ಮುಂಬೈ(ಏ.12): ಕೋಟ್ಯಧಿಪತಿ ಮುಕೇಶ್‌ ಅಂಬಾನಿ ಮನೆ ಮುಂದೆ ಸ್ಫೋಟಕ ತುಂಬಿದ್ದ ಕಾರು ಪತ್ತೆಯಾದ ಪ್ರಕರಣ ಸಂಬಂಧ ಅಮಾನತುಗೊಂಡ ಪೊಲೀಸ್‌ ಅಧಿಕಾರಿ ಸಚಿನ್‌ ವಾಝೆ ಸಹಚರ ರಿಯಾಜ್‌ ಕಾಜಿ ಎಂಬವರನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಭಾನುವಾರ ಬಂಧಿಸಿದೆ.

‘ಸಹಾಯಕ ಪೊಲೀಸ್‌ ಇನ್‌ಸ್ಪೆಕ್ಟರ್‌ (ಎಪಿಐ) ಕಾಜಿ ಅವರನ್ನು ಎನ್‌ಐಎ ಭಾನುವಾರ ವಿಚಾರಣೆಗೆ ಕರೆದಿತ್ತು. ನಂತರ ಕಾಜೆ ಅವರನ್ನು ಬಂಧಿಸಲಾಯಿತು. ಏ.16ರ ವರೆಗೂ ಇವರನ್ನು ಎನ್‌ಐಎ ವಿಚಾರಣೆ ನಡೆಸಲಿದೆ’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದಲ್ಲಿ ವಾಝೆ ಅವರೊಂದಿಗೆ ಕೈಜೋಡಿಸಿದ್ದಲ್ಲದೆ, ಪ್ರಕರಣದ ಸಾಕ್ಷ್ಯ ನಾಶಕ್ಕೆ ಕಾಜಿ ಯತ್ನಿಸಿದ್ದಾಗಿ ಎನ್‌ಐಎ ಆರೋಪಿಸಿದೆ.

ಕಳೆದ ಫೆ.25ರಂದು ಕೋಟ್ಯಧಿಪತಿ ಮುಕೇಶ್‌ ಅಂಬಾನಿ ಅವರ ಮುಂಬೈ ನಿವಾಸದ ಮುಂದೆ ಭಾರೀ ಸ್ಫೋಟಕ ತುಂಬಿದ್ದ ಕಾರು ಪತ್ತೆಯಾಗಿತ್ತು. ಈ ಘಟನೆ ಬೆನ್ನಲ್ಲೇ ಆ ಕಾರಿನ ಮಾಲೀಕ ಮನ್ಸುಖ್‌ ಹಿರೇನ್‌ ಹತ್ಯೆಯಾಗಿತ್ತು