ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನಡೆದ ಸಿಜೆಪಿ ಪಕ್ಷದ ಪ್ರತಿಭಟನೆಯಲ್ಲಿ ಅಪ್ರಾಪ್ತ ಮಕ್ಕಳನ್ನು ಗುರಾಣಿಯಾಗಿ ಬಳಸಿದ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆಗೆ ಆದೇಶಿಸಿದೆ.ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಅಕ್ಟೋಬರ್ 2 ರ ಗಾಂಧಿ ಜಯಂತಿಯಂದೇ ಮುಂಬೈನ ಐತಿಹಾಸಿಕ ಶಿವಾಜಿ ಪಾರ್ಕ್‌ನಲ್ಲಿ ನಡೆದ ರಾಜಕೀಯ ಪ್ರತಿಭಟನೆಯೊಂದು ಈಗ ತೀವ್ರ ಕಾನೂನು ಹಾಗೂ ಮಾನವ ಹಕ್ಕುಗಳ ಸಂಘರ್ಷಕ್ಕೆ ಕಾರಣವಾಗಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಕ್ಷ (CJP) ಪ್ರತಿಭಟನೆ ಹಮ್ಮಿಕೊಂಡಿತ್ತು. ಆದರೆ ಈ ಧರಣಿಯಲ್ಲಿ ಅಪ್ರಾಪ್ತ ವಯಸ್ಕ ಮಕ್ಕಳನ್ನು ಕಾನೂನುಬಾಹಿರವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.
ಆರೋಪದ ಹಿನ್ನೆಲೆ ಮತ್ತು ದೂರು!
ಸೇವಾ ನ್ಯಾಯ ಉತ್ಥಾನ ಫೌಂಡೇಶನ್‌ನ ಹಸ್ತಕ್ಷೇಪ ವಿಭಾಗದ ಮುಖ್ಯಸ್ಥ ಸತೀಶ್ ವೈದ್ ಅವರು ಈ ಕುರಿತು NHRCಗೆ ಅಧಿಕೃತ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊ ಹಾಗೂ ಫೋಟೋಗಳಲ್ಲಿ, ಚಿಕ್ಕ ಮಗುವೊಂದನ್ನು ಜನಸಂದಣಿಯ ಮಧ್ಯೆ ಮೇಲಕ್ಕೆತ್ತಿ ಆಕ್ಷೇಪಾರ್ಹ ಹಾಗೂ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿಸುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಪ್ರತಿಭಟನೆಗಿಂತ ಮುಂಚಿತವಾಗಿಯೇ ವಿವಿಧ ವಾಟ್ಸಾಪ್ ಹಾಗೂ ಡಿಜಿಟಲ್ ಗುಂಪುಗಳಲ್ಲಿ ಅಪ್ರಾಪ್ತರನ್ನು ಕರೆತರುವ ಬಗ್ಗೆ ಚರ್ಚೆಗಳು ನಡೆದಿದ್ದವು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರು ತಮ್ಮ ವಿರುದ್ಧ ಯಾವುದೇ ಕಠಿಣ ಕಾನೂನು ಕ್ರಮ ಕೈಗೊಳ್ಳದಂತೆ ತಡೆಯಲು, ಮಕ್ಕಳನ್ನು 'ಗುರಾಣಿ' (Human Shield) ಯಾಗಿ ಸಂಘಟಕರು ಬಳಸಿಕೊಂಡಿರಬಹುದು ಎಂಬ ಕಳವಳ ವ್ಯಕ್ತವಾಗಿದೆ.
NHRC ಅಖಾಡಕ್ಕೆ: ಹಿರಿಯ ಅಧಿಕಾರಿಯಿಂದ ತನಿಖೆಗೆ ಚಾಲನೆ!
ಈ ಪ್ರಕರಣದ ತೀವ್ರತೆಯನ್ನು ಅರಿತ NHRC, 1993 ರ ಮಾನವ ಹಕ್ಕುಗಳ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 12 ರ ಅಡಿಯಲ್ಲಿ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿದೆ. ಎನ್‌ಎಚ್‌ಆರ್‌ಸಿ ಸದಸ್ಯ ಪ್ರಿಯಾಂಕ್ ಕನೂಂಗೊ ನೇತೃತ್ವದ ಪೀಠವು ಪ್ರಕರಣದ ವಿಚಾರಣೆ ನಡೆಸಿದ್ದು, ಘಟನೆಯಲ್ಲಿ ಭಾಗಿಯಾದ ಸಂಸ್ಥೆ ಹಾಗೂ ಜವಾಬ್ದಾರರಿಗೆ ಬಿಸಿ ಮುಟ್ಟಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ ಆಯುಕ್ತರು, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY), ಭಾರತದ 'X' Corp. ನ ಕುಂದುಕೊರತೆ ಅಧಿಕಾರಿ ಹಾಗೂ ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಎನ್‌ಎಚ್‌ಆರ್‌ಸಿ ತುರ್ತು ನೋಟಿಸ್ ಜಾರಿ ಮಾಡಿದೆ.
ಪೊಲೀಸರಿಗೆ ಮತ್ತು ಸೋಶಿಯಲ್ ಮೀಡಿಯಾಗೆ ಬಿಗಿ ನಿರ್ದೇಶನ!
ಸಂದಿಗ್ಧ ಪರಿಸ್ಥಿತಿಯನ್ನು ಪರಿಶೀಲಿಸಲು ಮುಂಬೈ ಪೊಲೀಸರಿಗೆ ವಿಧಿವಿಜ್ಞಾನ ಮತ್ತು ಡಿಜಿಟಲ್ ತನಿಖೆಗೆ ಸೂಚನೆ ನೀಡಲಾಗಿದೆ.
ಎಫ್‌ಐಆರ್ ದಾಖಲು; ಪ್ರದರ್ಶನದಲ್ಲಿದ್ದ ಛಾಯಾಚಿತ್ರಗಳು, ವೀಡಿಯೊಗಳು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸಿ, ಯಾವುದೇ ಗುರುತಿಸಬಹುದಾದ ಅಪರಾಧ ಕಂಡುಬಂದಲ್ಲಿ ತಕ್ಷಣ ಎಫ್‌ಐಆರ್ ದಾಖಲಿಸಲು ಸೂಚಿಸಲಾಗಿದೆ.
ಗುಂಪು ಚಾಟ್‌ಗಳ ಫೋರೆನ್ಸಿಕ್ ತನಿಖೆ; ಮಕ್ಕಳ ಭಾಗವಹಿಸುವಿಕೆಯು ಪೂರ್ವಯೋಜಿತವೇ ಎಂಬುದನ್ನು ತಿಳಿಯಲು ಪ್ರತಿಭಟನಾಕಾರರ ವಾಟ್ಸಾಪ್ ಹಾಗೂ ಆನ್‌ಲೈನ್ ಗ್ರೂಪ್‌ಗಳ ಚಾಟ್‌ಗಳನ್ನು ಸಂರಕ್ಷಿಸಿ ಫೋರೆನ್ಸಿಕ್ ಪರೀಕ್ಷೆಗೆ ಒಳಪಡಿಸಲು ಆದೇಶಿಸಲಾಗಿದೆ.
ಬಾಲ ನ್ಯಾಯ ಕಾಯ್ದೆಯಡಿ ಕ್ರಮ; ಬಾಲ ನ್ಯಾಯ ಕಾಯ್ದೆ (JJ Act) 2015 ರ ಸೆಕ್ಷನ್ 75 ಮತ್ತು 83(2) ಅಡಿಯಲ್ಲಿ ಮಕ್ಕಳ ದುರ್ಬಳಕೆಯ ಅಪರಾಧಗಳ ಪ್ರಸ್ತುತತೆಯನ್ನು ಪರಿಶೀಲಿಸಲು ಸೂಚಿಸಲಾಗಿದೆ.
ಸಾಮಾಜಿಕ ಜಾಲತಾಣ ನಿಯಂತ್ರಣ; 'X' Corp. ಹಾಗೂ MeitY ಸಂಸ್ಥೆಗಳು ಮಕ್ಕಳ ಗುರುತು ಬಹಿರಂಗಪಡಿಸುವ ವೀಡಿಯೊಗಳನ್ನು ಸಂರಕ್ಷಿಸಬೇಕು ಮತ್ತು ಮಕ್ಕಳ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ನಿರ್ದೇಶಿಸಲಾಗಿದೆ.
ಮಕ್ಕಳ ರಕ್ಷಣೆ ಮತ್ತು ಗೌಪ್ಯತೆ!
ಪ್ರಕರಣದ ತನಿಖೆಯ ನೆಪದಲ್ಲಿ ಮಕ್ಕಳ ಘನತೆ ಹಾಗೂ ಗೌಪ್ಯತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಮಹಾರಾಷ್ಟ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಅಗತ್ಯ ಬಿದ್ದಲ್ಲಿ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ (CWC) ಮುಂದೆ ಹಾಜರುಪಡಿಸಿ, ಅವರಿಗೆ ಅಗತ್ಯವಾದ ಮಾನಸಿಕ-ಸಾಮಾಜಿಕ ಬೆಂಬಲ, ಆಪ್ತಸಮಾಲೋಚನೆ (Counseling) ಹಾಗೂ ಪುನರ್ವಸತಿ ಒದಗಿಸಲು ನಿರ್ದೇಶಿಸಲಾಗಿದೆ. ಎನ್‌ಎಚ್‌ಆರ್‌ಸಿ ಈ ಸಮಗ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಂದ ಒಂದು ವಾರದೊಳಗೆ 'ಕ್ರಮ ಕೈಗೊಂಡ ವರದಿ' (Action Taken Report - ATR) ಯನ್ನು ಸಲ್ಲಿಸುವಂತೆ ಅಂತಿಮ ಗಡುವು ನೀಡಿದೆ. ತನಿಖೆಯ ವರದಿ ಬಂದ ನಂತರ ಮಕ್ಕಳನ್ನು ರಾಜಕೀಯಕ್ಕೆ ಬಳಸಿಕೊಂಡ ಸಂಘಟಕರ ವಿರುದ್ಧ ಕಠಿಣ ಕ್ರಮ ಜರುಗುವ ಸಾಧ್ಯತೆಯಿದೆ.


