ಇದು ಅವಹೇಳನಕಾರಿ ಹೇಳಿಕೆ. ವಿಶ್ವದ ಅತ್ಯಂತ ಪುರಾತನ ಧರ್ಮದ ವಿರುದ್ಧ ಇಂಥ ಟೀಕೆ ಮಾಡಿದ್ದ ಉದಯನಿಧಿ ಕ್ಷಮೆಯಾಚಿಸಬೇಕು. ಜನರ ಭಾವನೆಗಳಿಗೆ ಧಕ್ಕೆ ತರುವ ಹಕ್ಕು ಯಾರಿಗೂ ಇಲ್ಲ ಎಂದ ಉತ್ತರಪ್ರದೇಶದ ಶಿಯಾ ಸುನ್ನಿ ಉಲೇಮಾ ಫ್ರಂಟ್‌ನ ಪ್ರಧಾನ ಕಾರ್ಯದರ್ಶಿ ಮೌಲಾನಾ ಹಬೀಬ್‌ ಹೈದರ್‌ 

ಲಖನೌ(ಸೆ.08): ಸನಾತನ ಧರ್ಮದ ಕುರಿತ ಉದಯನಿಧಿ ಹೇಳಿಕೆಗೆ ಇದೀಗ ಮುಸ್ಲಿಂ ಧರ್ಮಗುರುಗಳೂ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ವಿಶ್ವದ ಅತ್ಯಂತ ಹಳೆಯ ಧರ್ಮದ ಕುರಿತ ಇಂಥ ಹೇಳಿಕೆಯನ್ನು ಒಪ್ಪಲಾಗದು. ಈ ವಿಷಯದಲ್ಲಿ ಡಿಎಂಕೆ ಮತ್ತು ಇಂಡಿಯಾ ಮೈತ್ರಿಕೂಟ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಉತ್ತರಪ್ರದೇಶದ ಶಿಯಾ ಸುನ್ನಿ ಉಲೇಮಾ ಫ್ರಂಟ್‌ನ ಪ್ರಧಾನ ಕಾರ್ಯದರ್ಶಿ ಮೌಲಾನಾ ಹಬೀಬ್‌ ಹೈದರ್‌ ‘ಇದು ಅವಹೇಳನಕಾರಿ ಹೇಳಿಕೆ. ವಿಶ್ವದ ಅತ್ಯಂತ ಪುರಾತನ ಧರ್ಮದ ವಿರುದ್ಧ ಇಂಥ ಟೀಕೆ ಮಾಡಿದ್ದ ಉದಯನಿಧಿ ಕ್ಷಮೆಯಾಚಿಸಬೇಕು. ಜನರ ಭಾವನೆಗಳಿಗೆ ಧಕ್ಕೆ ತರುವ ಹಕ್ಕು ಯಾರಿಗೂ ಇಲ್ಲ’ ಎಂದಿದ್ದಾರೆ.

ಸನಾತನ ಧರ್ಮವನ್ನು ಅಳಿಸಿ ಹಾಕುತ್ತೇನೆ ಎಂದವರೆಲ್ಲ ಅಳಿದು ಹೋಗಿದ್ದಾರೆ: ಯೋಗಿ ಆದಿತ್ಯನಾಥ್‌!

ಇನ್ನು ಅಖಿಲ ಭಾರತ ಮುಸ್ಲಿಂ ಜಮಾತ್‌ ಮೌಲಾನಾ ಅಧ್ಯಕ್ಷ ಶಹಬುದ್ದೀನ್‌ ರಿಜ್ವಿ ‘ಯಾವುದೇ ಧರ್ಮವನ್ನು ಟೀಕಿಸುವ ಹಕ್ಕು ಉದಯನಿಧಿಗೆ ಇಲ್ಲ. ಇಂತಹ ಹೇಳಿಕೆಗಳು ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುತ್ತವೆ. ಧರ್ಮಗಳಿರುವುದು ಜನರನ್ನು ಒಗ್ಗೂಡಿಸಲು ಹೊರತು ಜಾತಿಯ ಆಧಾರದ ಮೇಲೆ ವಿಭಜಿಸಲು ಅಲ್ಲ’ ಎಂದಿದ್ದಾರೆ.

ಮತ್ತೊಬ್ಬ ಧರ್ಮಗುರು ಅಬು ಜಾಫರ್‌ ನೊಮಾನಿ ಕೂಡ ‘ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಟೀಕೆ ಮಾಡಬಾರದು. ಉದಯನಿಧಿ ಸ್ಟಾಲಿನ್‌ ತಮ್ಮ ಹೇಳಿಕೆ ಕುರಿತು ಕ್ಷಮೆಯಾಚಿಸಬೇಕು’ ಎಂದಿದ್ದಾರೆ.