Muslim Woman In Maha Kumbh 2025: ಮುಂಬೈ ಮೂಲದ 22 ವರ್ಷದ ಮುಸ್ಲಿಂ ಯುವತಿ ಶಬನಮ್ ಶೇಖ್ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾಗವಹಿಸಿದ್ದಾರೆ.
ಪ್ರಯಾಗ್‌ರಾಜ್: ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವನ್ನು ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿದೆ. ಮಹಾಕುಂಭ ಮೇಳಕ್ಕೆ ಆಗಮಿಸಿರುವ ನಾಗಾ ಸಾಧು ಮತ್ತು ಸಾಧ್ವಿಯವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸ್ಟೀವ್ ಜಾಬ್ ಪತ್ನಿ ಸೇರಿದಂತೆ 21 ದೇಶದ ಪ್ರಮುಖರು ಅಮೃತಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ. ಇದೀಗ ಮುಂಬೈ ಮೂಲದ ಮುಸ್ಲಿಂ ಮಹಿಳೆ ಮಹಾಕುಂಭಮೇಳದಲ್ಲಿ ಭಾಗಿಯಾಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. 22 ವರ್ಷದ ಶಬನಮ್ ಶೇಖ್ ಎಂಬವರು ಮಹಾಕುಂಭದಲ್ಲಿ ಭಾಗಿಯಾಗಿದ್ದಾರೆ. 22 ವರ್ಷದ ಶಬ್ನಮ್ ಶೇಖ್ ಅವರನ್ನು ಮಹಾಕುಂಭ ಪ್ರದೇಶದಲ್ಲಿ ತಿಲಕ ಮತ್ತು ಪುಷ್ಪವೃಷ್ಟಿಯೊಂದಿಗೆ ಸ್ವಾಗತಿಸಲಾಯಿತು. ಸನಾತನ ಧರ್ಮ, ಶ್ರೀಮದ್ ಭಗವತ್ ಗೀತೆ ಮತ್ತು ಯೋಗವನ್ನು ಸಂತರ ಸಹವಾಸದಲ್ಲಿ ಅಧ್ಯಯನ ಮಾಡುವ ಬಯಕೆಯನ್ನು ಶಬನಮ್ ವ್ಯಕ್ತಪಡಿಸಿದ್ದಾರೆ.
ಯಾರು ಈ ಶಬನಮ್ ಶೇಖ್?
ಶಬನಮ್ ಶೇಖ್ ಮೂಲತಃ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯವರು. ಆದ್ರೆ ಕಳೆದ ಹಲವು ವರ್ಷಗಳಿಂದ ಕುಟುಂಬದೊಂದಿಗೆ ಶಬನಮ್ ಮುಂಬೈನಲ್ಲಿ ವಾಸವಾಗಿದ್ದಾರೆ. ಇದೀಗ ಮುಂಬೈನಿಂದ ಮಹಾಕುಂಭಕ್ಕೆ ಆಗಮಿಸಿದ್ದಾರೆ. ಮುಂಬೈನಲ್ಲಿ 12ನೇ ತರಗತಿಯವರೆಗೆ ಓದಿರುವ ಶಬನಮ್, ಹಿಂದಿ, ಮರಾಠಿ, ಇಂಗ್ಲಿಷ್ ಮತ್ತು ಅರೇಬಿಕ್ ಭಾಷೆಯ ಜ್ಞಾನವನ್ನು ಹೊಂದಿದ್ದಾರೆ.
ಮಹಾಕುಂಭದ ಸೆಕ್ಟರ್ 16 ನಲ್ಲಿರುವ ಅಯೋಧ್ಯೆ ತಪಸ್ವಿ ಶಿಬಿರಕ್ಕೆ ಆಗಮಿಸಿದ ಶಬನಮ್ ಅವರನ್ನು ಪೀಠಾಧೀಶ್ವರ ಪರಮಹಂಸ ಆಚಾರ್ಯರು ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಪೀಠಾಧೀಶ್ವರ ಪರಮಹಂಸ ಆಚಾರ್ಯರು, ನಿಜವಾದ ನಂಬಿಕೆ ಮತ್ತು ಮನಸ್ಥಿತಿಯೊಂದಿಗೆ ಬರುವವರಿಗೆ ಸ್ವಾಗತ ಎಂದು ಹೇಳಿದರು.
ಶಬನಮ್ ಶೇಖ್ ಹೇಳಿದ್ದೇನು?
