುದು ಏನೆಂದರೆ,

1. ಕೋಪಗೊಂಡ, ನಿಂದನೀಯ ಅಥವಾ ಸರ್ಕಾರ ವಿರೋಧಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಬೇಡಿ, ಇದು ದ್ವೇಷಕ್ಕೆ ಹಾದಿ ಮಾಡಿಕೊಡುತ್ತದೆ.

2. ಹೌದು, ನಾವು ನರೇಂದ್ರ ಮೋದಿ ಮತ್ತು ಈ ಸರ್ಕಾರವನ್ನು ವರ್ಷಕ್ಕೆ 12 ತಿಂಗಳು ವಿರೋಧಿಸುತ್ತೇವೆ. ಆದರೆ ಇದೀಗ, ನಾವು ಶಾಂತವಾಗಿರಬೇಕು ಮತ್ತು ಸತ್ಯಗಳು ಹೊರಬರಲು ಬಿಡಬೇಕು.

3. ಸ್ಫೋಟಕ್ಕೆ ಸಂಬಂಧಿಸಿದ ಯಾವುದನ್ನೂ ಸಮರ್ಥಿಸಿಕೊಳ್ಳುವುದನ್ನು ಅಥವಾ ವಿವರಿಸುವುದನ್ನು ತಪ್ಪಿಸಿ, ಅದು ಬುದ್ಧಿವಂತ ಅಥವಾ ಪ್ರಯೋಜನಕಾರಿಯಲ್ಲ ಮಾರ್ಗವಲ್ಲ.

4. ನಕಲಿ ಸುದ್ದಿ ಮತ್ತು ದ್ವೇಷ-ಪ್ರಚಾರದ ಪೋಸ್ಟ್‌ಗಳಿಂದ ದೂರವಿರಿ, ಟ್ರೋಲ್‌ಗಳು ಮುಸ್ಲಿಮರು ಪ್ರತಿಕ್ರಿಯಿಸಬೇಕೆಂದು ಬಯಸುತ್ತಾರೆ. ಇದರಿಂದ ಅವರು ನಮ್ಮ ಮಾತುಗಳನ್ನು ತಿರುಚಬಹುದು.

5. ಪ್ರತಿಕ್ರಿಯೆಯಲ್ಲ, ಪ್ರಬುದ್ಧತೆ ಮತ್ತು ತಾಳ್ಮೆಯನ್ನು ತೋರಿಸಿ.

ಭಾರತದ ಮುಸ್ಲಿಂ ಯುವಕರು ಮಾಹಿತಿಯುಕ್ತರು, ಬುದ್ಧಿವಂತರು ಮತ್ತು ಜವಾಬ್ದಾರಿಯುತ ನಾಗರಿಕರು ಎಂದು ಮತ್ತೊಮ್ಮೆ ಸಾಬೀತುಪಡಿಸೋಣ, ಅವರು ಯಾವುದೇ ವಿಭಜಕ ಬಲೆಗೆ ಬೀಳುವುದಿಲ್ಲ' ಎಂದು ಇಂಗ್ಲಿಷ್​ನಲ್ಲಿ ಬರೆದಿದ್ದಾರೆ.

ಮಿಶ್ರ ಪ್ರತಿಕ್ರಿಯೆ

ಈ ಪೋಸ್ಟ್​ಗೆ ಈಗ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಇಂಥದ್ದೊಂದು ಮನವಿ ಮಾಡಿಕೊಂಡಿರುವುದು ಉತ್ತಮವಾಗಿದೆ. ಭಯೋತ್ಪಾದನೆ ನಡೆದಾಗಲೆಲ್ಲಾ ಒಂದು ಧರ್ಮವನ್ನು ದೂಷಿಸುವುದು ಮಾಮೂಲಾಗಿದೆ. ಆದ್ದರಿಂದ ಇದು ಒಳ್ಳೆಯದು ಎಂದು ಕೆಲವರು ಹೇಳಿದ್ದಾರೆ.

ಮತ್ತೆಕೆಲವರು, ನೀವು ಈ ಕೃತ್ಯವನ್ನು ವಿರೋಧಿಸುವ ಬಗ್ಗೆ ಒಂದೇ ಒಂದು ಲೈನ್​ ಹಾಕಿಲ್ಲವಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಮುಂದೆ ಇಂಥ ಹೀನಾಯ ಕೃತ್ಯ ಮಾಡದಂತೆ ನೀವು ಮನವಿ ಮಾಡಿಕೊಳ್ಳಬಹುದಲ್ಲವಾ ಎಂದು ಕೇಳುತ್ತಿದ್ದಾರೆ. ಒಳ್ಳೆಯ ಪೋಸ್ಟ್, ಆದರೆ ನೀವು ಪ್ರಮುಖ ಸಾಲುಗಳನ್ನು ತಪ್ಪಿಸಿಕೊಂಡಿದ್ದೀರಿ ಎನ್ನುತ್ತಲೇ ಕಮೆಂಟಿಗರೊಬ್ಬರು,

1, ನೀವು ವಾಸಿಸುವ ರಾಷ್ಟ್ರವನ್ನು ಪ್ರೀತಿಸಿ, ಅಥವಾ ನೀವು ಪ್ರೀತಿಸುವ ರಾಷ್ಟ್ರದಲ್ಲಿ ವಾಸಿಸಿ. 2, ನೆಲದ ಕಾನೂನನ್ನು ಗೌರವಿಸಿ. 3, ಭಯೋತ್ಪಾದನೆಯನ್ನು ನಿಲ್ಲಿಸಿ. 4, ನಿಮ್ಮ ತಾಯಿ ಮತ್ತು ನಿಮ್ಮ ತಾಯ್ನಾಡನ್ನು ಸಮಾನವಾಗಿ ಪ್ರೀತಿಸಿ ಎಂದೂ ಹೇಳಿದ್ದಾರೆ.

ಮತ್ತೆ ಕೆಲವರು, ನರೇಂದ್ರ ಮೋದಿಯವರನ್ನು ದ್ವೇಷಿಸುವ ಬಗ್ಗೆ ಸರಿಯಾಗಿ ಬರೆದಿದ್ದೀರಿ. ಆದರೆ ಅವರ ಸರ್ಕಾರ ನೀಡುವ ಪಡಿತರ, ಆರೋಗ್ಯ ರಕ್ಷಣೆ, ಮನೆಗಳು, ವಿದ್ಯಾರ್ಥಿವೇತನಗಳು ಮತ್ತು ಇತರ ಸೌಲಭ್ಯಗಳನ್ನು ಸಮುದಾಯ ಏಕೆ ಸ್ವೀಕರಿಸುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ, ಈ ಪೋಸ್ಟ್​ ಭಾರಿ ಚರ್ಚೆಯನ್ನು ಹುಟ್ಟುಹಾಕುತ್ತಿದೆ.

Scroll to load tweet…