ಓಲಾ ಕ್ಯಾಬ್‌ ವಿರುದ್ಧ ಕೇಸ್ ದಾಖಲಿಸಿದ್ದ ಮುಂಬೈ ವಕೀಲ ಬುಕ್ಕಿಂಗ್‌ ವೇಳೆ ತೋರಿಸಿದ್ದು 372 ರೂಪಾಯಿ ಪ್ರಯಾಣ ಮುಗಿದಾಗ ವಸೂಲಿ ಮಾಡಿದ್ದು 434 ರೂಪಾಯಿ  

ಮುಂಬೈ(ಫೆ.26): ಮುಂಬೈ ವಕೀಲರೊಬ್ಬರು ಜನರಿಗೆ ಮಹಾನಗರಗಳಲ್ಲಿ ಕ್ಯಾಬ್‌ ಸೇವೆ ನೀಡುವ ಓಲಾ ಕಂಪನಿ ವಿರುದ್ಧ ಕೇಸ್ ದಾಖಲಿಸಿ ಬರೋಬರಿ 
15,000 ರೂಪಾಯಿ ಪರಿಹಾರ ಪಡೆದಿದ್ದಾರೆ. ಗ್ರಾಹಕನಿಂದ 62 ರೂಪಾಯಿ ಹೆಚ್ಚುವರಿ ವಸೂಲಿ ಮಾಡಿದ್ದಕ್ಕಾಗಿ ಓಲಾ ಕಂಪನಿ 15,000 ರೂಪಾಯಿ ಪರಿಹಾರ ನೀಡುವಂತಾಗಿದೆ. ಮುಂಬೈ ನಿವಾಸಿ, ವಕೀಲರೂ ಆಗಿರುವ 34 ವರ್ಷದ ಶ್ರೇಯನ್‌ ಮಮನಿಯಾ (Shreyans Mamania)ತಮ್ಮ ಕುಟುಂಬದೊಂದಿಗೆ ಕಳೆದ ವರ್ಷ ಜೂನ್‌ 19ರಂದು ಕಂಡಿವಿಲಿಯಿಂದ ಕಾಲಚೌಕಿಗೆ ತಮ್ಮ ಕುಟುಂಬದೊಂದಿಗೆ ತೆರಳಲು ಓಲಾ ಕ್ಯಾಬ್‌ ಬುಕ್‌ ಮಾಡಿದ್ದರು. ಕ್ಯಾಬ್‌ ಬುಕ್ ಮಾಡುವ ಸಂದರ್ಭದಲ್ಲಿ ಓಲಾ ಆಪ್‌ನಲ್ಲಿ ಪ್ರಯಾಣ ದರ 372 ರೂಪಾಯಿ ತೋರಿಸಿತ್ತು. ಆದರೆ ನಿಗದಿತ ಸ್ಥಳ ತಲುಪಿದಾಗ ಕ್ಯಾಬ್ ಚಾಲಕ ಪ್ರಯಾಣ ದರ 434 ರೂಪಾಯಿ ಎಂದು ಹೇಳಿ ಇವರಿಂದ 62 ರೂಪಾಯಿ ಹೆಚ್ಚುವರಿ ವಸೂಲಿ ಮಾಡಿದ್ದ. 


ಈ ವೇಳೆ ವಕೀಲ ಶ್ರೇಯನ್‌ ಮಮನಿಯಾ ಇದು ಹೇಗೆ ಹೀಗಾಯಿತು ಎಂದು ಕ್ಯಾಬ್‌ ಚಾಲಕನನ್ನು ಕೇಳಿದ್ದಾರೆ. ಅದಕ್ಕೆ ಆತ ಈ ರೀತಿ ಆಗುತ್ತಿರುತ್ತದೆ ನೀವು ಏಕೆ ಇದನ್ನು ದೊಡ್ಡ ವಿಷಯವಾಗಿ ಮಾಡುತ್ತಿದ್ದೀರಿ ಎಂದು ಕೇಳಿದ್ದಾನೆ. ಕ್ಯಾಬ್‌ ಚಾಲನ ಈ ಮಾತು ವಕೀಲರಿಗೆ ಕೆಣಕಿದಂತಾಗಿದ್ದು, ಅವರು ಕಸ್ಟಮರ್‌ ಕೇರ್‌ಗೆ ಕರೆ ಮಾಡಿದ್ದಾರೆ. ಆದರೆ ಆ ಕಡೆಯಿಂದ ಅವರಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಅಲ್ಲದೇ ಚಾಲಕ ನೀವು ನನಗೆ ಪೂರ್ತಿ ಹಣ ಪಾವತಿ ಮಾಡದೇ ಇದ್ದರೆ ನನಗೆ ಬರುವ ಹಣದಲ್ಲಿ ಕಡಿತ ಅಗುತ್ತದೆ ಎಂದು ಹೇಳಿದ್ದಾನೆ. ಹೀಗಾಗಿ ವಕೀಲರು ಕೊನೆಗೆ ವಿಧಿ ಇಲ್ಲದೇ ಆತನಿಗೆ 434 ರೂಪಾಯಿ ಪಾವತಿಸಿ ಬಂದಿದ್ದಾರೆ.

Ola Global Center ಎಲೆಕ್ಟ್ರಿಕ್ ವಾಹನದಲ್ಲಿ ಓಲಾ ಕ್ರಾಂತಿ, UKಯಲ್ಲಿ ಫ್ಯೂಚರ್ ಫೌಂಡರಿ ಕೇಂದ್ರಕ್ಕೆ $100 ಮಿಲಿಯನ್ ಹೂಡಿಕೆ!

