ಚಂಡೀಗಢ(ಫೆ.11): ಮುಸ್ಲಿಂ ಬಾಲಕಿಯರು ಋುತುಮತಿಯಾಗುತ್ತಲೇ ವಿವಾಹಕ್ಕೆ ಅರ್ಹತೆ ಪಡೆದುಕೊಳ್ಳುತ್ತಾರೆ. ಅಂಥ ಬಾಲಕಿಯರಿಗೆ 18 ವರ್ಷ ಪೂರ್ಣಗೊಳ್ಳದೇ ಇದ್ದರೂ ಅವರ ವಿವಾಹ ಕಾನೂನು ಬದ್ಧವಾಗಿರುತ್ತದೆ ಎಂದು ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಪಂಜಾಬ್‌ನ 36 ವರ್ಷದ ವ್ಯಕ್ತಿಯೊಬ್ಬರು 17 ವರ್ಷದ ಬಾಲಕಿಯನ್ನು ವಿವಾಹವಾಗಿದ್ದರು. ಆದರೆ ಈ ಸಂಬಂಧ ಕುಟುಂಬ ಸದಸ್ಯರ ಆಕ್ಷೇಪ ಇದ್ದ ಕಾರಣ, ರಕ್ಷಣೆ ನೀಡುವಂತೆ ಜೋಡಿ ಕೋರ್ಟ್‌ ಮೊರೆ ಹೋಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಅಲಕಾ ಸರೀನ್‌ ಅವರು, ‘ಸರ್‌ ದಿನ್ಷಾ ಫರ್‌ದುನ್ಜಿ ಮುಲ್ಲಾ ಬರೆದಿರುವ ‘ಮಹಮಡನ್‌ ಕಾನೂನಿನ ತತ್ವಗಳು’ ಪುಸ್ತಕ ಮತ್ತು ಮುಸ್ಲಿಂ ವಿವಾಹಗಳ ಕುರಿತಂತೆ ಈ ಹಿಂದೆ ಹಲವು ಕೋರ್ಟ್‌ಗಳ ನೀಡಿರುವ ತೀರ್ಪಿನ ಅನುಸಾರ, ಮುಸ್ಲಿಂ ಬಾಲಕಿಯೊಬ್ಬಳು ಯಾವ ವಯಸ್ಸಿನಲ್ಲಿ ಋುತುಮತಿಯಾಗುತ್ತಾಳೋ ಅದೇ ಅವಳಿಗೆ ವಿವಾಹವಾಗಲು ಕಾನೂನು ಬದ್ಧ ವಯೋಮಾನ. ಆಕೆಯ ತನ್ನ ಬಯಸಿದ ಯಾವುದೇ ವ್ಯಕ್ತಿಯನ್ನು ವಿವಾಹವಾಗಬಹುದು’ ಎಂದು ಹೇಳಿದ್ದಾರೆ.

‘ಮಹಮಡನ್‌ ಕಾನೂನಿನ ತತ್ವಗಳು ಪುಸ್ತಕದಲ್ಲಿನ 195ನೇ ವಿಧಿಯ ಅನ್ವಯ, ಸೂಕ್ತ ಮನೋಸ್ಥಿತಿ ಹೊಂದಿರುವ ಯಾವುದೇ ಮುಸ್ಲಿಂ ಬಾಲಕಿ ಋುತುಮತಿಯಾಗುತ್ತಲೇ ವಿವಾಹ ಬಂಧನಕ್ಕೆ ಒಳಪಡಬಹುದು. ಒಂದು ವೇಳೆ ಮುಸ್ಲಿಂ ಬಾಲಕಿ ಮಾನಸಿಕವಾಗಿ ಅಸ್ವಸ್ಥರಾಗಿದ್ದರೆ ಮತ್ತು ಆಕೆ ಇನ್ನೂ ಋುತುಮತಿಯಾಗದೇ ಇದ್ದಲ್ಲಿ ಅವರ ಕುರಿತು ಅವರ ಪೋಷಕರು ನಿರ್ಧಾರ ಕೈಗೊಳ್ಳಬಹುದು’ ಎಂದು ನ್ಯಾಯಾಲಯ ಹೇಳಿದೆ.