Asianet Suvarna News Asianet Suvarna News

26/11 ಮುಂಬೈ ದಾಳಿ ನಡೆದು ಇಂದಿಗೆ 14 ವರ್ಷ, ಕರಾಳ ದಿನ ನೆನಪಿಸಿಕೊಂಡ ದೇಶ!

Mumbai Terror Attack: ದೇಶದ ಅಸ್ಮಿತೆಯ ಮೇಲೆ ನಡೆದ ಘನಘೋರ ದಾಳಿಗೆ ಇಂದಿಗೆ 14 ವರ್ಷ. ದೇಶದ ಪ್ರಮುಖ ನಗರ, ವಾಣಿಜ್ಯ ರಾಜಧಾನಿ ಮುಂಬೈ ನಗರದ ಮೇಲೆ 10 ಭಯೋತ್ಪಾದಕರು ದಾಳಿ ಮಾಡಿದ್ದರು. ಈ ಕರಾಳ ದಿನಕ್ಕೆ 14 ವರ್ಷವಾದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಜನರು ಆ ದಿನವನ್ನು ನೆನಪಿಸಿಕೊಂಡಿದ್ದಾರೆ.
 

Mumbai Terror Attack 14 years anniversary PM Narendra Modi and country remembers heroes san
Author
First Published Nov 26, 2022, 11:52 AM IST

ಮುಂಬೈ (ನ.26): ಭಾರತದ ಇತಿಹಾಸದಲ್ಲಿ ಅತ್ಯಂತ ಕರಾಳ ದಿನಗಳಲ್ಲಿ ಒಂದೆನಿಸಿದ 26/11ರ ಮುಂಬೈ ಉಗ್ರ ದಾಳಿ ನಡೆದು ಶನಿವಾರ 14 ವರ್ಷಗಳು ಸಂದಿವೆ. 2008 ನ.26 ರಂದು ಪಾಕಿಸ್ತಾನದ ಲಷ್ಕರ್‌-ಎ-ತೊಯ್ಬಾದ 10 ಉಗ್ರರು ಸಮುದ್ರ ಮಾರ್ಗವಾಗಿ ಮಹಾರಾಷ್ಟ್ರದ ರಾಜಧಾನಿ ಮುಂಬೈಗೆ ಬಂದು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 18 ಭದ್ರತಾ ಸಿಬ್ಬಂದಿ ಸೇರಿ 166 ಅಮಾಯಕ ಜನರು ಬಲಿಯಾಗಿದ್ದರು. ಅಲ್ಲದೇ ಸಾವಿರಾರು ಜನರು ಗಾಯಗೊಂಡಿದ್ದರು. ಮುಂಬೈಯ ಪ್ರಸಿದ್ಧ ಛತ್ರಪತಿ ಶಿವಾಜಿ ಟರ್ಮಿನಸ್‌, ಒಬೆರಾಯ್‌ ಟ್ರಿಡೆಂಟ್‌, ತಾಜ್‌ ಹೋಟೆಲ್‌,ಲಿಯೊಪೋಲ್ಡ್‌ ಕೆಫೆ, ಕಾಮಾ ಆಸ್ಪತ್ರೆ, ನಾರಿಮನ್‌ ಹೌಸ್‌ ಅನ್ನು ಗುರಿಯಾಗಿಸಿ ದಾಳಿ ನಡೆಸಿದ್ದರು. ದಾಳಿ ನಡೆಸಿದ ಉಗ್ರರಲ್ಲಿ 9 ಜನರನ್ನು ಭದ್ರತಾ ಪಡೆಗಳು ಹತ್ಯೆಗೈದಿದ್ದರು. ಅಜ್ಮಲ್‌ ಕಸಬ್‌ ಒಬ್ಬ ಉಗ್ರನನ್ನು ಸೆರೆ ಹಿಡಿಯಲಾಗಿತ್ತು. 4 ವರ್ಷಗಳ ಬಳಿಕ 2012, ನ.21ರಂದು ಕಸಬ್‌ನನ್ನು ಗಲ್ಲಿಗೇರಿಸಲಾಗಿತ್ತು. ಆದರೆ ಪಾಕಿಸ್ತಾನದಲ್ಲಿ ದಾವೂದ್‌ ಇಬ್ರಾಹಿಂ, ಮಸೂದ್‌ ಅಜರ್‌, ಹಫೀಜ್‌ ಸಯೀದ್‌, ಜಾಕಿ-ಉರ್‌-ರಹಮಾನ್‌ ಲಖ್ವಿ ಮೊದಲಾದ ಕುಖ್ಯಾತ ಉಗ್ರರು ಅಲ್ಲಿನ ಸರ್ಕಾ​ರಿ ಆಶ್ರಯದಲ್ಲಿ ಸುರಕ್ಷಿತವಾಗಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕಾರ್ಯ ನಡೆದಿಲ್ಲ ಎಂಬುದು ಭಾರ​ತೀ​ಯರ ಅಳ​ಲಾಗಿ​ದೆ.


