ಮುಂಬೈ(ಅ.12): ದೇಶದ ಆರ್ಥಿಕ ರಾಜಧಾನಿ ಮುಂಬೈನ ಅನೇಕ ಪ್ರದೇಶಗಳಲ್ಲಿ ಸೋಮವಾರ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮುಂಬೈನ ದಕ್ಷಿಣ, ಕೇಂದ್ರ ಹಾಗೂ ಉತ್ತರ ಕ್ಷೇತ್ರಗಳಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾದ ಪರಿಣಾಮ ಜನರು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ.  

ಇಲ್ಲಿನ ಸುಮಾರು ಶೇ.  40ರಷ್ಟು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. TATA ಕಂಪನಿ ಪೂರೈಸುತ್ತಿದ್ದ ವಿದ್ಯುತ್ ಶಕ್ತಿ ನಿಂತಿರುವುದರಿಂದ ಮುಂಬೈನಲ್ಲಿ ಪವರ್ ಸಪ್ಲೈ ಸಮಸ್ಯೆ ಎದುರಾಗಿದೆ ಎಂದು ಬೃಹತ್ ಮುಂಬೈ ವಿದ್ಯುತ್ ಪೂರೈಕೆ ಕಂಪನಿ ಮಾಹಿತಿ ನೀಡಿದೆ.

ಸೋಮವಾರ ಬೆಳಗ್ಗಿನಿಂದಲೇ ಮುಂಬೈನ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಕಾಣಿಸಿಕೊಂಡಿದೆ. ಮಹಾಲಕ್ಷ್ಮಿ, ಪರೇಲ್, ಸಿವ್ಡೀ ಹಾಗೂ ದಾದರ್ ಇಲಾಖೆಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. 

ಇನ್ನು ಹಳಿಗಳಲ್ಲಿ ಓಡಾಡುತ್ತಿದ್ದ ಲೋಕಲ್ ಟ್ರೈನ್‌ಗಳೂ ವಿದ್ಯುತ್ ಕಡಿತಗೊಂಡ ಪರಿಣಾಮ ಕಾರ್ಯ ನಿರ್ವಹಿಸುತ್ತಿಲ್ಲ. ಇದು ಮುಂಬೈನಂತಹ ಮಹಾನಗರಕ್ಕೆ ಬಹುದೊಡ್ಡ ಸಮಸ್ಯೆಯಾಗಿದೆ. ಜನರು ಓಡಾಡಲಾಗದೇ ಪರದಾಡುತ್ತಿದ್ದಾರೆ.