ಆದರೆ ಈ ವಿಚಾರವನ್ನು ಅಲ್ಲಿಗೆ ಬಿಡದ ವಕೀಲರು ಓಲಾ ಕಸ್ಟಮರ್‌ ಕೇರ್‌ ಜೊತೆ ಸಂಪರ್ಕ ಮಾಡಲು ಯತ್ನಿಸಿದ್ದಾರೆ. ಆದರೆ ಆಗಲೂ ಯಾವುದೇ ಪ್ರತಿಕ್ರಿಯೆ ಓಲಾದಿಂದ ಸಿಕ್ಕಿಲ್ಲ. ಹೀಗಾಗಿ ವಕೀಲರು ಅಂತಿಮವಾಗಿ ಗ್ರಾಹಕರ ವೇದಿಕೆಯನ್ನು ಸಂಪರ್ಕಿಸಲು ಮುಂದಾದರು. ಈ ವೇಳೆ ನನ್ನ ಕುಟುಂಬದವರು ಕೇವಲ 62 ರೂಪಾಯಿಗಾಗಿ ಏಕೆ ಗ್ರಾಹಕರ ವೇದಿಕೆಗೆ ದೂರು ನೀಡುತ್ತಿದ್ದೀರಿ ಇದು ಅಂಥಾ ದೊಡ್ಡ ವಿಷಯವಲ್ಲ ಎಂದರು. 

ಅದಾಗ್ಯೂ ಶ್ರೇಯನ್‌ ಮಮನಿಯಾ ಕಳೆದ ವರ್ಷ ಆಗಸ್ಟ್ 17 ರಂದು ಗ್ರಾಹಕರ ವೇದಿಕೆಗೆ (consumer forum) ದೂರು ನೀಡಿದರು. ನಂತರ ಸೆಪ್ಟೆಂಬರ್‌ 2 ರಂದು ಈ ಪ್ರಕರಣವನ್ನು ಗ್ರಾಹಕರ ವೇದಿಕೆ ಸ್ವೀಕರಿಸಿತ್ತು ಹಾಗೂ ಡಿಸೆಂಬರ್‌ 16 ರಂದು ವಿಚಾರಣೆ ಆರಂಭಿಸಿತ್ತು. 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಶ್ರೇಯನ್‌ ಮಮನಿಯಾ ಬೇಡಿಕೆ ಇರಿಸಿದ್ದರು. ಆದರೆ ಅಷ್ಟೊಂದು ಪರಿಹಾರಕ್ಕೆ ಆಗ್ರಹಿಸುವಷ್ಟು ದೊಡ್ಡ ಪ್ರಕರಣ ಇದಲ್ಲ ಎಂದು ಹೇಳಿದ ಗ್ರಾಹಕರ ವೇದಿಕೆ, ಆದರೆ ಪರಿಹಾರ ಪಡೆಯಲು ಶ್ರೇಯನ್‌ ಮಮನಿಯಾ ಅರ್ಹರು ಎಂದು ಹೇಳಿತ್ತು. ಅಲ್ಲದೇ ಈ ಆದೇಶ ನೀಡಿದ 30 ದಿನಗಳಲ್ಲಿ ಓಲಾ ಕ್ಯಾಬ್ಸ್ ಪರಿಹಾರವಾಗಿ 10,000 ರೂ ಮತ್ತು ದೂರಿನ ವೆಚ್ಚವಾಗಿ 5,000 ರೂಪಾಯಿಯನ್ನು ಶ್ರೇಯನ್‌ ಮಮನಿಯಾಗೆ ಪಾವತಿಸಲು ಆದೇಶಿಸಿತು.

S1 Scooter ಹಾರ್ಡ್ವೇರ್ ಅಪ್ಗ್ರೇಡ್ ಮಾಡಲಿರುವ Ola Electric: ಡೆಲಿವರಿ ಇನ್ನಷ್ಟು ವಿಳಂಬ ಸಾಧ್ಯತೆ!

ತುಂಬಾ ಜನ ಇದು ಕೇವಲ 62 ರೂ ಪಾಯಿ ಎಂದು ಹೇಳುತ್ತಿದ್ದರು. ಆದರೆ ಓಲಾ ಇದನ್ನು ಅರ್ಥಮಾಡಿಕೊಂಡು ಅವರ ಸಾಫ್ಟ್‌ವೇರ್‌ನಲ್ಲಿ ಬದಲಾವಣೆಗಳನ್ನು ಮಾಡುತ್ತದೆ ಎಂದು ಖಚಿತಪಡಿಸಿಕೊಳ್ಳಲು ನಾನು ಬಯಸುತ್ತೇನೆ. ಒಂದು ವೇಳೆ ಇದೇ ರೀತಿ ಪ್ರತಿದಿನ ಓಲಾದ 100 ಗ್ರಾಹಕರಿಗೆ ಹೀಗೆ ಆದರೆ ಇದರಿಂದ ಓಲಾ 5,000 ರೂ. ವಸೂಲಿ ಮಾಡಿದಂತಾಗುತ್ತದೆ. ಬಹುಶ ಇದು ಇನ್ನು ಹೆಚ್ಚಾಗುವ ಸಾಧ್ಯತೆಯೂ ಇರಬಹುದು. ಇದರ ವಿರುದ್ಧ ನಾವು ಹೋರಾಟ ನಡೆಸಬೇಕು ಎಂದು ವಕೀಲರು ಹೇಳಿದರು.