ಮೀನುಗಾರ ಮಹಿಳೆ ಮೇಲೆ BMW ಕಾರು ಹತ್ತಿಸಿದ ಶಿವಸೇನೆ ನಾಯಕನ ಪುತ್ರ: ಮಹಿಳೆ ಸಾವು, ಪತಿ ಗಂಭೀರ
ರಾಜಕಾರಣಿಯೋರ್ವರ ಪುತ್ರ ತನ್ನ ಬಿಎಂಡಬ್ಲ್ಯೂ ಕಾರಿನಲ್ಲಿ ವೇಗವಾಗಿ ಬಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಸ್ಕೂಟರ್‌ನಲ್ಲಿದ್ದ ಮಹಿಳೆ ಸಾವನ್ನಪ್ಪಿದ್ದರೆ ಅವರ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮುಂಬೈ: ಕೆಲ ದಿನಗಳ ಹಿಂದಷ್ಟೇ ಉದ್ಯಮಿಯೋರ್ವನ ಅಪ್ರಾಪ್ತ ಪುತ್ರ ಕುಡಿದ ಮತ್ತಿನಲ್ಲಿ ಕಾರು ಓಡಿಸಿ ಇಬ್ಬರು ಟೆಕ್ಕಿಗಳನ್ನು ಬಲಿ ಪಡೆದ ಘಟನೆ ಮಾಸುವ ಮೊದಲೇ ಮುಂಬೈನಲ್ಲಿ ಮತ್ತೊಂದು ಕಾರು ಅಪಘಾತ ನಡೆದಿದೆ. ಇಂದು ನಡೆದ ಈ ಅಪಘಾತದಲ್ಲಿ ರಾಜಕಾರಣಿಯೋರ್ವರ ಪುತ್ರ ತನ್ನ ಬಿಎಂಡಬ್ಲ್ಯೂ ಕಾರಿನಲ್ಲಿ ವೇಗವಾಗಿ ಬಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಸ್ಕೂಟರ್‌ನಲ್ಲಿದ್ದ ಮಹಿಳೆ ಸಾವನ್ನಪ್ಪಿದ್ದರೆ ಅವರ ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮುಂಬೈನ ವರ್ಲಿ ಪ್ರದೇಶದ ಅಟ್ರಿಯ ಮಾಲ್ ಬಳಿ ಇಂದು ಮುಂಜಾನೆ ಈ ಭೀಕರ ಅಪಘಾತ ನಡೆದಿದೆ. ಮೃತ ಮಹಿಳೆಯನ್ನು ಕಾವೇರಿ ನಕ್ವಾ ಎಂದು ಗುರುತಿಸಲಾಗಿದೆ. ಇವರು ತಮ್ಮ ಪತಿ ಪ್ರದೀಪ್ ನಕ್ವಾ ಜೊತೆ ವರ್ಲಿಯ ಕೋಳಿವಾಡ ಪ್ರದೇಶದಲ್ಲಿ ವಾಸ ಮಾಡುತ್ತಿದ್ದು, ಮೀನುಗಾರರಾದ ಇವರು ಫ್ರೆಶ್ ಆದ ಮೀನು ತರುವುದಕ್ಕಾಗಿ ಸಸ್ಸೂನ್ ಧಕ್ಕೆಗೆ (Sassoon Dock) ಹೋಗಿದ್ದಾರೆ. ಮರಳಿ ಬರುತ್ತಿರುವ ವೇಳೆ ಇವರ ಸ್ಕೂಟರ್‌ಗೆ ಹಿಂಬದಿಯಿಂದ ವೇಗವಾಗಿ ಬಂದ BMW ಕಾರು ಡಿಕ್ಕಿ ಹೊಡೆದಿದೆ. ಪಘಾತಕ್ಕೀಡು ಮಾಡಿದ ಕಾರನ್ನು ಶಿವಸೇನೆ ನಾಯಕ ರಾಜೇಶ್ ಶಾ ಅವರ ಪುತ್ರ ಮಿಹಿರ್ ಶಾ ಚಾಲನೆ ಮಾಡುತ್ತಿದ್ದ ಎಂದು ವರದಿ ಆಗಿದೆ. ಘಟನೆಯ ಬಳಿಕ ಕಾರನ್ನು ವರ್ಲಿ ಪೊಲೀಸರು ಸೀಜ್ ಮಾಡಿದ್ದು, ಕಾರು ಚಾಲನೆ ಮಾಡುತ್ತಿದ್ದ ಯುವಕನನ್ನು ಬಂಧಿಸಿದ್ದಾರೆ. ಈತನ ರಕ್ತದ ಸ್ಯಾಂಪಲ್‌ಗಾಗಿ ಪೊಲೀಸರು ಕಾಯುತ್ತಿದ್ದಾರೆ ಎಂದು ವರದಿ ಆಗಿದೆ.