ಸನಾತನ ಧರ್ಮದ ಸಮಾನತೆ ಮತ್ತು ಮಹಿಳೆಯರನ್ನು ದೇವತೆಯಂತೆ ಪೂಜಿಸುವ ಸಂಪ್ರದಾಯದಿಂದ ತಾನು ತುಂಬಾ ಪ್ರಭಾವಿತಳಾಗಿದ್ದೇನೆ. ನಾನು ಬಹಳ ದಿನಗಳಿಂದ ಶ್ರೀಮದ್ ಭಗವತ್ ಗೀತೆಯನ್ನು ಓದುತ್ತಿದ್ದೇನೆ ಮತ್ತು ಯೋಗಾಭ್ಯಾಸ ಮಾಡುತ್ತಿದ್ದೇನೆ. ಮಹಾಕುಂಭಕ್ಕೆ ಬಂದ ನಂತರ ನನಗಾದ ಅನುಭವವನ್ನು ಪದಗಳಲ್ಲಿ ಹೇಳುವುದು ಕಷ್ಟ. ಸಂಗಮನಗರಕ್ಕೆ ಬಂದ ಮೇಲೆ ನನ್ನಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ಶಬನಮ್ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕುಂಭಮೇಳದ ವಿಚಿತ್ರ ಸಾಧುಗಳು: 32 ವರ್ಷಗಳಿಂದ ಕೈ ಎತ್ತಿರುವ ಸಾಧು, ಸ್ನಾನವನ್ನೇ ಮಾಡದ ಬಾಬಾ!
ಮುಸ್ಲಿಂ ಆಗಿರುವ ಕಾರಣ ಮಹಾಕುಂಭದಲ್ಲಿ ಪಾಲ್ಗೊಳ್ಳಲು ಭಯವಾಗಿತ್ತು ಎಂದು ಸ್ವತಃ ಶಬನಮ್ ಹೇಳುತ್ತಾರೆ. ಆದರೆ ಇಲ್ಲಿಗೆ ಬಂದ ನಂತರ ಹೆಚ್ಚಿನ ಪ್ರೀತಿ ಮತ್ತು ಗೌರವ ಸಿಕ್ಕಿತು. 144 ವರ್ಷಗಳ ನಂತರ ಆಯೋಜಿಸಿರುವ ಈ ಮಹಾಕುಂಭದಲ್ಲಿ ಭಾಗಿಯಾಗಿರುವುದು ನನಗೆ ಹೆಮ್ಮೆಯ ಕ್ಷಣವಾಗಿದೆ. ನನ್ನ ನಿರ್ಧಾರದ ಬಗ್ಗೆ ನನ್ನ ಪೋಷಕರು ಹೆದರುತ್ತಿದ್ದರು. ಆದರೆ ಈಗ ಎಲ್ಲವೂ ಸರಿಯಾಗಿದೆ. ಶಬನಮ್ ಶೇಖ್ ಆಗಿರುವ ನಾನು ರಾಮ ಮತ್ತು ಕೃಷ್ಣನನ್ನು ಪೂಜಿಸಬಹುದು ಎಂಬ ವಿಷಯವನ್ನು ಶಬನಮ್ ಹಂಚಿಕೊಂಡರು.
ಶಬನಮ್ ಶೇಖ್ ಅವರ ಕಥೆಯು ಮಹಾಕುಂಭದ ಮೂಲಕ ಸನಾತನ ಧರ್ಮದ ಸಮಾನತೆ, ಮಹಿಳಾ ಶಕ್ತಿ ಮತ್ತು ಸಾರ್ವತ್ರಿಕತೆಯ ಸಂದೇಶವನ್ನು ನೀಡುತ್ತದೆ. ಇದು ಶಬನಮ್ ಅವರ ಸಂಗಮ ಸ್ನಾನ ಮತ್ತು ಧಾರ್ಮಿಕ ಅನುಭವವು ಸ್ಫೂರ್ತಿಯ ಮೂಲವಾಗಿದೆ.
ಇದನ್ನೂ ಓದಿ: ಕುಂಭಮೇಳದಲ್ಲಿ ದಿಢೀರ್ ಪ್ರತ್ಯಕ್ಷರಾಗಿ, ಮುಗಿಯುತ್ತಿದ್ದಂತೆ ಎಲ್ಲಿ ಅದೃಶ್ಯರಾಗ್ತಾರೆ ಈ ನಾಗಸಾಧುಗಳು?!
