ಪ್ರಖ್ಯಾತ ಬಾಲಿವುಡ್‌ ಚಿತ್ರಗಳಾದ ರಾಮಸೇತು, ಆದಿಪುರುಷ್‌ ಚಿತ್ರಗಳ ಶೂಟಿಂಗ್ ಆಗಿದ್ದ ಮುಂಬೈನ 1 ಸಾವಿರ ಕೋಟಿ ರೂಪಾಯಿ ವೆಚ್ಚದ ಫಿಲ್ಮ್‌ ಸ್ಟುಡಿಯೋವನ್ನು ಬ್ರಹ್ಮುಂಬಯಿ ಮಹಾನಗರ ಪಾಲಿಕೆ ಬುಲ್ಡೋಜರ್‌ ಬಳಸಿ ಧ್ವಂಸ ಮಾಡಿದೆ. 

ಮುಂಬೈ (ಏ.7): ಬರೋಬ್ಬರಿ 1 ಸಾವಿರ ಕೋಟಿ ರೂಪಾಯಿ ಬೆಲೆಬಾಳುವ ಫಿಲ್ಮ್‌ ಸ್ಟುಡಿಯೋವನ್ನು ಬ್ರಹ್ಮುಂಬಯಿ ಮಹಾನಗರ ಪಾಲಿಕೆ ಶುಕ್ರವಾರ ಬುಲ್ಡೋಜರ್‌ ಬಳಸಿ ಧ್ವಂಸ ಮಾಡಿದೆ. ಮುಂಬೈನ ಮಧ್‌ ಪ್ರದೇಶದಲ್ಲಿ ಸಮುದ್ರಮುಖಿಯಾಗಿ ನಿರ್ಮಾಣವಾಗಿದ್ದ ಐಷಾರಾಮಿ ಫಿಲ್ಮ್‌ ಸ್ಟುಡಿಯೋದಲ್ಲಿ ಅಕ್ಷಯ್‌ ಕುಮಾರ್‌ ಅಭಿನಯದ ರಾಮಸೇತು, ಆದಿಪುರುಷ್‌ ಚಿತ್ರಗಳ ಶೂಟಿಂಗ್‌ ನಡೆದಿತ್ತು. ಇದು ಅಕ್ರಮವಾಗಿ ಕಟ್ಟಿರುವ ಸ್ಟೂಡಿಯೋ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಸಂಸದ ಕಿರೀಟ್‌ ಸೋಮಯ್ಯ ಬಿಎಂಸಿಗೆ ದೂರು ದಾಖಲು ಮಾಡಿದ್ದರು. ಮಾಜಿ ಸಚಿವರಾದ ಆದಿತ್ಯ ಠಾಕ್ರೆ ಮತ್ತು ಅಸ್ಲಾಂ ಶೇಖ್ ಅವರ ಸೂಚನೆಯ ಮೇರೆಗೆ ಈ ಅಕ್ರಮ ಸ್ಟುಡಿಯೋ ನಿರ್ಮಿಸಲಾಗಿದೆ ಎಂದು ಅವರು ಆರೋಪ ಮಾಡಿದ್ದರು. 5 ಲಕ್ಷ ಚದರ ಅಡಿಗಳಷ್ಟು ವಿಸ್ತಾರವಾಗಿರುವ ಈ ಹೈಟೆಕ್ ಸ್ಟುಡಿಯೋವನ್ನು 2021 ರಲ್ಲಿ ನಿರ್ಮಾಣ ಮಾಡಲಾಗಿತ್ತು. ಇದರ ನಿರ್ಮಾಣಕ್ಕೆ 1 ಸಾವಿರ ಕೋಟಿಗಿಂತಲೂ ಅಧಿಕ ವೆಚ್ಚವಾಗಿದೆ ಎಂದು ಹೇಳಲಾಗಿದೆ. ಸಾಕಷ್ಟು ಬಿಗ್‌ ಬಜೆಟ್‌ ಸಿನಿಮಾದ ಶೂಟಿಂಗ್‌ ಕೂಡ ಇಲ್ಲಿ ನಡೆದಿತ್ತು. 150 ಕೋಟಿ ವೆಚ್ಚದ ರಾಮಸೇತು ಹಾಗೂ 600 ಕೋಟಿ ರೂಪಾಯಿ ವೆಚ್ಚದ ಆದಿಪುರುಷ್‌ ಸಿನಿಮಾದ ಶೂಟಿಂಗ್‌ಗಳು ಇಲ್ಲಿ ನಡೆದಿದ್ದವು ಎನ್ನಲಾಗಿದೆ.

ಬೆಳಗ್ಗೆ 11 ಗಂಟೆ ಸುಮಾರಿಗೆ ಬಿಜೆಪಿ ಮುಖಂಡ ಕಿರೀಟ್ ಸೋಮಯ್ಯ ಸ್ಟುಡಿಯೋಗೆ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಠಾಕ್ರೆ ಸರ್ಕಾರದ ಭ್ರಷ್ಟಾಚಾರದ ಸ್ಮಾರಕ ಇಂದು ಧ್ವಂಸಗೊಂಡಿದೆ. ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಈ ಸ್ಟುಡಿಯೋವನ್ನು ಮಾಜಿ ಸಚಿವರಾದ ಆದಿತ್ಯ ಠಾಕ್ರೆ ಮತ್ತು ಅಸ್ಲಂ ಶೇಖ್ ಅವರ ಸೂಚನೆಯಿಂದ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ. ಈ ನಿರ್ಮಾಣದ ವಿರುದ್ಧ ಎರಡು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೆವು ಎಂದು ಮಾಹಿತಿ ನೀಡಿದ್ದಾರೆ.

