ಮುಂಬೈ(ಮೇ.10): ದೇಶದ ಕೊರೋನಾ ಪ್ರಕರಣಗಳಲ್ಲಿ ಗಣನೀಯ ಕೊಡುಗೆ ನೀಡಿದ್ದ ಮುಂಬೈನಲ್ಲಿ ಇದೀಗ ಕೊರೋನಾ ನಿಯಂತ್ರಣಕ್ಕೆ ಬಂದಿದೆ. ಕಳೆದ ಮಾರ್ಚ್‌ ತಿಂಗಳಿನಿಂದ ಗರಿಷ್ಠ ಪ್ರಕರಣ ದಾಖಲಾಗುತ್ತಿದ್ದ ಮುಂಬೈನಲ್ಲಿಂದು 1,794 ಪ್ರಕರಣ ದಾಖಲಾಗಿದೆ. ಈ ಮೂಲಕ ಕಳೆದೆರಡು ತಿಂಗಳ ಬಳಿಕ ದಾಖಲಾದ ಅತೀ ಕಡಿಮೆ ಕೊರೋನಾ ಕೇಸ್ ಆಗಿದೆ.

ರಾಜ್ಯ ರಾಜಧಾನಿಯಲ್ಲಿ ಕೊರೋನಾ ನಿಯಂತ್ರಿಸಲು ಮುಂಬೈ ಮಾದರಿ!.

ಇದೇ ಮೊದಲ ಬಾರಿಗೆ ಮುಂಬೈನಲ್ಲಿ ಪ್ರತಿ ದಿನದ ಕೊರೋನಾ ಕೇಸ್ 2 ಸಾವಿರಕ್ಕಿಂತ ಕಡಿಮೆಯಾಗಿದೆ. ಇನ್ನು ಸಾವಿನ ಸಂಖ್ಯೆ 74ಕಕ್ಕೆ ಇಳಿದಿದೆ. ಇದೀಗ ದೇಶದಲ್ಲಿ ಮುಂಬೈ ಮಾದರಿಯನ್ನು ಅನುಸರಿಸಲಾಗುತ್ತಿದೆ. ಮುಂಬೈ ಕೊರೋನಾ ನಿಯಂತ್ರಣ ಮಾಡಿದ ರೀತಿಯಲ್ಲೇ ದೇಶದ ಪ್ರಮುಖ ನಗರಗಳು ಕೊರೋನಾ ನಿಯಂತ್ರಣಕ್ಕೆ ಮುಂದಾಗಿದೆ.

ಮುಂಬೈ ಮಹಾನಗರ ಪಾಲಿಕೆ ಕಮಿಷನರ್ ಇಕ್ಬಾಲ್ ಸಿಂಗ್ ಮುಂಬೈನಲ್ಲಿ ಕೊರೋನಾ ನಿಯಂತ್ರಣ ಹಿಂದಿನ ರೂವಾರಿಯಾಗಿದ್ದಾರೆ. ಕಠಿಣ ಕ್ರಮ ಹಾಗೂ ಸ್ಪಷ್ಟ ರೂಪುರೇಶೆಯಿಂದ ಮುಂಬೈನಲ್ಲಿ ಕೊರೋನಾ ಸಂಖ್ಯೆ ಇಳಿಕೆಯಾಗಿದೆ. ಆದರೆ ಮುಂಬೈ ಹೊರತು ಪಡಿಸಿದರೆ ಇನ್ನುಳಿದ ಎಲ್ಲಾ ನಗರ ಹಾಗೂ ರಾಜ್ಯಗಳಲ್ಲಿ ಕೊರೋನಾ ಸಂಖ್ಯೆ ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಿದೆ.

ಕಳೆದ 24 ಗಂಟೆಯಲ್ಲಿ ಕರ್ನಾಟಕದಲ್ಲಿ 39,305 ಕೊರೋನಾ ಪ್ರಕರಣ ದಾಖಲಾಗಿದೆ. ಈ ಮೂಲಕ ಸತತ ಏರಿಕೆ ಕಾಣುತ್ತಿದ್ದ ಕೊರೋನಾ ಸಂಖ್ಯೆ 39 ಸಾವಿರದಿಂದ ಕೆಳಕ್ಕೆ ಇಳಿದಿದೆ. ಜನತಾ ಕರ್ಫ್ಯೂ ಸ್ವಲ್ಪ ಮಟ್ಟಿಗೆ ಫಲ ನೀಡಿದೆ. ಇದೀಗ ಲಾಕ್‌ಡೌನ್ ಜಾರಿಯಾಗಿರುವ ಕಾರಣ ನಿಯಂತ್ರಣಕ್ಕೆ ಬರವು ಸಾಧ್ಯತೆ ಹೆಚ್ಚು.