ಭಾರತದ ಇತಿಹಾಸದ ಅತ್ಯಂತ ಕೆಟ್ಟ ಭಯೋತ್ಪಾದಕ ದಾಳಿ ಎನಿಸಿಕೊಂಡಿದ್ದ ಮುಂಬೈ ದಾಳಿ ಒಟ್ಟು ನಾಲ್ಕು ದಿನಗಳ ಕಾಲ ನಡೆದಿತ್ತು. ನವೆಂಬರ್‌ 26 ರಿಂದ 29ರವರೆಗೆ ನಡೆದಿದ್ದ ದಾಳಿಯಲ್ಲಿ ಸಾಕಷ್ಟು ಸಾವು ನೋವು ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲಿ ಭಾರತದಲ್ಲಿ ಪ್ರಜೆಗಳ ರಕ್ಷಣೆಯ ಬಗ್ಗೆಯೇ ಅನುಮಾನ ಹುಟ್ಟಿಕೊಂಡಿತ್ತು. ಈ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಈ ಕರಾಳ ದಿನವನ್ನು ನೆನಪಿಸಿಕೊಂಡಿದ್ದಾರೆ.

ನಿಮ್ಮ ಪ್ರೀತಿಪಾತ್ರರು ಮತ್ತು ಕುಟುಂಬಗಳ ನೋವನ್ನು ನಾವೂ ಕೂಡ ಹಂಚಿಕೊಳ್ಳುತ್ತೇವೆ. ಕರ್ತವ್ಯದ ಸಾಲಿನಲ್ಲಿ ವೀರಾವೇಶದ ಹೋರಾಟ ನಡೆಸಿಸ ಅತ್ಯುನ್ನತ ತ್ಯಾಗ ಮಾಡಿದ ಭದ್ರತಾ ಸಿಬ್ಬಂದಿಗೆ ರಾಷ್ಟ್ರವು ಗೌರವ ಸಲ್ಲಿಸುತ್ತದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವಿಟರ್‌ನಲ್ಲಿ ಬರೆದಿದ್ದಾರೆ. "ಇಂದು ಮುಂಬೈ ಮೇಲೆ ನಡೆದ ದಾಳಿಯ ಕರಾಳ ದಿನ. 14 ವರ್ಷಗಳ ಹಿಂದೆ ಭಾರತದ ಸಂವಿಧಾನ ಹಾಗೂ ಜನರ ಹಕ್ಕುಗಳನ್ನು ಆಚರಣೆ ಮಾಡುತ್ತಿದ್ದ ದಿನದಂದು, ಶತ್ರುಗಳು ಮಾನವೀಯತೆಯ ಮೇಲೆ ಘೋರವಾದ  ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಮೃತರಾದವರಿಗೆ ನಾನು ಸಂತಾಪ ಸೂಚಿಸುತ್ತೇನೆ' ಎಂದು ನವದೆಹಲಿಯಲ್ಲಿ ಸಂವಿಧಾನ ದಿನದಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌ ಜೈಶಂಕರ್‌ ತಮ್ಮ ಟ್ವಿಟರ್‌ ಪುಟದಲ್ಲಿ ಎರಡು ನಿಮಿಷಗಳ ವಿಡಿಯೋ ಹಂಚಿಕೊಳ್ಳುವ ಮೂಲಕ ಅ ದಿನವನ್ನು ನೆನಪಿಸಿಕೊಂಡಿದ್ದಾರೆ. ಕಳೆದ ತಿಂಗಳು ತಾಜ್‌ ಹೋಟೆಲ್‌ನ ಲಾಬಿಯಲ್ಲಿ ನಡೆದ ವಿಶ್ವ ಸಂಸ್ಥೆಯ ಭದ್ರತಾ ಸಮಿತಿಯ ಕಾರ್ಯಕ್ರಮದಲ್ಲಿ ತಾವು ಆಡಿದ ಮಾತುಗಳನ್ನು ಇದರಲ್ಲಿ ಸೇರಿಸಿದ್ದಾರೆ. 2008ರ ಮುಂಬೈ ದಾಳಿಯ ವೇಳೆ ಭಯೋತ್ಪಾದಕರು ಇದೇ ಹೋಟೆಲ್‌ಅನ್ನು ಪ್ಮರುಖವಾಗಿ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು.

ಮುಂಬೈ ದಾಳಿ ದಿನಾಂಕವೇ ರಿಯಾಜ್ ಬೈಕ್ ನಂಬರ್, ಕನ್ಹಯ್ಯನ ಕತ್ತು ಕುಯ್ದ ಕತ್ತಿಯನ್ನು ತಾನೇ ತಯಾರಿಸಿದ್ದ!

“ಭಯೋತ್ಪಾದನೆ ಮಾನವೀಯತೆಗೆ ಬೆದರಿಕೆ. ಇಂದು, 26/11 ರಂದು, ಆ ದಾಳಿಯಲ್ಲಿ ಸಾವು ಕಂಡವನ್ನು ಭಾರತ ಸ್ಮರಿಸಿಕೊಳ್ಳುತ್ತದೆ. ಈ ದಾಳಿಯ ಯೋಜನೆ ಮತ್ತು ಮೇಲ್ವಿಚಾರಣೆ ನಡೆಸಿದವರನ್ನು ನ್ಯಾಯಾಂಗಕ್ಕೆ ತರಬೇಕು. ಜಗತ್ತಿನಾದ್ಯಂತ ಭಯೋತ್ಪಾದನೆಗೆ ಬಲಿಯಾದ ಪ್ರತಿಯೊಬ್ಬರಿಗೂ ನಾವು ಋಣಿಯಾಗಿದ್ದೇವೆ' ಎಂದು ಜೈಶಂಕರ್ ಅವರು ವೀಡಿಯೊದೊಂದಿಗೆ ಟ್ವೀಟ್ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ಟ್ವೀಟ್‌ ಮಾಡಿದ್ದು, 26/11 ಮುಂಬೈ ದಾಳಿಯಲ್ಲಿ ಮೃತರಾದವರಿಗೆ ಸಂತಾಪ ಸೂಚಿಸುತ್ತೇನೆ. ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಅತ್ಯುನ್ನತ ತ್ಯಾಗ ಮಾಡಿದ ಧೀರ ಭದ್ರತಾ ಸಿಬ್ಬಂದಿಯನ್ನು ಈ ವೇಳೆ ನೆನಪಿಸಿಕೊಳ್ಳುತ್ತೇನೆ. ಭಯೋತ್ಪಾದನೆಯ ವಿರುದ್ಧ ನಾವೆಲ್ಲರೂ ಒಟ್ಟಾಗ ಹೋರಾಡಬೇಕು ಅನ್ನೋದನ್ನು ಈ ದಿನ ನಮಗೆ ಸಂದೇಶ ನೀಡುತ್ತದೆ' ಎಂದಿದ್ದಾರೆ.

ಸತ್ತ ಎಂದು ಘೋಷಿಸಿದ್ದ ಮುಂಬೈ ದಾಳಿ ಉಗ್ರನಿಗೆ 15 ವರ್ಷ ಜೈಲು ಶಿಕ್ಷೆ ನೀಡಿದ ಪಾಕ್!

ಇನ್ನು ದೇಶದ ಜನ ಸೋಶಿಯಲ್ ಮೀಡಿಯಾದಲ್ಲಿ 'ನೆವರ್‌ ಫಾರ್ಗಟನ್‌, ವಿಲ್‌ ನೆವರ್‌ ಫಾರ್ಗೆಟ್‌' ಎಂದು ಮುಂಬೈ ದಾಳಿಯನ್ನು, ದಾಳಿಯಲ್ಲಿ ಮೃತರಾದ ಭದ್ರತಾ ಸಿಬ್ಬಂದಿಯನ್ನು ನೆನಪಿಸಿಕೊಂಡಿದ್ದಾರೆ. ಅದರೊಂದಿಗೆ ಈ ದಾಳಿಯಲ್ಲಿ ಮಡಿದ ಎನ್‌ಎಸ್‌ಜಿ ಕಮಾಂಡೋ ಕರ್ನಾಟಕದ ಸಂದೀಪ್‌ ಉನ್ನಿಕೃಷ್ಣನ್‌ ಅವರನ್ನು ಕನ್ನಡಿಗರು ನೆನಪಿಸಿಕೊಂಡಿದ್ದಾರೆ. 

Follow Us:
Download App:
  • android
  • ios