ಏನಿದು ವಿವಾದ: ಕಿರೀಟ್ ಸೋಮಯ್ಯ ಅವರು ಮಲಾಡ್‌ನಲ್ಲಿರುವ 49 ಅಕ್ರಮ ಸ್ಟುಡಿಯೋಗಳು ಮತ್ತು 22 ಅಕ್ರಮ ಬಂಗಲೆಗಳನ್ನು ನೆಲಸಮ ಮಾಡುವಂತೆ ಬಿಎಂಸಿಗೆ ಒತ್ತಾಯಿಸಿದ್ದರು. ಆದರೆ, ಕಿರೀಟ್‌ ಅವರ ಆರೋಪದ ಕುರಿತಾಗಿ ಬಿಎಂಪಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅಂದಿನ ಸಚಿವರು ಹಾಗೂ ಅಧಿಕಾರಿಗಳು ಈ ವಿಚಾರದಲ್ಲಿ ಕಣ್ಣು ಮುಚ್ಚಿ ಕುಳಿತಿದ್ದರು ಎಂದು ಸೋಮಯ್ಯ ಆರೋಪಿಸಿದ್ದಾರೆ. ಸ್ಟುಡಿಯೋ ಮಾಡುವಾಗ ನಗರಸಭೆಯಿಂದ ಅನುಮತಿಯನ್ನೂ ಪಡೆದಿಲ್ಲ. ಇದಾದ ಬಳಿಕ ಸ್ಟುಡಿಯೋ ಸುತ್ತಮುತ್ತಲೂ ಅನೇಕ ಅಕ್ರಮ ನಿರ್ಮಾಣಗಳು ನಡೆದಿವೆ ಎಂದು ಹೇಳಿದ್ದಾರೆ.

Scroll to load tweet…

Viral Post: ಪ್ರಯಾಣಿಕರಿಗೆ ಉಚಿತ ಬಿಸ್ಕತ್, ವಾಟರ್ ಬಾಟಲ್ ಫ್ರೀ ನೀಡೋ ಚಾಲಕ!

ಇದು ಠಾಕ್ರೆಯ ಸ್ಟುಡಿಯೋ ಮಾಫಿಯಾ: ಈ ಸ್ಟುಡಿಯೋ ಠಾಕ್ರೆ ಸರ್ಕಾರದ ಸ್ಟುಡಿಯೋ ಮಾಫಿಯಾದ ಭಾಗವಾಗಿದೆ ಎಂದು ಕಿರೀಟ್ ಸೋಮಯ್ಯ ಹೇಳಿದ್ದಾರೆ. 2021 ರಲ್ಲಿ ಈ ಸ್ಟುಡಿಯೋ ಜೊತೆಗೆ ಹತ್ತಾರು ಇತರ ಸ್ಟುಡಿಯೋಗಳನ್ನು ನಿರ್ಮಿಸಲಾಗಿದೆ. ನಾವು ಎರಡು ವರ್ಷಗಳಿಂದ ಸ್ಟುಡಿಯೋ ಮಾಫಿಯಾ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದೇವೆ. ಅಂತಿಮವಾಗಿ ನ್ಯಾಯಾಲಯದ ಆದೇಶದ ಮೇರೆಗೆ ಅದನ್ನು ಕೆಡವಲಾಯಿತು. ಇತರೆ ಅಕ್ರಮ ನಿರ್ಮಾಣಗಳ ವಿರುದ್ಧ ನಮ್ಮ ಸಮರ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಮಗಳ ಜೊತೆ ಮೊದಲ ಬಾರಿಗೆ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?

ಮಾಹಿತಿ ಟ್ವೀಟ್‌ ಮಾಡಿದ್ದ ಕಿರೀಟ್‌: ಶುಕ್ರವಾರ ಸ್ಟುಡಿಯೋವನ್ನು ಕೆಡವುವ ಮುನ್ನ, ಕಿರೀಟ್‌ ಸೋಮಯ್ಯ ಅವರು ಗುರುವಾರ ಟ್ವೀಟ್‌ನಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಇಂದು ಮಧ್‌ನಲ್ಲಿರುವ 1000 ಕೋಟಿ ರೂಪಾಯಿ ಮೌಲ್ಯದ ಅನಧಿಕೃತ ಸ್ಟುಡಿಯೊವನ್ನು ಕೆಡವಲು ಆದೇಶ ನೀಡಿದೆ. ಅಸ್ಲಾಂ ಶೇಖ್ ಮತ್ತು ಆದಿತ್ಯ ಠಾಕ್ರೆ ಅವರ ಕೃಪೆಯಿಂದ 2021 ರಲ್ಲಿ ಹತ್ತಾರು ಅನಧಿಕೃತ ಸ್ಟುಡಿಯೋಗಳನ್ನು ನಿರ್ಮಿಸಲಾಯಿತು. ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಿದ್ದೆವು ಎಂದು ಟ್ವೀಟ್‌ ಮಾಡಿದ್ದರು.