ಆದರೆ ಕೆಲ ವರದಿಗಳ ಪ್ರಕಾರ ಅಪಘಾತಕ್ಕೀಡು ಮಾಡಿದ ಕಾರನ್ನು ಏಕನಾಥ್ ಶಿಂಧೆ ಬಣದ ಶಿವಸೇನಾ ನಾಯಕನ 24 ವರ್ಷದ ಪುತ್ರ ಚಲಾಯಿಸುತ್ತಿದ್ದ ಘಟನೆ ನಡೆಯುವ ವೇಳೆ ಆತ ಪಾನಮತ್ತನಾಗಿದ್ದ ಘಟನೆಯ ಬಳಿಕ ಆತ ಎಸ್ಕೇಪ್ ಆಗಿದ್ದಾನೆ. ಆರೋಪಿ ಮಿಹ್ರಿ ಶಾನ ತಂದೆ ಪಾಲ್ಗರ್ ಜಿಲ್ಲೆಯ ಶಿವಸೇನಾ ಘಟಕದ ಉಪ ನಾಯಕನಾಗಿದ್ದಾರೆ. ಈಗ ಪೊಲೀಸರು ರಾಜೇಶ್ ಶಾ ಹಾಗೂ ಅವರ ಕಾರು ಚಾಲಕ ರಾಜೇಂದ್ರ ಸಿಂಗ್ ಅವರನ್ನು ಬಂಧಿಸಿದ್ದಾರೆ ಎಂದು ವರದಿ ಆಗಿದೆ. ಹೊಸ ಅಪರಾಧ ಕಾಯ್ದೆ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿಸಿದ ಸೆಕ್ಷನ್‌ಗಳ ಅಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.
ಪೊಲೀಸರ ವರದಿ ಪ್ರಕಾರ ಮಿಹ್ರಿ ಶಾ ನಿನ್ನೆ ತಡರಾತ್ರಿ ಜೂಹುವಿನ ಬಾರೊಂದರಲ್ಲಿ ಕಂಠಪೂರ್ತಿ ಕುಡಿದಿದ್ದು, ಚಾಲಕನಿಗೆ ತನ್ನನ್ನು ಮನೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದ, ಇಂದು ಮುಂಜಾನೆ ಮನೆಗೆ ಬರುತ್ತಿದ್ದ ವೇಳೆ ತನ್ನನ್ನು ಲಾಂಗ್ ಡ್ರೈವ್ ಕರೆದುಕೊಂಡು ಹೋಗುವಂತೆ ಚಾಲಕನಿಗೆ ಹೇಳಿದ್ದಾನೆ. ಇದಾದ ನಂತರ ಕಾರು ವರ್ಲಿಯತ್ತ ಬರುತ್ತಿದ್ದಾಗ ಮಿಹ್ರಿ ಶಾ, ಕಾರು ಚಾಲಕನ ಬಳಿ ತಾನು ಕಾರು ಚಾಲನೆ ಮಾಡುತ್ತೇನೆ ಎಂದು ಹೇಳಿದ್ದಾನೆ. ಹೀಗೆ ಈತ ಕಾರನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಕೆಲವೇ ಕ್ಷಣಗಳಲ್ಲಿ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ.
ಇವರು ಸ್ಕೂಟರ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟರ್‌ನಲ್ಲಿದ್ದ ಇಬ್ಬರು ಮೇಲೆ ಹಾರಿ ಕಾರಿನ ಬೋನೆಟ್ ಮೇಲೆ ಬಿದ್ದಿದ್ದಾರೆ. ಇದಾದ ನಂತರ ಇವರು ಕಾರಿನ ಸಮೇತ ಪರಾರಿಯಾಗಿದ್ದರೆ, ಇತ್ತ ಮಹಿಳೆ ಹಾಗೂ ಆಕೆಯ ಪತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ವೈದ್ಯರು ಮಹಿಳೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಮಹಿಳೆಯ ಪತಿ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಬಳಿಕ ತಂದೆಗೆ ಕರೆ ಮಾಡಿದ ಮಿಹ್ರಿ ಕಾರು ಅಪಘಾತದ ಬಗ್ಗೆ ಹೇಳಿದ್ದು, ಅದಾದ ಬಳಿಕ ಆತನ ಫೋನ್ ಸ್ವಿಚ್ ಆಫ್ ಆಗಿದೆ. ಈತನ ಪತ್ತೆಗಾಗಿ ಈಗ ಪೊಲೀಸರು ನಾಲ್ವರ ತಂದ ರಚನೆ ಮಾಡಿದ್ದಾರೆ.