ಮುಂಬೈ(ಮೇ.22):  ಕೊರೋನಾ ವೈರಸ್ ಅಟ್ಟಹಾಸಕ್ಕೆ ಮುಂಬೈ ನಲುಗಿದೆ. ಇದಕ್ಕೆ ಮುಂಬೈ ಮಾಧ್ಯಮ ವಲಯ ಕೂಡ ಹೊರತಾಗಿಲ್ಲ. ಗ್ರೌಂಡ್ ರಿಪೋರ್ಟಿಂಗ್ ಸೇರಿದಂತೆ ಕೊರೋನಾ ವಕ್ಕರಿಸಿದ ಸಮಯದಿಂದ ನಿರಂತರವಾಗಿ ಕೆಲಸ ಮಾಡುತ್ತಿರುವ ಮಾಧ್ಯಮ ಕ್ಷೇತ್ರಕ್ಕೆ ಇದೀಗ ಕೊರೋನಾ ಪೆಡಂಭೂತ ಅಂಟಿಕೊಂಡಿದೆ. ಮುಂಬೈನ 53 ಪತ್ರಕರ್ತರಿಗೆ ಕೊರೋನಾ ವೈರಸ್ ಪಾಸಿಟೀವ್ ಪತ್ತೆಯಾಗಿತ್ತು. ಇದೀಗ ಮುಂಬೈನ Tv9 ಮರಾಠಿ ವಾಹಿನಿಯ  ವರದಿಗಾರನ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾನೆ.

46 ವರ್ಷದ ರೋಶನ್ ದಿಯಾಸ್, ಮುಂಬೈ Tv9 ಮರಾಠಿ ವಾಹಿನಿಯಲ್ಲಿ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ತಿಂಗಳು  171 ಪತ್ರಕರ್ತರಿಗೆ ನಡೆಸಿದ ಕೊರೋನಾ ವೈರಸ್ ಪರೀಕ್ಷೆಯಲ್ಲಿ ರೋಶನ್ ದಿಯಾಸ್‌ಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಐಸೋಲೇಶನ್ ವಾರ್ಡ್‌ನಲ್ಲಿದ್ದ ರೋಶನ್ ದಿಯಾಸ್ ಆರೋಗ್ಯ ಹದಗೆಟ್ಟಿತ್ತು. ಬಳಿಕ ತೀವ್ರ ನಿಘಾಘಟಕದಲ್ಲಿ ಚಿಕಿತ್ಸೆ ನೀಡಲಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. 

ರೋಶನ್ ದಿಯಾಸ್, ಮಡದಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮುಂಬೈ ವಾಹಿನಿಗೂ ಮೊದಲು ಸ್ಟಾರ್ ನ್ಯೂಸ್ ವಾಹಿನಿಯಲ್ಲಿ ವರದಿಗಾರನಾಗಿ ಕೆಲಸ ಮಾಡಿದ್ದರು. ರೋಶನ್ ದಿಯಾಸ್ ಸಾವಿಗೆ ಮುಂಬೈ ಪ್ರೆಸ್ ಕ್ಲಬ್, ಪತ್ರಕರ್ತರು ಸಂತಾಪ ಸೂಚಿಸಿದ್ದಾರೆ

.

ಮುಂಬೈನ ಬಹುತೇಕ ಮಾಧ್ಯಮ ಸಂಸ್ಥೆಗಳಲ್ಲಿ ಕೊರೋನಾ ವಕ್ಕರಿಸಿದೆ. ಝೀ ನ್ಯೂಸ್ ವಾಹಿನಿಯ 28 ಪತ್ರಕರ್ತರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 41, 642ಕ್ಕೇರಿಕೆಯಾಗಿದೆ. ಇನ್ನು 1,453 ಮಂದಿ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ.